ಕುಮಾರಸ್ವಾಮಿ ಈ ರಾಜ್ಯ ಕಂಡಂತಹ ಭಾವನಾತ್ಮಕ ಸಿಎಂ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಬಡವರು ಎಂದರೆ ಸಹಾಯ ಮಾಡಲು ಹಾತೊರೆಯುವ ಕುಮಾರಸ್ವಾಮಿ ರಾಜಕಾರಣಿಗಳು ಎಂದು ಕಡುಕೋಪ. ಅದರಲ್ಲೂ ಕುಮಾರಸ್ಮಾಮಿ ಅಥವಾ ದೇವೇಗೌಡರನ್ನು ವೈಯಕ್ತಿಕವಾಗಿ ಟೀಕೆ ಮಾಡಿದ್ದರೆ, ಪಕ್ಷವನ್ನು ಹಿಯ್ಯಾಳಿಸುವ ಕೆಲಸ ಮಾಡಿದರೆ ಅವರ ಇತಿಹಾಸವನ್ನೇ ಕುಮಾರಸ್ವಾಮಿ ಜಾಲಾಡುತ್ತಾರೆ ಎನ್ನುವುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರೋ ವಿಚಾರ. ಕಳೆದ ತಿಂಗಳು ಬಿ.ಎಲ್ ಸಂತೋಷ್ ಜೆಡಿಎಸ್ ಪಕ್ಷದ ಬಗ್ಗೆ ವ್ಯಂಗ್ಯವಾಡಿದ್ದರು. ಅದಾದ ಎರಡು ದಿನಗಳಲ್ಲಿ ಕುಮಾರಸ್ವಾಮಿ ಸ್ಯಾಂಟ್ರೋ ರವಿ ಪ್ರಕರಣದ ಬಗ್ಗೆ ಕಂಪ್ಲೀಟ್ ಮಾಹಿತಿ ಜೊತೆಗೆ ಬಿಜೆಪಿ ನಾಯಕರ ಜೊತೆಗೆ ಇರುವ ಫೋಟೋ, ಮಾತನಾಡಿರುವ ಆಡಿಯೋ ಸೇರಿದಂತೆ ಸಂಪೂರ್ಣ ಜಾತಕವನ್ನು ಮಾಧ್ಯಮಗಳ ಎದುರು ಬಿಚ್ಚಿಟ್ಟಿದ್ದರು. ಆಗಲೂ ಕುಮಾರಸ್ವಾಮಿ ಎಚ್ಚರವಾಗಿ ಮಾತನಾಡಿ, ನನ್ನನ್ನು ಕೆಣಕುವ ಪ್ರಯತ್ನ ಬೇಡ ಎಂದಿದ್ದರು. ಇದೀಗ ಮತ್ತೆ ಕುಮಾರಸ್ವಾಮಿಯನ್ನು ಕೆಣಕಿ, ಮತ್ತಷ್ಟು ಮಾಹಿತಿ ಬಹಿರಂಗ ಆಗುವಂತೆ ಮಾಡಿದ್ದಾರೆ.
ಬಿಎಂಎಸ್ ಟ್ರಸ್ಟ್ ಪರಭಾರೆ ಬಗ್ಗೆ ಸಾಕ್ಷಿ ಕೊಟ್ಟ HDK..!
