ಇಂದು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಸಭೆಯಲ್ಲಿ ಅಚ್ಚರಿಯ ವಿಷಯ ಬಹಿರಂಗವಾಗಿದೆ ಎಂದು ತಿಳಿದು ಬಂದಿದೆ.
ಅಧಿಕಾರಿಗಳ ಸಭೆಯಲ್ಲಿ ಉಪಸ್ಥಿತರಿದ್ದ ಡಿಸಿ ಡಾ ಎಂ ಅರ್ ರವಿ , 24 ಜನರ ಸಾವಿಗೆ ಕಾರಣವಾದ ಅಂಶಗಳನ್ನು ಸಿದ್ದರಾಮಯ್ಯಗೆ ವಿವರಿಸಿದ್ದಾರೆ. ಈ 24 ಸಾವಿಗೆ ಆಮ್ಲಜನಕ ಕೊರತೆಯೇ ಕಾರಣ ಎಂದು ಡಿಸಿ ಸಿದ್ದರಾಮಯ್ಯನವರ ಮುಂದೆ ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. ಉತ್ತರ ಕೊಡಲು ತಡಬಡಾಯಿಸುತ್ತಿದ್ದ ಜಿಲ್ಲಾ ಸರ್ಜನ್ ಹಾಗೂ ಗೊಂದಲದ ಉತ್ತರ ಕೊಡುತ್ತಿದ್ದ ಡೀನ್ ಸಂಜೀವ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ನನ್ನನ್ನು ಕನ್ಫ್ಯೂಸ್ ಮಾಡಬೇಡಿ, ನೀವು ಹೇಳಿದನ್ನೆಲ್ಲ ಕೇಳಲು ನಿಮ್ಮ ಸಚಿವನಲ್ಲ. ನಾನೇನೂ ಇಲ್ಲಿ ಶಿಕ್ಷೆ ಕೊಡಲು ಬಂದಿಲ್ಲ, ಏನಾಯಿತೆಂದು ನಿಜಾಂಶ ಹೇಳಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಆದರೆ, ಸಾವಿನ ವಿಚಾರದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಅವರ ಹೇಳಿಕೆ ಇದಕ್ಕೆ ತದ್ವಿರುದ್ದವಾಗಿತ್ತು.”ಇಷ್ಟು ದೊಡ್ಡ ಪ್ರಮಾಣದಲ್ಲಿ ಆಮ್ಲಜನಕದ ಕೊರತೆ ಹಿಂದೆ ಎಂದೂ ಎದುರಾಗಿರಲಿಲ್ಲ. ಸಕಾಲದಲ್ಲಿ ಆಕ್ಸಿಜನ್ ಸಿಗದೇ ಮೂರು ಜನ ಸಾವನ್ನಪ್ಪಿದ್ದಾರೆ. ಸರಕಾರ ಮುಂದೆ ಇಂತಹ ತೊಂದರೆಯಾಗದಂತೆ ಎಚ್ಚರ ವಹಿಸುತ್ತದೆ” ಎಂದು ಸಚಿವ ಸುಧಾಕರ್ ಹೇಳಿಕೆ ಕೊಟ್ಟಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ “ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಿರುವ ಆಕ್ಸಿಜನ್, ಬೆಡ್ಗಳು, ವೈದ್ಯರು ಸೇರಿದಂತೆ ವಿವಿಧ ವೈದ್ಯಕೀಯ ಸವಲತ್ತುಗಳನ್ನು ಪೂರೈಕೆ ಮಾಡಬೇಕಾದುದ್ದು ರಾಜ್ಯ ಸರ್ಕಾರದ ಜವಾಬ್ದಾರಿ, ಈ ಜವಾಬ್ದಾರಿಯನ್ನು ನಿಭಾಯಿಸುವಲ್ಲಿಸರ್ಕಾರ ವಿಫಲವಾಗಿರುವುದೇ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳ ಸಾವಿಗೆ ಕಾರಣ”ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
