ಬೆಂಗಳೂರು – ಮೈಸೂರು ನಡುವಿನ 117 ಕಿಲೋ ಮೀಟರ್ 6 ಪಥದ (ಸರ್ವೀಸ್ ರಸ್ತೆ 4 ಪಥ) ರಸ್ತೆ ನಿರ್ಮಾಣ ಆಗಿದೆ. ಎರಡು ನಗರಗಳಾದ ಬೆಂಗಳೂರು ಹಾಗು ಮೈಸೂರು ನಗರಗಳ ನಡುವೆ ನಿರ್ಮಿಸಿರುವ ದಶಪಥ ಹೆದ್ದಾರಿ ಯಾರಿಗೆ ಉಪಯೋಗ..? ಟೋಲ್ ಮೂಲಕ ಹಣ ಮಾಡಲು ಯಾರಿಗೆ ರಹದಾರಿ..? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಅದರಲ್ಲೂ ರಾಮನಗರ, ಮಂಡ್ಯ ಜಿಲ್ಲೆಗಳ ಜನರು ಈ ಹೆದ್ದಾರಿಯನ್ನು ಬಳಸುವುದಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ಎಲ್ಲಿಯೂ ಇಳಿದು ಹೋಗಲು ಅವಕಾಶ ಕೊಟ್ಟಿಲ್ಲ. ಮತ್ತೆ ಹೆದ್ದಾರಿಗೆ ಮಧ್ಯದಲ್ಲಿ ಎಲ್ಲಿಯೂ ಪ್ರವೇಶಕ್ಕೂ ಅವಕಾಶ ಕೊಟ್ಟಿಲ್ಲ ಅನ್ನೋದು ಕುಮಾರಸ್ವಾಮಿ ಪ್ರಶ್ನೆಯ ಮೂಲ ಉದ್ದೇಶ. ಇನ್ನು ಬಿಡದಿಯಿಂದ ಶುರುವಾಗಿ ಮೈಸೂರು ತನಕವೂ ರಸ್ತೆಯ ಅಕ್ಕಪಕ್ಕದಲ್ಲಿ ನೂರಾರು ಕುಟುಂಬಗಳು ಜೀವನ ಕಟ್ಟಿಕೊಂಡಿದ್ದವು. ವಿವಿಧ ರೀತಿಯ ವ್ಯಾಪಾರ ವಹಿವಾಟು ನಡೆಸಿ ಜೀವನ ಮಾಡುತ್ತಿದ್ದರು. ಈ ಹೆದ್ದಾರಿಯಿಂದ ಅವರಿಗೂ ಅನುಕೂಲ ಇಲ್ಲ ಎಂದಿದ್ದಾರೆ.
ಲ್ಯಾಂಬೋರ್ಗಿನಿಯಲ್ಲಿ ಪ್ರಯಾಣ ಮಾಡುವ ಜನಕ್ಕೆ ಅನುಕೂಲ..!
