ಕನ್ನಡ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ವಿವಾದ ತೀವ್ರ ಸ್ವರೂಪವನ್ನು ಪಡೆಯುತ್ತಿದೆ. ನೂತನ ಪಠ್ಯಪುಸ್ತಕದ ವಿವಾದವು ಕನ್ನಡದ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರನ್ನು ನಿಂದಿಸುವ ಮಟ್ಟಿಗೆ ತಲುಪಿದೆ. ಅವರ ಸಾಹಿತ್ಯವನ್ನೇ ಪ್ರಶ್ನಿಸುವ ಮಟ್ಟಿಗೆ ಬಲಪಂಥೀಯರು ತಮ್ಮ ಬೌದ್ಧಿಕ ಅಧಪತನವನ್ನು ತೋರಿಸುತ್ತಿದ್ದಾರೆ. ವಿವಾದದ ಬೆನ್ನಲ್ಲಿ, ದೇಮಾ ಅವರು ಪಠ್ಯಪುಸ್ತಕಗಳಿಂದ ತಮ್ಮ ಪಠ್ಯಗಳನ್ನು ಕೈ ಬಿಡುವಂತೆ ಕೇಳಿಕೊಂಡಿದ್ದರು. ಇದನ್ನು ಅರಗಿಸಿಕೊಳ್ಳಲಾಗದ ಬಿಜಪಿ ಹಾಗೂ ಅದರ ಬೆಂಬಲಿಗರು ದೇಮಾ ವಿರುದ್ಧ ಅಸಭ್ಯವಾಗಿ ಮುಗಿಬಿದ್ದಿದ್ದಾರೆ.
ಮೈಸೂರಿನ ಸಂಸದ ಪ್ರತಾಪ ಸಿಂಹ ಅಂತೂ ದೇಮಾ ಅವರನ್ನು ಕಾಂಗ್ರೆಸ್ ಏಜೆಂಟ್ ಎಂಬಂತೆ ಬಿಂಬಿಸಿದ್ದು, ಅವರಲ್ಲಿ ವಿಚಾರವಿಲ್ಲ, ಬರೀ ಎಂಜಲಿದೆ ಎಂದು ಹೇಳಿಕೆ ನೀಡುವಷ್ಟರ ಮಟ್ಟಿಗೆ ಇಳಿದಿದ್ದಾರೆ.
ಈ ನಡುವೆ, ಜಿ.ಬಿ ಹರೀಶ್ ಎಂಬ ಬರಹಗಾರರೊಬ್ಬರು ದೇವನೂರು ಮಹಾದೇವ ಅವರ ಬಗ್ಗೆ ಆಕ್ಷೇಪಾರ್ಹ ಪೋಸ್ಟ್ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಮಹಾದೇವ ಅವರ ಬಗ್ಗೆ ಜಿಬಿ ಹರೀಶ್ ಎಂಬಾತ ಹಾಕಿರುವ ಪೋಸ್ಟ್ ಬ್ರಾಹ್ಮಣ್ಯದ ಕುರುಹು ಎಂದು ನಾಡಿನ ಹಲವು ಹೋರಾಟಗಾರರು, ಚಿಂತಕರು ಪ್ರತಿಕ್ರಿಯಿಸಿದ್ದಾರೆ.