“ಚಾಮರಾಜನಗರ ಜಿಲ್ಲಾಧಿಕಾರಿಗಳು ಹಾಗೂ ವೈದ್ಯಾಧಿಕಾರಿಗಳೊಂದಿಗಿನ ಸಭೆಯಲ್ಲಿ ಈ ಬಗ್ಗೆ ನಾನು ಪ್ರಶ್ನಿಸಿದಾಗ “ರೋಗಿಗಳ ಸಾವಿಗೆ ಆಕ್ಸಿಜನ್ ಕೊರತೆಯೇ ಕಾರಣ, ನಾವು ಆಕ್ಸಿಜನ್ ವ್ಯವಸ್ಥೆ ಮಾಡುವ ಎಷ್ಟೇ ಪ್ರಯತ್ನ ಮಾಡಿದರೂ ಅದರಿಂದ ಪ್ರಯೋಜನವಾಗಿಲ್ಲ” ಎಂಬ ಸತ್ಯಸಂಗತಿಯನ್ನು ಅಧಿಕಾರಿಗಳು ಹೇಳಿದ್ದಾರೆ. ಇದಕ್ಕೆ ಸಚಿವ ಸುಧಾಕರ್ ಏನಂತಾರೆ”ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಇದಾದ ನಂತರ ಮತ್ತೊಂದು ಬೆಳವಣಿಗೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ 24 ರೋಗಿಗಳ ಸಾವು ಪ್ರಕರಣಕ್ಕೆ ಮೈಸೂರು ಜಿಲ್ಲಾಧಿಕಾರಿ ಅವರೇ ನೇರ ಕಾರಣ ಎಂದು ಚಾಮರಾಜನಗರ ಡಿಸಿ ಎಂ.ಆರ್.ರವಿ ಆರೋಪಿಸಿದ್ದಾರೆ. ನಮಗೆ ಸರಬರಾಜು ಆಗುವ ಆಕ್ಷಿಜನ್ ನಲ್ಲಿ ಅವರು ಮದ್ಯ ಪ್ರವೇಶಿಸಿ ಸರಬರಾಜಿನಲ್ಲಿ ವ್ಯತ್ಯಯ ಆಗುವಂತೆ ಮಾಡಿದ್ದಾರೆ ಎಂದ ಅವರು ಆಕ್ಸಿಜನ್ ಪೂರೈಕೆ ಆಗಿದ್ದರೆ ಅಮೂಲ್ಯ ಜೀವ ಉಳಿಸಬಹುದಿತ್ತು. ಮೈಸೂರಿಗೆ ಡಿಸಿಯಾಗಿರುವ ರೋಹಿಣಿ ಸಿಂಧೂರಿ ಅವರು ಚಾಮರಾಜನಗರದ ಜಿಲ್ಲಾಡಳಿತದ ವಿಷಯದಲ್ಲಿ ಮೂಗು ತೂರಿಸಬಾರದು, ರಾಜ್ಯ ಸರ್ಕಾರ ಸಿಂಧೂರಿ ಅವರನ್ನು ನೋಡಲ್ ಆಫೀಸರ್ ಆಗಿ ನೇಮಕ ಮಾಡಿಲ್ಲ ಎಂದು ವಿ ಎಂ.ಆರ್.ರವಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಕ್ಸಿಜನ್ ಸರಬರಾಜು ಆಗದೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಅಂತಾ ತಿಳಿದ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು, ನೋಡಲ್ ಅಧಿಕಾರಿ ಮತ್ತು ಮುಖ್ಯ ಕಾರ್ಯದರ್ಶಿ ಅವರಿಗೆ ಮಾಹಿತಿ ನೀಡಿದೆ. ಮೈಸೂರು ಜಿಲ್ಲಾಧಿಕಾರಿ ಸುಳ್ಳು ಮಾಹಿತಿ ನೀಡಿ ಜನರನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ನಮ್ಮ ಸಿಲಿಂಡರ್ ಇರುವ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ನಮ್ಮ ಬಳಿ ದಾಖಲೆ ಇದೆ. 10 ಗಂಟೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು, ಹಿಂದಿನ ದಿನದಿಂದ ಆಕ್ಸಿಜನ್ ನೀಡಲು ಮೀನಾಮೇಷ ಎಣಿಸಿದ್ದಾರೆ. ಮೈಸೂರಿನಿಂದ ಸರಬರಾಜು ಮಾಡುವವರಿಗೆ ಮೈಸೂರು ಡಿಸಿಯಿಂದ ಅನುಮತಿ ಪಡೆಯಬೇಕು ಅಂತಾ ಆದೇಶ ನೀಡಿದ್ದಾರೆ. ಅವರು ಒಂದು ದೊಡ್ಡ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಅವರ ವ್ಯಾಪ್ತಿಯಲ್ಲಿ ತೀರ್ಮಾನ ಕೈಗೊಳ್ಳಲಿ ಬೇರೆ ಜಿಲ್ಲೆಯ ವ್ಯವಹಾರಕ್ಕೆ ತಲೆ ಹಾಕಬಾರದಿತ್ತು ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಅವರು ವಿವರಿಸಿದರು.
