ಮಂಗಳೂರು: ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಬೇಕು, ಸೌಜನ್ಯ ಪ್ರಕರಣದಲ್ಲಿ ಮರು ತನಿಖೆ ಆಗಬೇಕೆಂದು ಆಗ್ರಹಿಸಿ ಬೆಳ್ತಂಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ನಡೆಯುತ್ತಿದ್ದಂತೆ ವೇದಿಕೆ ಕೆಳಗಿಳಿದ ಸೌಜನ್ಯ ಅವರ ತಾಯಿ ಕುಸುಮಾವತಿ ಸಭಿಕರೆದುರು ಸೆರಗು ಒಡ್ಡಿ ನ್ಯಾಯಕ್ಕೆ ಬೇಡಿದ್ದಾರೆ.
ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಬೃಹತ್ ಸಮಾವೇಶ ನಡೆಸಲಾಗಿದ್ದು ಸಾವಿರಾರು ಪ್ರತಿಭಟನಾಕಾರರು ಸೇರಿದ್ದಾರೆ.
ಪ್ರತಿಭಟನೆಗೆ ಸೇರಿದವರನ್ನುದ್ದೇಶಿಸಿ ಮಾತನಾಡಿದ ಅವರು, “ನನ್ನ ಮಗಳಿಗೆ ನ್ಯಾಯ ಕೊಡಿಸಲು ಇಡಿ ದೇಶವೇ ಕೂಡಿ ಬಂದಿದೆ. ನನ್ನ ಮಗಳಿಗೋಸ್ಕರ ಇಷ್ಟೊಂದು ಜನ ಸೇರಿದ್ದೀರಿ. ನಮ್ಮ ಮಗುವಿಗೋಸ್ಕರ ನ್ಯಾಯ ಕೇಳಲು ಇಂದು ನಮಗೆ ಪರ್ಮಿಷನ್ ಕೊಟ್ಟಿಲ್ಲ. ಬಜರಂಗದಳದವರೊಂದಿಗೆ ಅಣ್ಣಪ್ಪನಲ್ಲಿ ನ್ಯಾಯ ಕೇಳಲು ಹೋಗಿದ್ದೆ…ನನ್ನನ್ನ ಒಳಗೆ ಹೋಗಲು ಬಿಟ್ಟಿಲ್ಲ. ನನ್ನನ್ನು ಒಂದು ಗಂಟೆ ಹೊರಗಡೆ ಕಾಯಿಸಿದ್ದಾರೆ. ಆ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿಯನ್ನ ನಾನು ಇಲ್ಲಿ ನೋಡುತ್ತಿದ್ದೇನೆʼ ಎಂದು ಭಾವನಾತ್ಮಕವಾಗಿ ನುಡಿದರು.
“ಖಂಡಿತಾ ನಾನು ಗಟ್ಟಿಯಾಗಿ ಇದ್ದೇನೆ. ಇಷ್ಟು ಜನರ ಶಕ್ತಿ ನನ್ನಲ್ಲಿ ತುಂಬಿದೆ. ಅದು ಎಷ್ಟು ಬಾರಿ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ರೋ. ನನ್ನ ಮಗಳು ಎಷ್ಟು ನೋವು ತಿಂದಳೋ ಏನೋ. ಧೀರಜ್ ಜೈನ್, ಮಲ್ಲಿಕ್ ಜೈನ್ , ಹರ್ಷೇಂದ್ರ ಕುಮಾರ್ ಮಗ ನಿಶ್ಚಲ್ ಜೈನ್ ಸೇರಿದಂತೆ ಐದಾರು ಜನ ನನ್ನ ಮಗಳನ್ನು ಅತ್ಯಾಚಾರ ಮಾಡಿದ್ದಾರೆ. ನ್ಯಾಯ ಸಿಗುತ್ತೆ, ಅತ್ಯಾಚಾರಿಗಳು ಸಿಕ್ತಾರೆ ಎಂಬ ನಂಬಿಕೆ ಇದೆ. ಅಮ್ಮ ನನ್ನನ್ನು ಬದುಕಿಸು ಎಂಬ ಕೂಗು ನನಗೆ ಈಗಲೂ ಕೇಳಿಸುತ್ತೆ” ಎಂದು ಗದ್ಗದಿತರಾಗಿ ಕುಸುಮಾವತಿ ಹೇಳಿದ್ದಾರೆ.
“ಅತ್ಯಾಚಾರ ಮಾಡಿ ಕಾಡಲ್ಲಿ ಬಿಸಾಡಿದ್ದಾರೆ. ಅತ್ಯಾಚಾರ ಮಾಡಿ ಜೀವ ಸಹಿತ ಬಿಟ್ಟಿದ್ರು ನನಗೆ ತೊಂದರೆ ಇರ್ತಿರ್ಲಿಲ್ಲ.. ಆದರೆ ಕೊಂದೇ ಬಿಟ್ಟರು. ಇವತ್ತು ನಿಮ್ಮ ಕಾಲ ಬುಡಕ್ಕೆ ಬಂದು ನ್ಯಾಯ ಕೇಳುತ್ತಿದ್ದೇನೆ” ಎಂದು ಕುಸುಮಾವತಿ ಹೇಳುತ್ತಿದ್ದಂತೆ ನೆರೆದವರ ಕಣ್ಣಲ್ಲೂ ನೀರು ಜಿಣುಗುತ್ತಿತ್ತು.
ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾದ ಆದಿ ಚುಂಚನಗಿರಿ ಶಾಖಾ ಮಠ ಮಂಗಳೂರಿನ ಶ್ರೀ ನಧರ್ಮ ಪಾಲನಾಥನ ಸ್ವಾಮೀಜಿ ಮಾತನಾಡಿ, “ಸತ್ಯ ನ್ಯಾಯದ ಹೋರಾಟಕ್ಕೆ ಆದಿ ಚುಂಚನಗಿರಿ ಮಠದ ಬೆಂಬಲವಿದೆ. ಯಾವುದೇ ಹಣದ ಆಮಿಷಕ್ಕೆ ನ್ಯಾಯವನ್ನೂ ಬಲಿ ಕೊಡಬೇಡಿ ತಾಯಂದಿರೆ” ಎಂದು ಕರೆ ನೀಡಿದ್ದಾರೆ.
ಮೂರು ಅಂಶಗಳನ್ನ ಯೋಚನೆ ಮಾಡಬೇಕು. ಸಂತೋಷ ರಾವ್ ಗೆ ಮರಳಿ ಜೀವನವನ್ನ ನೀಡಲು ಸಾಧ್ಯ ಇಲ್ಲ. ಸರಕಾರ ಅವನ ಬದುಕಿಗೆ ಏನಾದ್ರು ವ್ಯವಸ್ಥೆ ಮಾಡಬೇಕು. ಕುಸುಮಾವತಿ ಕುಟುಂಬಕ್ಕೆ ಸರಕಾರ ರಕ್ಷಣೆ ನೀಡಬೇಕು. ಶವ ಪರೀಕ್ಷೆ ಮಾಡಿದ ವೈದ್ಯ ತನಿಖಾಧಿಕಾರಿಯನ್ನ ಮೊದಲು ವಿಚಾರಣೆ ಮಾಡಬೇಕು. ಅವರನ್ನ ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದ್ದಾರೆ.
ಸೌಜನ್ಯ ಸ್ತ್ರೀ ಸ್ವರೂಪ ತೊರೆದು ಕಾಳಿ ಸ್ವರೂಪವನ್ನ ಪಡೆದಿದ್ದಾಳೆ. ಅವಳ ಆತ್ಮ ಭೀಕರ ಸ್ವರೂಪ ಪಡೆಯುವ ಮುನ್ನ ಸರಕಾರ ಎಚ್ಚೆತ್ತು ಕೊಳ್ಳಬೇಕು. ಸರಕಾರ ಶೀಘ್ರ ತನಿಖೆ ನಡೆಸಿ ಅವಳ ಆತ್ಮಕ್ಕೆ ಶಾಂತಿಯನ್ನ ಒದಗಿಸಬೇಕು ಎಂದು ಅವರು ಒತ್ತಾಯ ಪಡಿಸಿದ್ದಾರೆ.
ನಾವು ಯಾಕೆ ಧರ್ಮಸ್ಥಳದ ವಿರುದ್ಧ ಮಾತನಾಡಬಾರದು ಎಂದು ಇದೇ ವೇಳೆ ಸಾಮಾಜಿಕ ಹೋರಾಟಗಾರ್ತಿ ಪ್ರಸನ್ನ ರವಿ ಪ್ರಶ್ನಿಸಿದ್ದು, ಸಿಬಿಐ ಯವರು ಮೊದಲು ಸಂತ್ರಸ್ತೆ ಮನೆಗೆ ಭೇಟಿ ನೀಡದೆ ಯಾಕೆ ಧರ್ಮಸ್ಥಳಕ್ಕೆ ಭೇಟಿ ನೀಡಬೇಕು ಎಂದು ಕೇಳಿದ್ದಾರೆ.
ರಾಜಕೀಯದವ್ರಿಗೆ ನಾವು ಹಿಂದುತ್ವವನ್ನ ಗುತ್ತಿಗೆ ಕೊಟ್ಟಿಲ್ಲ. ಎರಡು ಪಕ್ಷದವರಿಗೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ. ನೀವು ಪಾರ್ಟಿ ಫಂಡ್ ಗೋಸ್ಕರ ಅಲ್ಲಿ ಹೋಗಿ ಲಂಚ ತೆಗೆದುಕೊಳ್ಳುತ್ತೀರ. ಪ್ರತಿಭಟನೆಗೆ ಗ್ರೌಂಡ್ ಪರ್ಮಿಷನ್ ಕೊಡದ ನೀವು ಸೌಜನ್ಯ ತಾಯಿಯನ್ನು ಮೋದಿಯಲ್ಲಿಗೆ ಕರೆದುಕೊಂಡು ಹೋಗುತ್ತೀರಾ..? ಎಂದು ಪ್ರಶ್ನಿಸಿದ್ದಾರೆ.
ವಿಶ್ವ ಹಿಂದೂ ಪರಿಷದ್ ನವರಿಗೆ ತಾಕತ್ ಇದ್ದರೆ ಧರ್ಮಸ್ಥಳದಲ್ಲಿ ಭಗವಧ್ವಜ ಹಾರಿಸಿ. ನಾನು ಎಲ್ಲಾ ಸಭೆಯಲ್ಲೂ ನೋಡುತ್ತಾ ಇದ್ದೇನೆ ನಾಯಕರು ಯಾರು ಮಾತನಾಡುತ್ತಿಲ್ಲ. ಕಾರ್ಯಕರ್ತರು ಮಾತ್ರ ಹೋರಾಟ ಮಾಡುತ್ತಿದ್ದಾರೆ ಎಂದು ಪ್ರಸನ್ನ ರವಿ ಹೇಳಿದ್ದಾರೆ