“ದಶಕಗಳ ಹಿಂದೆ ಬರೆದ ಕುಸುಮಬಾಲೆಯ ಬಂಡವಾಳ ಮುಗಿದಿದೆ. ದೇವನೂರು ಹೊಸದೇನೂ ಬರೆಯದೇ ದೊಡ್ಡವರಾದರಲ್ಲ!?” ಎಂದು ಜಿಬಿ ಹರೀಶ್ ಬರೆದಿದ್ದು, ಇದು ಬ್ರಾಹ್ಮಣ್ಯದ ಶ್ರೇಷ್ಟತೆಯ ವ್ಯಸನ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ದೇವನೂರು ಮಹಾದೇವ ಹಾಗೂ ರಾಷ್ಟ್ರಕವಿ ಕುವೆಂಪುರನ್ನು ಹಿಯಾಳಿಸುತ್ತಿರುವ ಬಗ್ಗೆ ಮಾಜಿ ಸಚಿವ ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದು, “ಶೂದ್ರ ಸಮುದಾಯಗಳ ವೈಚಾರಿಕ ಪ್ರಜ್ಞೆಯನ್ನು ಗಟ್ಟಿಗೊಳಿಸಿದ ಕುವೆಂಪು ಅವರನ್ನು ಹೀಯಾಳಿಸುವ ಕೆಲಸ ಮಾಡುತ್ತಿರುವ ಬಿಜೆಪಿಗರು ಇದೀಗ ಸಾಹಿತಿ ದೇವನೂರು ಮಹಾದೇವ ಅವರ ಮೇಲೆಯೂ ವಿಷ ಕಾರುತ್ತಿದ್ದಾರೆ. ಕೆಳ ವರ್ಗಗಗಳ ಪರವಾದ ಮತ್ತು ಎಲ್ಲ ಮನುಷ್ಯರೂ ಸಮಾನರೆಂಬ ತಿಳುವಳಿಕೆಯನ್ನು ನೀಡಿದ ಕುವೆಂಪು ಮತ್ತು ದೇವನೂರು ಮಹಾದೇವ ಅಂತವರನ್ನು ಅಸಹನೆಯಿಂದ ಕಾಣುವಂತಹ ನೀಚ ಪ್ರವೃತ್ತಿಯನ್ನು ಮನುವಾದಿಗಳು ಹುಟ್ಟು ಹಾಕಲು ಯತ್ನಿಸುತ್ತಿರುವುದು ಖಂಡನಾರ್ಹವಾದ ಸಂಗತಿಯಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಮನುವಾದಿಗಳ ಈ ಪ್ರಯತ್ನಕ್ಜೆ ಸ್ವಾಮೀಜಿಗಳ ಆದಿಯಾಗಿ ಬಹಳಷ್ಟು ಸಂಘಟನೆಗಳು ಪ್ರತಿರೋಧ ವ್ಯಕ್ತಪಡಿಸುತ್ತಿದ್ದು ಕನ್ನಡ ನಾಡಿನ ವೈಚಾರಿಕ ಪ್ರಜ್ಞೆಯಾದ ಸಾಹಿತಿಗಳ ಪರವಾಗಿ ಹೋರಾಟ ಮಾಡುವ ಎಲ್ಲಾ ಜನರ ಮತ್ತು ಕನ್ನಡ ಮನಸ್ಸುಗಳಿಗೆ ನನ್ನ ಪೂರ್ಣ ಬೆಂಬಲವಿದೆ.” ಎಂದು ಫೇಸ್‌ಬುಕ್ ಪೋಸ್ಟ್ ಮಾಡಿದ್ದಾರೆ. .
ಈ ಕುರಿತು ಪ್ರತಿಕ್ರಿಯಿಸಿರುವ ಶ್ರೀಪಾದ ಹೆಗ್ಡೆ ಅವರು, “ಖಂಡಿ ಖಂಡಿ ಬರೆದು ಬಿಸಾಕಿದರೆ ಮಾತ್ರ ದೊಡ್ಡ ಸಾಹಿತಿಯಾಗುವುದಿಲ್ಲ. ದೇವನೂರು ಮಹಾದೇವ ಬರೆದದದ್ದು ಸಂಖ್ಯೆಯಲ್ಲಿ ಕಡಿಮೆ ಇದ್ದಿರಬಹುದು ಆದರೆ ಗುಣ ಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದ ಯಾವ ಬರಹಗಾರರಿಗೂ ಅವರು ಕಡಿಮೆಯಿಲ್ಲ. ಸ್ವತಃ ಬರಹಗಾರನಾದ ಜಿ ಬಿ ಹರೀಶ್ ಎಂಬ ಬ್ರಾಹ್ಮಣ್ಯದ ಲೇಖಕ ದೇವನೂರರನ್ನು ಟೀಕಿಸುವಾಗ ಅವರ ಬರಹಗಳ ಗುಣಮಟ್ಟ ಯಾವುದು ಎನ್ನುವುದನ್ನು ಅರಿತು ನುಡಿಯ ಬೇಕಿತ್ತು. ಹೀಗೆ ಬರೆಯುವುದರಿಂದ ಇವನು ತಾನೊಬ್ಬ ಕಳಪೆ ಬರಹಗಾರ ಮಾತ್ರ ಅಲ್ಲ ಮಿದುಳಿನಲ್ಲಿ ಕೇವಲ ಕೊಳಕು ತುಂಬಿದ ಮನುಷ್ಯನೂ ಹೌದು ಎನ್ನುವುದನ್ನು ಸಾಬೀತು ಪಡಿಸಿದ್ದಾನೆ.” ಎಂದು ಬರೆದಿದ್ದಾರೆ.