ಪ್ರತಿನಿತ್ಯ ನಮ್ಮ ವಾಹನ ಮೈಸೂರಿಗೆ ಹೋಗಿ ಗಂಟೆಗಟ್ಟಲೆ ಕಾಯೋದು, ಅವರು ಕೊಟ್ಟಾಗ ತೆಗೆದುಕೊಂಡು ಬರುವುದು ಆಗುತಿತ್ತು. ನಮಗೆ ಬೇಕಾದ ಆಕ್ಸಿಜನ್ ನ್ನು ಮತ್ತೊಬ್ಬ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ತರಬೇಕು ಅನ್ನೋದು ಯಾವ ನ್ಯಾಯ ? ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಇವರನ್ನು ನೋಡಲ್ ಅಧಿಕಾರಿಯಾಗಿ ಅಲ್ಲ ಅಥವಾ ಸುತ್ತಮುತ್ತಲಿನ ಜಿಲ್ಲೆಗಳ ಉಸ್ತುವಾರಿ ಸಹಾ .ಅಲ್ಲ ಈ ಸಮಸ್ಯೆ ಬಗ್ಗೆ ನಾನು ಸಿಎಸ್ ಅವರಿಗೆ ಹೇಳಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರಿಗೂ ಹೇಳಿದ್ದೆ. ಅವರೇ ಈ ರೀತಿ ಮಾಡದಂತೆ ನಿರ್ದೇಶನ ನೀಡುತ್ತೇನೆ ಅಂತಾ ಹೇಳಿದ್ದರು. ಖುದ್ದು ಮುಖ್ಯ ಮಂತ್ರಿಗಳೇ ಮೈಸೂರು ಡಿಸಿಗೆ ನಿರ್ದೇಶನ ನೀಡಿದ್ದರು. ಆದರೂ ರೋಹಿಣಿ ಸಿಂಧೂರಿ ನಮ್ಮ ಜಿಲ್ಲೆ ಬಗ್ಗೆ ಯಾಕೆ ಈ ರೀತಿ ಮಾಡಿದರು ಗೊತ್ತಾಗುತ್ತಿಲ್ಲ ಎಂದರು.
ಈ ನಡುವೆ ಇಂದು ಕೋವಿಡ್ ಸೋಂಕು ನಿಯಂತ್ರಣ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಹಾಗೂ ಹಿರಿಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ಕೇಂದ್ರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ಮಧ್ಯಾಹ್ನದ ಕಲಾಪದ ವೇಳೆ ಕೇಂದ್ರದ ಪರ ವಕೀಲರು ರಾಜ್ಯಕ್ಕೆ ಹೆಚ್ಚಿನ ಆಕ್ಸಿಜನ್ ಪೂರೈಸುವ ಸಂಬಂಧ ನಿರ್ಧಾರ ಕೈಗೊಳ್ಳಲು ಸಮಯಾವಕಾಶ ನೀಡಬೇಕು ಎಂದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ ಚಾಮರಾಜನಗರ, ಕಲಬುರಗಿಯಲ್ಲಿ ಆಕ್ಸಿಜನ್ ಸಿಗದೆ ರೋಗಿಗಳು ಸಾವನ್ನಪ್ಪಿದ್ದಾರೆ. ಆಕ್ಸಿಜನ್ ಸಿಗದೆ ಮತ್ತಷ್ಟು ಕೋವಿಡ್ ರೋಗಿಗಳು ಸಾವನ್ನಪ್ಪಬೇಕು ಎಂದು ಪ್ರಶ್ನಿಸಿತು. ಜೊತೆಗೆ ರಾಜ್ಯದಲ್ಲಿ ಕೋವಿಡ್ ಮಿತಿ ಮೀರುತ್ತಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಯನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ನ್ಯಾಯಾಲಯವೇ ಈ ಸಂಬಂಧ ಆದೇಶ ಹೊರಡಿಸಲಿದೆ. ಕೇಂದ್ರ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿ, ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.