“ಗೋವಾದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಒಳಗಾದ ಮುದ್ದೇಬಿಹಾಳ ಮೂಲದ ಒಂದೇ ಕುಟುಂಬದ ಮೂವರು ಮಾನಕ್ಕೆ ಅಂಜಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಗೋವಾದಲ್ಲಿ ಕನ್ನಡಿಗರ ಬದುಕು ಎಂಥಾ ಡೋಲಾಯಮಾನ ಪರಿಸ್ಥಿತಿಯಲ್ಲಿದೆ, ಅಲ್ಲಿ ಕನ್ನಡಿಗರು ಎಂಥ ಅಪಾಯಕಾರಿ ಜೀವನ ನಡೆಸುತ್ತಿದ್ದಾರೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿದ ಹೆಚ್ ಡಿ ಕುಮಾರಸ್ವಾಮಿ, ʼಪ್ರಕರಣವೊಂದರಲ್ಲಿ ಕನ್ನಡಿಗ ಕುಟುಂಬಕ್ಕೆ ಗೋವಾದ ಪೊಲೀಸರು ಕಿರುಕುಳ ನೀಡಿದ್ದರು ಎಂಬುದು ಅವರ ಡೆತ್ನೋಟ್ನಲ್ಲೇ ಇದೆ ಎನ್ನಲಾಗಿದೆ. ಕಳ್ಳತನದಂಥ ಬಂಡ ಬಾಳು ಬದುಕಿದ್ದಿದ್ದರೆ ಆ ಕುಟುಂಬ ಆತ್ಮಹತ್ಯೆಯಂಥ ನಿರ್ಧಾರಕ್ಕೆ ಬರುತ್ತಿರಲಿಲ್ಲ. ಕನ್ನಡಿಗರೆಂಬ ಕಾರಣಕ್ಕೆ ಈ ಕುಟುಂಬದ ಮೇಲೆ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದೆʼ ಎಂದು ಹೇಳಿದ್ದಾರೆ.
“ಮೂವರ ಆತ್ಮಹತ್ಯೆ ನಂತರ ಪೊಲೀಸರೂ ಅನುಮಾನಾಸ್ಪದವಾಗಿ ವರ್ತಿಸಿದ್ದಾರೆ. ತರಾತುರಿಯಲ್ಲಿ ಪಂಚನಾಮೆ ನಡೆಸಿದ್ದಾರೆ ಎಂಬ ಆರೋಪ ಸ್ಥಳೀಯ ಕನ್ನಡ ಸಂಘಟನೆಗಳಿಂದ ವ್ಯಕ್ತವಾಗಿದೆ. ಈ ಬಗ್ಗೆ ಗೋವಾ ಮುಖ್ಯಮಂತ್ರಿ ಡಾ ಪ್ರಮೋದ್ ಸಾವಂತ್ ಕೂಡಲೇ ಗಮನ ಹರಿಸಬೇಕು. ಪೊಲೀಸ್ ಕಿರುಕುಳದ ನಿಟ್ಟಿನಲ್ಲಿ ತನಿಖೆ ನಡೆಯಬೇಕು. ಈ ಮೂಲಕ ಕನ್ನಡಿಗರ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಗೋವಾದಲ್ಲಿ ಕನ್ನಡಿಗರ ಮೇಲಿನ ದೌರ್ಜನ್ಯಗಳಿಗೆ ಕೊನೆಮೊದಲಿಲ್ಲ ಎಂಬಂತಾಗಿದೆ. ಕನ್ನಡಿಗರನ್ನು ಒಕ್ಕಲೆಬ್ಬಿಸುವುದರಿಂದ ಆರಂಭಿಸಿ, ಸಣ್ಣ ಪುಟ್ಟ ಪ್ರಕರಣಗಳಲ್ಲಿ ಸಿಲುಕಿಸುವ ವರೆಗೆ ವಿಧವಿಧದ ದೌರ್ಜನ್ಯಗಳು ನಡೆಯುತ್ತಲೇ ಇವೆ. ಈ ಬಗ್ಗೆ ಕರ್ನಾಟಕ ಸರ್ಕಾರವೂ, ಮುಖ್ಯಮಂತ್ರಿ ಯಡಿಯೂರಪ್ಪರವರೂ ಗಮನಹರಿಸಬೇಕು. ನಾನೂ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರಿಗೆ ಪತ್ರ ಬರೆಯುತ್ತೇನೆ “ ಎಂದು ತಿಳಿಸಿದ್ದಾರೆ.
ಗೋವಾದ ಜುವಾರಿ ನಗರದ ಬಿರ್ಲಾದಲ್ಲಿ ವಾಸವಿದ್ದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಲ್ತಾನಪುರ ಮೂಲದ ಒಂದೇ ಕುಟುಂಬದ ಮೂವರು ಎರಡು ದಿನದ ಹಿಂದೆನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡವರನ್ನು ಹುಲಗೆಪ್ಪ ಅಂಬಿಗೇರ (35), ಗಂಗಪ್ಪ ಅಂಬಿಗೇರ(29) ಮತ್ತು ದೇವಮ್ಮ ಹುಲಗೆಪ್ಪ ಅಂಬಿಗೇರ (28) ಎಂದು ಗುರುತಿಸಲಾಗಿದೆ.
ಜುವಾರಿನಗರದ ಮನೆಯೊಂದರಲ್ಲಿ ಹತ್ತು ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಕಳ್ಳತನವಾಗಿವೆ. ಈ ಕಳ್ಳತನದಲ್ಲಿ ನಿಮ್ಮ ಕುಟುಂಬದ ಕೈವಾಡವಿದೆ ಎಂದು ಪೊಲೀಸರು ಆರೋಪಿಸಿದ್ದರು. ಕಳ್ಳತನ ಮಾಡಿದ್ದು ಒಪ್ಪಿಕೊಳ್ಳುವಂತೆ ಒತ್ತಡ ಹೇರಿದ್ದರು. ಆದರೆ, ಒಪ್ಪದಿದ್ದಾಗ ಪೊಲೀಸರು ತಮಗಿಷ್ಟ ಬಂದ ಹಾಗೆ ಥಳಿಸಿದ್ದರು. ಇದರಿಂದ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಡೆತ್ನೋಟ್ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಮಾಡಿಕೊಂಡವರ ಮೃತದೇಹಗಳನ್ನು ಪೊಲೀಸರು ಲಗುಬಗೆಯಿಂದ ಮರಣೋತ್ತರ ಪರೀಕ್ಷೆಗೆ ಒಳಪಡಿಸಿರುವುದು ಕೂಡಾ ಸಂಶಯಕ್ಕೆ ಕಾರಣವಾಗಿದ್ದು, ಗೋವಾ ಪೋಲಿಸರು ಕನ್ನಡಿಗರನ್ನು ಸಿಲುಕಿಸುವ ಒತ್ತಡ ತಂತ್ರ ಅನುಸರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.