ಕುವೆಂಪು, ದೇಮಾ ಸೇರಿದಂತೆ ಕನ್ನಡದ ಸಾಕ್ಷಿಪ್ರಜ್ಞೆಗಳನ್ನು ಅವಮಾನಿಸುತ್ತಿರುವ ನಡೆಗೆ ವಿಷಾದ ವ್ಯಕ್ತಪಡಿಸಿರುವ ಕನ್ನಡದ ಚಿಂತಕ, ಲೇಖಕ ಪ್ರೊ. ರಹಮತ್ ತರೀಕೆರೆ “ಮತೀಯವಾದವು ಕೇವಲ ಕ್ರೈಸ್ತರ ಮುಸ್ಲಿಮರ ಕಮ್ಯುನಿಸ್ಟರ ಹಗೆತನ ಸಾಧಿಸುತ್ತದೆ ಎಂದೇ ಬಹಳ ಜನರ ಮುಗ್ಧ ನಂಬೋಣ. ಮೇಲುನೋಟಕ್ಕೆ ಇದು ನಿಜ. ಆದರೆ, ಆಳದಲ್ಲಿ ಮತ್ತು ಗುಪ್ತವಾಗಿ ಅದು, ಭಾರತ ದೇಶವು ಸೃಷ್ಟಿಸಿದ ಅಪೂರ್ವ ಪ್ರತಿಭೆಗಳೂ ಧೀಮಂತರೂ ಆದ ಬಸವಣ್ಣ ಅಕ್ಕ ನಾರಾಯಣಗುರು ಗಾಂಧಿ ಟಾಗೂರ್ ಅಂಬೇಡ್ಕರ್ ಕುವೆಂಪು ದೇವರಾಜರಸು, ನಂಜುಂಡಸ್ವಾಮಿ ತೇಜಸ್ವಿ ಲಂಕೇಶ್ ಅನಂತಮೂರ್ತಿ ಕಾರ್ನಾಡ ಕಲಬುರ್ಗಿ ಮೂರ್ತಿರಾವ್ ಸಾರಾ ಶಂಕರಭಟ್ ದೇವನೂರು ರಾಜಕುಮಾರ್ ಅವರಂಥವರನ್ನು ಕೂಡ ಇಷ್ಟಪಡುವುದಿಲ್ಲ. ಈ ದಿಟವನ್ನು ಈಚಿನ ವರ್ಷಗಳಲ್ಲಿ ನಡೆದ ವಿವಾದ ಮತ್ತು ವಾಗ್ವಾದಗಳು ಮನವರಿಕೆಗೊಳಿಸಿವೆ. ಪಠ್ಯಪುಸ್ತಕವಿರಲಿ, ಭಾರತೀಯ ಸಂಸ್ಕೃತಿಯ ಗ್ರಹಿಕೆಯಿರಲಿ, ತಮ್ಮ ಸಿದ್ಧಾಂತಕ್ಕೆ ಒಳಗಾಗದ ನಾಡಿನ ಶ್ರೇಷ್ಠ ಮನಸ್ಸುಗಳನ್ನೆಲ್ಲ ಬಾಹಿರಗೊಳಿಸುತ್ತ ಹೋದರೆ, ಕಡೆಗೆ ಉಳಿಯುವುದೇನು?” ಎಂದು ಪ್ರಶ್ನಿಸಿದ್ದಾರೆ.



