ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಕೊರತೆ ಹಿನ್ನಲೆಯಲ್ಲಿ ಕಾಂಗ್ರೆಸ್ಗೆ ಇದು ಶುಭಶಕುನವಲ್ಲ ಎಂದು ಬಿಜೆಪಿ ಶಾಸಕ ಬಿ.ವೈ. ವಿಜಯೇಂದ್ರ ಟ್ವೀಟ್ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಕಸರತ್ತಿನಲ್ಲಿ ಕಳೆದು ಹೋಗಿದೆ, ಸರ್ಕಾರಕ್ಕೆ ಶುಭ ಶಕುನವೇಕೋ ‘ಕೈ’ ಹಿಡಿದಂತಿಲ್ಲ. ರಾಜ್ಯದಲ್ಲಿ ವರುಣನ ಅವಕೃಪೆ ಇಡೀ ರಾಜ್ಯವನ್ನು ಆವರಿಸಿದೆ. ಬರಗಾಲ ತನ್ನ ಕೆನ್ನಾಲಿಗೆ ಚಾಚಲು ಆರಂಭಿಸಿದೆ. ನೀರಿಲ್ಲದೆ ತತ್ತರಿಸಿರುವ ಮಹಿಳೆಯರು ಆಕ್ರೋಶಿತರಾಗಿದ್ದಾರೆ. ಮುಂಜಾಗ್ರತೆ ವಹಿಸದಿದ್ದರೆ, ಉದ್ಭವಿಸುವ ಭೀಕರತೆಗೆ ಸರ್ಕಾರವೇ ಹೊಣೆಯಾಗಲಿದೆ ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ.
ಪ್ರಸಕ್ತ ತಿಂಗಳಲ್ಲಿ ಮಳೆ ಕೊರತೆ

ಅಂದಹಾಗೆ ಆರಂಭದಲ್ಲೇ ಮಾನ್ಸೂನ್ ದುರ್ಬಲಗೊಂಡ ಪರಿಣಾಮ ಪ್ರಸಕ್ತ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಜೂ 1ರಿಂದ ಜೂ 18ರವರೆಗೆ ರಾಜ್ಯಾದ್ಯಂತ ವಾಡಿಕೆಯಂತೆ 109 ಮಿಮೀ ಮಳೆ ಆಗಬೇಕಿತ್ತು. ಆದರೆ, 32 ಮಿಮೀ ಮಳೆಯಾಗಿದ್ದು, ಶೇ.71 ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಮೂರ್ನಾಲ್ಕು ವರ್ಷಗಳಿಂದ ಮಳೆ ದಿನಗಳು ಬದಲಾಗುತ್ತಿರುವ ಕಾರಣ 2020 ಮತ್ತು 2022ರ ಜೂನ್ನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆ ಬಿದ್ದಿದೆ.
2021ರ ಜೂನ್ನಲ್ಲಿ ಮಾತ್ರ ವಾಡಿಕೆಯಷ್ಟೇ ಮಳೆ ಸುರಿದಿದೆ. ಆದರೆ, ಮೂರು ವರ್ಷಗಳಿಂದಲೂ ಕರಾವಳಿ,ಮಲೆನಾಡು ಜಿಲ್ಲೆಗಳಲ್ಲಿ ಮಳೆ ಕುಂಠಿತವಾಗುತ್ತಿದೆ. ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವಾಡಿಕೆಗಿಂತ ತುಸು ಹೆಚ್ಚು ಮಳೆ ಸುರಿದಿದ್ದರೂ ಸರಿಯಾಗಿ ಸಮಯಕ್ಕೆ ಮಳೆ ಬರದಂತಾಗಿದೆ