ರಾಮನಗರ, ಮಂಡ್ಯ ಜನರಿಗೆ ಇದರಿಂದ ಅನುಕೂಲ ಇಲ್ಲ ಅನ್ನೋದು ಸತ್ಯ ಕೂಡ ಹೌದು. ಅದರ ಜೊತೆಗೆ ಸಣ್ಣ ಪುಟ್ಟ ಅಂಗಡಿ ಮೂಲಕ ಬದುಕು ಕಟ್ಟಿಕೊಂಡಿದ್ದ ಬಡವರ ಬದುಕಿಗೆ ಕೊಳ್ಳಿ ಇಟ್ಟಿದೆ ಈ ಹೆದ್ದಾರಿ ಅನ್ನೋದು ಕೂಡ ಸತ್ಯವೇ ಆಗಿದೆ. ಆದರೂ ಒಂದು ರಾಜ್ಯದ ಅಭಿವೃದ್ಧಿಗೆ ಹೆದ್ದಾರಿಗಳು ಮುಖ್ಯ ಅನ್ನೋದು ಕೂಡ ಅಷ್ಟೇ ಸತ್ಯ. ಈ ಹೆದ್ದಾರಿ ಮೂಲಕ ಬೆಂಗಳೂರಿನಿಂದ ಮೈಸೂರಿಗೆ ಕೇವಲ 90 ನಿಮಿಷದಲ್ಲಿ ತಲುಪಬಹುದು ಎನ್ನಲಾಗಿದೆ. ಟೋಲ್ ದರ ಕೂಡ ದುಬಾರಿ ಆಗಿದೆ. ಶ್ರೀಮಂತರು, ದೊಡ್ಡ ದೊಡ್ಡ ಅತಿವೇಗದ ಕಾರುಗಳಲ್ಲಿ ಸಂಚಾರ ಮಾಡುವ ನಟ ನಟಿಯರು, ರಾಜಕಾರಣಿಗಳ ಮಕ್ಕಳಿಗೆ ಮಾತ್ರ ಈ ಹೆದ್ದಾರಿ ಮೀಡಲಾಗುವ ಸಾಧ್ಯತೆ ಇದೆ. ದುಬಾರಿ ಟೋಲ್ ದರ ಪಾವತಿ ಮಾಡಿ ಹೆದ್ದಾರಿಯಲ್ಲಿ ಹೋಗುವ ಬದಲು ಸರ್ವೀಸ್ ರಸ್ತೆ ಮತ್ತೆ ಸಂಚಾರ ದಟ್ಟಣೆ ಅನುಭವಿಸುವ ಸಾಧ್ಯತೆ ಇದೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣದ ಜನರು ಮೈಸೂರಿಗೆ ಹೋಗಿ ವಾಪಸ್ ಬರುವುದಕ್ಕೆ ಸಾಧ್ಯವಿಲ್ಲ. ಪ್ರತಿ ಪಟ್ಟಣಕ್ಕೂ ಪ್ರವೇಶ ಮತ್ತು ನಿರ್ಗಮನಕ್ಕೆ ಹಾದಿ ಕೊಟ್ಟಿದ್ದರೆ ಉತ್ತಮ ಆಗುವ ಸಾಧ್ಯತೆ ಇತ್ತು.
ಮಂಡ್ಯದಲ್ಲೇ ಲೋಕಾರ್ಪಣೆ, ಮಂಡ್ಯ ಜನಕ್ಕೇ ಹೊಡೆತ..!