ಕಳೆದ ಮಳೆಗಾಲದ ಅಧಿವೇಶನದಲ್ಲಿ ಕುಮಾರಸ್ವಾಮಿ ಬಿಎಂಎಸ್ ಟ್ರಸ್ಟ್ ಪರಭಾರೆ ವಿಚಾರದ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದರು. ನಾನು ಮುಖ್ಯಮಂತ್ರಿ ಆಗಿದ್ದಾಗಲೇ ಸಾರ್ವಜನಿಕ ಟ್ರಸ್ಟ್ ಅನ್ನು ಪರಭಾರೆ ಮಾಡುವುದಕ್ಕೆ ಆಫರ್ ಬಂದಿತ್ತು. ನಾನು ತಿರಸ್ಕಾರ ಮಾಡಿದ್ದೆ. ಆದರೆ ಇದೀಗ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಖಾಸಗಿ ವ್ಯಕ್ತಿಗಳ ಕೈಗೆ ಟ್ರಸ್ಟ್ ಒಪ್ಪಿಸುವ ಕೆಲಸ ಮಾಡಿದ್ದಾರೆ. ಇದರಲ್ಲಿ ಸಾಕಷ್ಟು ಹಣದ ವ್ಯವಹಾರ ನಡೆದಿದೆ. ಇದೊಂದು ದೊಡ್ಡ ಹಗರಣ, ಇದರ ಬಗ್ಗೆ ತನಿಖೆ ಮಾಡಬೇಕು ಎಂದು ಆರೋಪ ಮಾಡಿದ್ದರು. ಆದರೆ ಅಂದು ಸರ್ಕಾರ, ಕುಮಾರಸ್ವಾಮಿ ಆರೋಪ ತಳ್ಳಿ ಹಾಕಿತ್ತು. ಅಷ್ಟೇ ಅಲ್ಲದೆ ಕುಮಾರಸ್ವಾಮಿ ಬಾಯಿ ಮುಚ್ಚಿಸುವ ಕೆಲಸ ಮಾಡಿತ್ತು. ಆದರೆ ಇದೀಗ ಮತ್ತೆ ಆ ವಿಚಾರದಲ್ಲಿ ಸಾಕ್ಷಿ ಕೊಟ್ಟಿರುವ ಕುಮಾರಸ್ವಾಮಿ, ಬಿಎಂಎಸ್ ಟ್ರಸ್ಟ್ನ ಅಧ್ಯಕ್ಷರ ನಿವಾಸದಲ್ಲಿ ಭರ್ಜರಿಯಾಗಿ ಬೆಳ್ಳೆ ತಟ್ಟೆಯಲ್ಲಿ ಭೋಜನ ಮಾಡುತ್ತಿರುವ ಫೋಟೋ ಬಿಡುಗಡೆ ಮಾಡಿದ್ದಾರೆ. ಕುಟುಂಬ ಸಮೇತ ಭೋಜನ ಮಾಡಿರೋ ಸಚಿವ ಅಶ್ವತ್ಥ ನಾರಾಯಣ, ಟ್ರಸ್ಟ್ ಪರಭಾರೆಯಲ್ಲಿ ಸಹಾಯ ಮಾಡಿರುವ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುವಂತೆ ಮಾಡಿದೆ.
ಪದೇ ಪದೇ ಕಾಲು ಕರೆಯುವ ಸಿ.ಟಿ ರವಿಗೂ ಚಾಟಿ..!
ಹಾಸನ ಟಿಕೆಟ್ ವಿಚಾರದಲ್ಲೂ ಮೂಗು ತೂರಿಸಿದ್ದ ಸಿ.ಟಿ ರವಿಗೆ ಅಂದೇ ಕುಮಾರಸ್ವಾಮಿ ಖಾರವಾಗಿ ಪ್ರತಿಕ್ರಿಯೆ ನೀಡಿದ್ದರು. ಆ ಬಳಿಕ ಮತ್ತೆ ಪ್ರಹ್ಲಾದ್ ಜೋಷಿ ಪರವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಕುಮಾರಸ್ವಾಮಿ ಬೆಚ್ಚಿ ಬೀಳುವಂತೆ ಮಾಡಿದ್ದಾರೆ. ಓರ್ವ ಶಿಕ್ಷಕ ಕೆಆರ್ಎಸ್ಗೆ ಬಿದ್ದು ಸಾವನ್ನಪ್ಪಿದ್ದು ಯಾಕೆ..? ಎಂದು ಸಿಟಿ ರವಿ ಹೇಳಬೇಕು ಎಂದು ಪ್ರಶ್ನಿಸಿದ್ದಾರ. ಇದರ ಜೊತೆಗೆ ಸಿ.ಟಿ ರವಿಗೆ ಸಂಬಂಧಿಸಬಹುದಾದ ನಿಗೂಢ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ. ಆ ಶಿಕ್ಷಕ ಏತಕ್ಕಾಗಿ ಸತ್ತ ಅನ್ನೋದನ್ನು ಹೇಳಪ್ಪ, ನಾನು ಕಾಣದೆ ಇರೋರಾ ನೀವೆಲ್ಲಾ..? ನನ್ನ ಬಗ್ಗೆ ಮಾತನಾಡುವ ಮುಂಚೆ ಎಚ್ಚರದಿಂದ ಇರಿ. ನಿಮ್ಮ ರೀತಿ ಕಳ್ಳ ವ್ಯವಹಾರ ಇಟ್ಕೊಂಡಿಲ್ಲ ನಾನು ಎಂದು ಸಿ.ಟಿ ರವಿಗೆ ನೇರ ಮಾತುಗಳಲ್ಲೇ ತಪರಾಕಿ ಹಾಕಿದ್ದಾರೆ. ಅಂದರೆ ನನ್ನನ್ನು ಕೆಳಕಿದ್ರೆ ಮತ್ತಷ್ಟು ಮಾಹಿತಿಯನ್ನು ಹೊರಕ್ಕೆ ಬಿಡ್ತೀನಿ ಎನ್ನುವ ಸವಾಲು ಹಾಕಿದ್ದಾರೆ.
ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡಬೇಕಿದೆ ಉಭಯ ನಾಯಕರು..!?
ಟ್ರಸ್ಟ್ ವ್ಯವಹಾರದ ಬಗ್ಗೆ ಈಗಾಗಲೇ ಕುಮಾರಸ್ವಾಮಿ ಅಧಿವೇಶನದಲ್ಲೇ ಪ್ರಸ್ತಾಪ ಮಾಡಿದ್ದರು. ದೊಡ್ಡ ಮಟ್ಟದ ಹಗರಣ ನಡೆದಿದೆ ಎಂದು ಸಾಕ್ಷಿಗಳ ಸಮೇತ ಬಿಚ್ಚಿಟ್ಟಿದ್ದರು. ಆ ಬಳಿಕ ಇದೀಗ ಫೋಟೋ ಸಮೇತ ಅಶ್ವತ್ಥ ನಾರಾಯಣ ಹಾಗು ಬಿಎಂಎಸ್ ಟ್ರಸ್ಟ್ ನಡುವೆ ಇರುವ ಸಂಬಂಧವನ್ನು ಎಳೆಎಳೆಯಾಗಿ ಜನರಿಗೆ ಅರ್ಥ ಮಾಡಿಸುವ ಕೆಲಸ ಮಾಡಿದ್ದಾರೆ. ಇನ್ನು ಮಾತು ಮಾತಿಗೆ ಟಾಂಗ್ ಕೊಡುತ್ತಿದ್ದ ಸಿ.ಟಿ ರವಿ ಇನ್ಮುಂದೆ ಕುಮಾರಸ್ವಾಮಿ ವಿಚಾರಕ್ಕೆ ಹೋಗುವುದು ಬೇಡಪ್ಪ ಎನ್ನುವ ರೀತಿಯ ಪ್ರಕರಣವನ್ನು ಹೊರಕ್ಕೆ ಎಳೆದು ತಂದಿತ್ತಾರೆ. ಇನ್ನು ನಾನು ಅಧಿಕಾರಕ್ಕೆ ಬಂದರೆ ಇವರನ್ನೆಲ್ಲಾ ಸುಮ್ಮನೆ ಬಿಡಲ್ಲ ಎಂದೂ ಗುಡುಗಿದ್ದಾರೆ. ಕುಮಾರಸ್ವಾಮಿ ಕೊಟ್ಟಿರುವ ಮಾಹಿತಿ ಸತ್ಯವೋ ಸುಳ್ಳೋ..? ಅದನ್ನು ಬಿಜೆಪಿ ನಾಯಕರು ಹೇಳಬೇಕಿದೆ. ಇದನ್ನು ಮುಚ್ಚಿ ಹಾಕಲು ಮತ್ತೊಂದು ಅಸ್ತ್ರವನ್ನು ಬಿಜೆಪಿ ನಾಯಕರು ಹುಡುಕುವ ಬದಲು ಬೆಳ್ಳಿ ತಟ್ಟೆಯ ಊಟ ಹಾಗು KRS ಡ್ಯಾಂನಲ್ಲಿ ಬಿದ್ದು ಸತ್ತ ಮಾಸ್ಟರ್ ಯಾರು..? ಸಿಟಿ ರವಿಗೂ ಆ ಸಾವಿಗೂ ಏನು ಸಂಬಂಧ ಎನ್ನುವುದನ್ನು ಜನತೆಯ ಮುಂದೆ ಇಡಬೇಕಿದೆ. ಇಲ್ಲದಿದ್ದರೆ ಕುಮಾರಸ್ವಾಮಿ ಎದುರು ಬಾಲು ಮುದುರಿಕೊಂಡರೆ ಕುಮಾರಸ್ವಾಮಿ ಹೇಳಿದ್ದು ಸತ್ಯ ಎನ್ನುವುದು ಖಚಿತ ಆಗಲಿದೆ.