

ಲಾಳನಕೆರೆ ರಾಮೇಗೌಡ ಶಿವರಾಮೇಗೌಡ, ಇದೀಗ ಭಾರೀ ಚರ್ಚೆ ಆಗುತ್ತಿರುವ ನಾಯಕನ ಹೆಸರು. ಪ್ರಜ್ವಲ್ ರೇವಣ್ಣನ ವಿಡಿಯೋ ಬಗ್ಗೆ ಪುಂಕಾನುಪುಂಕವಾಗಿ ಮಾತನಾಡುವುದಲ್ಲದೆ, ವಕೀಲ ದೇವರಾಜೇಗೌಡ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ನಡುವೆ ಮಧ್ಯಸ್ಥಿತಿಕೆ ಮಾಡಿಸಲು ಹೋಗಿ ಆಡಿಯೋ, ವಿಡಿಯೋ ಸಮೇತ ಸಿಕ್ಕಿಬಿದ್ದಿರುವ ರಾಜಕಾರಣಿ. ಬಿಜೆಪಿ ಪಕ್ಷದಲ್ಲಿ ಇದ್ದರೂ ಕಾಂಗ್ರೆಸ್ ಜೊತೆ ಸೇರಿಕೊಂಡು ಏನನ್ನೋ ಸಾಧಿಸಲು ಹೋಗಿ ಕಾಂಗ್ರೆಸ್ ಮಾನವನ್ನೇ ಬೀದಿಯಲ್ಲಿ ಹರಾಜು ಹಾಕಿರುವ ನಾಯಕ. ಶಿವರಾಮೇಗೌಡರ ರಾಜಕಾರಣದ ಹಿನ್ನೆಲೆಯನ್ನು ನೋಡುವುದಾದರೆ, ಅತ್ಯಂತ ಯಶಸ್ವಿ ರಾಜಕಾರಣಿ ಎಂದು ಹೇಳಲು ಸಾಧ್ಯವಿಲ್ಲ. ಕುಟಿಲತನದಿಂದ ರಾಜಕಾರಣ ಮಾಡಿಕೊಂಡು ಬಂದಿರುವ ಶಿವರಾಮೇಗೌಡ ಎಲ್ಲಿಯೂ ಸಲ್ಲದವರು ಎನ್ನುವ ಸಾಲಿಗೆ ಬಂದು ನಿಂತಿದ್ದಾರೆ.

ಪುನರ್ಜನ್ಮ ನೀಡಿದ ಜೆಡಿಎಸ್ ಬೆನ್ನಿಗೆ ಇರಿದ ನಾಯಕ..!

ಕಾಂಗ್ರೆಸ್ನಿಂದ ರಾಜಕಾರಣ ಆರಂಭ ಮಾಡಿ ಯೂತ್ ವಿಂಗ್ನಲ್ಲಿ ಕೆಲಸ ಮಾಡಿದ್ದ ಎಲ್.ಆರ್ ಶಿವರಾಮೇಗೌಡ ಇಲ್ಲೀವರೆಗೂ ಕಾಂಗ್ರೆಸ್ನಿಂದ ಶಾಸಕನಾಗಲು ಸಾಧ್ಯವಾಗಿಲ್ಲ. ಎರಡು ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕನಾಗಿ ಕೆಲಸ ಮಾಡಿದ ಶಿವರಾಮೇಗೌಡ, ಮತ್ತೆ ಕಾಂಗ್ರೆಸ್ ಸೇರ್ಪಡೆ ಆದರು. ಶಾಸಕರಾಗಲು ಸಾಧ್ಯವಾಗದೆ ಪದೇ ಪದೇ ಸೋಲುಂಡು ಕ್ಷೇತ್ರವನ್ನೇ ತ್ಯಜಿಸಿ ರಾಜಕೀಯ ಅಜ್ಞಾತವಾಸ ಅನುಭವಿಸಿದ್ರು. ಆ ಬಳಿಕ ರಾಜಕೀಯ ಅಜ್ಞಾತವಾಸದಲ್ಲಿ ಇದ್ದವರನ್ನು ಕರೆದುಕೊಂಡು ಬಂದು ಜೆಡಿಎಸ್ ಪಕ್ಷ ಸಂಸದರನ್ನಾಗಿ ಮಾಡಿತ್ತು. ಆದ ಇಂದ್ರ ಚಂದ್ರ ರಾಜಕೀಯ ಪುನರ್ಜನ್ಮ ನೀಡಿದ ಜೆಡಿಎಸ್ನಲ್ಲಿ ಮುಂದುವರಿಯುತ್ತೇನೆ ಎಂದು ಬೊಬ್ಬೆ ಹೊಡೆದರು. ಆ ಬಳಿಕ ಕಳೆದ ಚುನಾವಣೆ ವೇಳೆ ಜೆಡಿಎಸ್ ಬಿಟ್ಟು ಬಿಜೆಪಿ ಸೇರ್ಪಡೆಯಾಗಿ ಜೆಡಿಎಸ್ಗೆ ಚೂರಿ ಇರಿದರು.

