ಮೈಸೂರು : ಜೂನ್.06: ಎಮ್ಮೆ ಕೋಣಗಳನ್ನು ಕಡಿಯುವುದಾದರೆ ಹಸುಗಳನ್ನು ಏಕೆ ಕಡಿಯಬಾರದು ಎಂಬ ಸಚಿವ ಕೆ.ವೆಂಕಟೇಶ್ ಹೇಳಿಕೆಗೆ ರೈತ ಮುಖಂಡ ಕುರುಬೂರ್ ಶಾಂತಕುಮಾರ್ ಕಿಡಿ ಕಾರಿದ್ದಾರೆ. ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೂಡಲೇ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಕಾವೇರಿ ನೀರು ಸಮುದ್ರಕ್ಕೆ ಹರಿಯುವ ಹೆಚ್ಚುವರಿ ನೀರನ್ನು ರಾಜ್ಯದ ಹಿತಾಸಕ್ತಿಗೆ ಬಳಸಿಕೊಳ್ಳಲಿ ಎಂದು ಆಗ್ರಹಿಸಿದರು.
ಕಾವೇರಿ ಅಂತಿಮ ತೀರ್ಪಿನಲ್ಲಿ ಸೂಚಿಸಿರುವಂತೆ ತಮಿಳುನಾಡು ಪಾಲಿನ ಹಂಚಿಕೆ ನೀರನ್ನು ಹರಿಸಿ. ಹೆಚ್ಚುವರಿ ನೀರನ್ನು ರಾಜ್ಯಕ್ಕೆ ಬಳಸಿಕೊಳ್ಳಲು ಮೇಕೆದಾಟು ಅಣೆಕಟ್ಟು ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಬೇಕು, ತಮಿಳುನಾಡಿನ ಒತ್ತಾಯದ ಮುಲಾಜಿಗೆ ರಾಜ್ಯ ಸರ್ಕಾರ ಮಣಿಯಬಾರದು ಎಂದರು. ಕಬಿನಿ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಎರಡನೇ ಹಂತದ ಯೋಜನೆಗಳನ್ನು ಶರವೇಗದಲ್ಲಿ ಕಾರ್ಯಗತಗೊಳಿಸಬೇಕು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಗೋಹತ್ಯೆ ನಿಷೇಧ ಕಾಯ್ದೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುರುಬೂರು ಶಾಂತಕುಮಾರ್, ಗೋವುಗಳು ರಾಜಕಾರಣವಾಗಬಾರದು, ಪಶು ಸಂಗೋಪನೆ ಸಚಿವರು ಕೋಣಕ್ಕೂ, ಹಸುವಿಗೂ ಹೋಲಿಕೆ ಮಾಡಿರುವುದು ಸರಿಯಲ್ಲ. ಹಸುಗಳು ರೈತರ ಬದುಕಿಗೆ ಆಸರೆಯಾಗಿ ಕಾಯಕ ಮಾಡುತ್ತವೆ. ನಾವು ಹಸುಗಳನ್ನು ಗೌರವ ಭಾವನೆಯಿಂದ ಪೂಜಿಸುತ್ತೇವೆ. ಇಂತಹ ಪ್ರಾಣಿಗಳ ಹತ್ಯೆ ಮಾಡಿದರೆ ಅದು ತಪ್ಪು. ಸಚಿವರು ಈ ರೀತಿಯ ಹೇಳಿಕೆ ನೀಡಿರುವುದು ಸಚಿವರಿಗೆ ಶೋಭೆ ತರುವಂತಹದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದೆಹಲಿಯಲ್ಲಿ ಕುಸ್ತಿ ಪಟುಗಳು ನಡೆಸುತ್ತಿರುವ ಹೋರಾಟವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಕೂಡಲೇ ಹೋರಾಟಗಾರರಿಗೆ ನ್ಯಾಯ ಕೊಡಿಸಬೇಕು ಎಂದು ಇದೇವೇ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.