ಬಿಜೆಪಿ ಸೇರಿದ ಬಳಿ ಕಾಂಗ್ರೆಸ್ ಪರ ಬ್ಯಾಟಿಂಗ್..
ನಾಗಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ ಎನ್ ಚಲುವರಾಯಸ್ವಾಮಿ ಜಯ ಸಾಧಿಸಿದ್ದಾರೆ. ಮಂತ್ರಿ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಎದುರಾಳಿಯಾಗಿ ಜೆಡಿಎಸ್ನಿಂದ ಶಿವರಾಮೇಗೌಡರಿಗೆ ಟಿಕೆಟ್ ಕೊಡಲಿಲ್ಲ ಅನ್ನೋ ಕಾರಣಕ್ಕೆ ಬಿಜೆಪಿ ಸೇರ್ಪಡೆಯಾಗಿ ಪತ್ನಿಯನ್ನು ಅಖಾಡಕ್ಕೆ ಇಳಿಸಿದ್ರು. ಆದರೆ ಪಡೆದುಕೊಂಡ ಮತ 7,769 ಮಾತ್ರ. ಆದರೆ ಕಾಂಗ್ರೆಸ್ನ ಚಲುವರಾಯಸ್ವಾಮಿ ಗೆದ್ದಿದ್ದು 4,414 ಮತಗಳು ಮಾತ್ರ. ಅಂದರೆ ಜೆಡಿಎಸ್ ಸೋಲಿಸಿದ ಕೀರ್ತಿ ಶಿವರಾಮೇಗೌಡರಿಗೆ ಸಲ್ಲುತ್ತದೆ. ಇದೀಗ ಬಿಜೆಪಿಯಲ್ಲಿ ಆದರೂ ಶಿವರಾಮೇಗೌಡ ಉತ್ತಮ ನಾಯಕ ಎನಿಸಿಕೊಂಡರೇ ಅದೂ ಇಲ್ಲ, ಕಾಂಗ್ರೆಸ್ ಜೊತೆಗೆ ಸೇರಿ ಕುತಂತ್ರ ಮಾಡಲು ಹೋಗಿ ಕಾಂಗ್ರೆಸ್ ಪಕ್ಷದ ಮಾನವನ್ನೂ ಕಳೆದಿದ್ದಾರೆ.


ಮೋಸ, ವಂಚನೆ, ನಂಬಿಕೆ ದ್ರೋಹವೇ ರಾಜಕಾರಣ ಅಲ್ಲ..!
ರಾಜಕಾರಣದಲ್ಲಿ ಮೋಸ, ವಂಚನೆ, ದ್ರೋಹ ಇದೆಲ್ಲವೂ ಇರುತ್ತದೆ. ಇಲ್ಲ ಎಂದು ಹೇಳಿದರೆ ಸುಳ್ಳಾಗುತ್ತದೆ. ಆದರೆ ಅದನ್ನೇ ಕಾಯಕ ಮಾಡಿಕೊಳ್ಳುವುದು ಸರಿಯಲ್ಲ. ಶಿವರಾಮೇಗೌಡ ಅದನ್ನೇ ಮುಖ್ಯ ಎಂದುಕೊಂಡಂತೆ ಕಾಣಿಸುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ನಾಯಕನಾಗಿ ಬೆಳೆಯುವ ಅವಕಾಶವಿತ್ತು, ಅಲ್ಲೂ ಉಳಿಯಲಿಲ್ಲ, ಕೊನೆಗೆ ಜೆಡಿಎಸ್ನಿಂದ ಬಂದ ಸಂಸದರಾಗಿ ಕಳೆದು ಹೋಗಿದ್ದ ನಾಯಕತ್ವದ ಲಕ್ಷಣಗಳನ್ನು ಮತ್ತೆ ಪಡೆದುಕೊಂಡಿದ್ದರು. ಅಲ್ಲಿಯಾದರೂ ಎರಡನೇ ಇನ್ನಿಂಗ್ಸ್ ಆಡ್ತಾರಾ..? ಅಂದುಕೊಂಡ್ರೆ ಅಲ್ಲೂ ಉಳಿಯಲಿಲ್ಲ. ಇನ್ನು ಬಿಜೆಪಿನ ಸೇರಿ ರಾಜಕೀಯ ಜೀವನ ಮುಗಿಸ್ತಾರಾ..? ಅಂದುಕೊಂಡ್ರೆ ಅಲ್ಲೂ ಬೆನ್ನಿಗೆ ಚೂರಿ ಹಾಕಿ ಪಕ್ಷದ ವಿರುದ್ಧವೇ ಮಾತನಾಡಿದ್ದಾರೆ. ಈ ಗುಣವೇ ಶಿವರಾಮೇಗೌಡರನ್ನು ಎಲ್ಲಿಯೂ ಸಲ್ಲದ ನಾಯಕನನ್ನಾಗಿ ಮಾಡಿದೆ ಎಂದರೆ ಸುಳ್ಳಲ್ಲ. ಯಾವುದೇ ಒಂದು ಪಕ್ಷ ಅಥವಾ ವ್ಯಕ್ತಿಯ ಜೊತೆಗೆ ಇದ್ದಾಗ ನಂಬಿಕೆ ಎನ್ನುವುದು ಅತಿ ಮುಖ್ಯವಾಗುತ್ತದೆ ಅಲ್ಲವೇ..?
ಕೃಷ್ಣಮಣಿ