ಕುಮಾರಸ್ವಾಮಿ ಪಟ್ಟಿ ಮಾಡಿರುವ ಪ್ರಕಾರ, ಈ ದಶಪಥ ಹೆದ್ದಾರಿ ಅತಿ ಹೆಚ್ಚು ಹೊಡೆತ ಬಿದ್ದಿರುವುದು ಮಂಡ್ಯ ಜಿಲ್ಲೆ ಜನರಿಗೆ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಈ ಜಿಲ್ಲೆಗೆ ನಷ್ಟ ಎಂದಿದ್ದಾರೆ. ಮಧ್ಯಮ, ಸಣ್ಣ ಗಾತ್ರದ ಹೊಟೇಲ್, ಸಣ್ಣ-ಅತಿ ಸಣ್ಣ ಉದ್ದಿಮೆ, ಕಬ್ಬು – ಬೆಲ್ಲ, ಪೆಟ್ರೋಲ್ ಬಂಕ್ ಸೇರಿ ಅಗತ್ಯ ವಸ್ತುಗಳ ಸುಮಾರು 2600ಕ್ಕೂ ಹೆಚ್ಚು ಸ್ಥಳೀಯ ಉದ್ಯಮ ನೆಲಕಚ್ಚಿವೆ. ಎಳನೀರು ವ್ಯಾಪಾರಕ್ಕೆ ಎಳ್ಳುನೀರು ಬಿಡಲಾಗಿದೆ. 6000ಕ್ಕೂ ಹೆಚ್ಚು ಜನರ ಜೀವನೋಪಾಯಕ್ಕೆ ಹೆದ್ದಾರಿ ಹೊಡೆತ ಕೊಟ್ಟಿದೆ. ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಜೀವನಾಡಿಯೇ ಆಗಿದ್ದ ಹಳೆಯ ಹೆದ್ದಾರಿಯಲ್ಲಿ ಲಕ್ಷಾಂತರ ಜನರ ಜೀವನಕ್ಕೆ ದಾರಿ ಆಗಿತ್ತು. ಹೊಸ ಹೆದ್ದಾರಿ ಕೆಲವರಿಗೆ ಹಣದ ದಾರಿಯಷ್ಟೆ ಆಗಲಿದೆ. ಜನರ ಜೀವನೋಪಾಯದ ಸರಪಳಿಯನ್ನು ಎಕ್ಸ್ ಪ್ರೆಸ್ ಹೆದ್ದಾರಿ ಬಲಿ ತೆಗೆದುಕೊಂಡಿದೆ. ಅವರ ವೈಯಕ್ತಿಕ ಬದುಕಿಗೆ, ಆರ್ಥಿಕ ಶಕ್ತಿಗೆ ದೊಡ್ಡ ಹೊಡೆತ ಬಿದ್ದಿದೆ. ಇನ್ನು ಹೊಸ ಹೆದ್ದಾರಿಯಿಂದ ಊರುಗಳಿಗೆ ತೆರಳಲು ಕನಿಷ್ಠ 10 ರಿಂದ 25 ಕಿ.ಮೀ. ಸುತ್ತಿ ಬರಬೇಕಿದೆ. ಸ್ಥಳೀಯರಿಗೆ ಸುತ್ತುವ ಶಿಕ್ಷೆ ಯಾಕೆ..? ಭೂಮಿ ಕಳೆದುಕೊಂಡ ಪುಣ್ಯಕ್ಕೆ ಅವರು ಸುತ್ತಿ ಬಳಿಸಿ ಬಸವಳಿದು ತಮ್ಮ ಹಳ್ಳಿಗಳಿಗೆ ಬರಬೇಕಾ..? ಇದು ಯಾವ ಸೀಮೆಯ ನ್ಯಾಯ..? ದಶಪಥ ಕಲ್ಪಿಸಿದ ದೌರ್ಭಾಗ್ಯ ಇದು ಎಂದು ಅಣಕಿಸಿದ್ದಾರೆ.
ಬೈಕ್ ಸವಾರರ ಬಗ್ಗೆಯೂ ದನಿ ಎತ್ತಿದ ಕುಮಾರಸ್ವಾಮಿ..!
ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳಿಗೆ ಅವಕಾಶ ನಿರಾಕರಿಸಿದ್ದು ಏಕೆ..? ಇದು ಅವೈಜ್ಞಾನಿಕ ಮತ್ತು ಅಕ್ಷಮ್ಯ ಎಂದಿರುವ ಕುಮಾರಸ್ವಾಮಿ, ಆರು ಪಥದ ಮುಖ್ಯ ಕಾರಿಡಾರಿನಲ್ಲಿ ಕೊನೆಯ ಪಕ್ಷ ಎರಡನ್ನಾದರೂ ದ್ವಿಚಕ್ರ ವಾಹನಗಳಿಗೆ ಮೀಸಲಿಡಬಾರದೇ..? ಇದೇನು ಬಿಟ್ಟಿ ಉಪಕಾರವಲ್ಲ.. ಆ ಜನರ ಹಕ್ಕು ಎಂದಿದ್ದಾರೆ. 30 ವರ್ಷಕಾಲ ಈ ಹೆದ್ದಾರಿಯಲ್ಲಿ ಸಂಚರಿಸುವ ಜನರು ಟೋಲ್ ಕಟ್ಟುತ್ತಾರೆ. ಸಂಗ್ರಹವಾಗುವ ಶುಲ್ಕದ ಮೂಲಕವೇ ರಸ್ತೆ ನಿರ್ಮಾಣದ ಖರ್ಚನ್ನು ಜನರೇ ಭರಿಸುತ್ತಾರೆ. ಗುತ್ತಿಗೆದಾರರ ಜೇಬಿಗೆ ಬಹುದೊಡ್ಡ ಗಂಟು ಸೇರಲಿದೆ ಎಂದಿರುವ ಮಾಜಿ ಸಿಎಂ ಕುಮಾರಸ್ವಾಮಿ, ಕೇಂದ್ರದ ಬಿಜೆಪಿ ಸರಕಾರದಿಂದ ಈ ಯೋಜನೆಗೆ ಬಿಡಿಗಾಸು ಬಂದಿಲ್ಲ. ದಶಪಥದ ಒಳಲೆಕ್ಕಗಳ ಸತ್ಯ ಜನರಿಗೆ ಗೊತ್ತಾಗಬೇಕಿದೆ. ಕನ್ನಡಿಗರ ಕಣ್ಣಿಗೆ ಮಂಕುಬೂದಿ ಎರಚಿ, ಈ ಸತ್ಯವನ್ನು ಮರೆಮಾಚಿ, ತಾವೇ ಈ ರಸ್ತೆ ನಿರ್ಮಾಣಕ್ಕೆ ಕಾರಣ ಎಂದು ಬಿಜೆಪಿಗರು ಬೊಬ್ಬೆ ಹೊಡೆಯುತ್ತಿರುವುದು ದಶಪಥ ಹೆದ್ದಾರಿ ಹೆಸರಿನಲ್ಲಿ ಮಾಡುತ್ತಿರುವ ಮಹಾದ್ರೋಹ ಎಂದಿದ್ದಾರೆ.
90 ನಿಮಿಷದ ಪ್ರಯಾಣ ಪ್ರಾಣಕ್ಕೆ ಸಂಚಕಾರ ಅಲ್ಲವೇ..!
ಕುಮಾರಸ್ವಾಮಿ ಎತ್ತಿರುವ ವಿಚಾರಗಳಲ್ಲಿ ನಿಜವಾಗಲು ಸತ್ವವಿದೆ. ಹೆದ್ದಾರಿ ಅಕ್ಕಪಕ್ಕ ಜನ ಬದುಕು ಕಟ್ಟಿಕೊಂಡಿದ್ದರು. ಇದೀಗ ಅವರ ಜೀವನಕ್ಕೆ ವ್ಯವಸ್ಥೆ ಏನು..? ಹೆದ್ದಾರಿಯಲ್ಲಿ ಬೈಕ್ ಸವಾರರಿಗೆ ಅವಕಾಶ ಕೊಡಬೇಕು, ಕೊನೆ ಒಂದೊಂದು ಪಥದಲ್ಲಿ ಮಾತ್ರ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಪ್ರತಿಯೊಬ್ಬ ರೈತನು ಕಾರಿನಲ್ಲಿ ಓಡಾಡುವುದಕ್ಕೆ ಸಾಧ್ಯವೇ..? ಅಥವಾ ಎಲ್ಲರೂ ಕಾರಿನಲ್ಲಿ ಓಡಾಡಿ ಎನ್ನುವುದು ಈ ಹೆದ್ದಾರಿ ಪ್ರಾಧಿಕಾರದ ನಿಲುವೇ..? ಇನ್ನು 9 ನಿಮಿಷದಲ್ಲಿ ಸಂಚಾರ ಮಾಡಿ ಎನ್ನುವ ಆಮೀಷ, ಅಪಘಾತಕ್ಕೆ ಕಾರಣ, ನಿಜವಾಗಲು ಒಂದು ಗಂಟೆಗೂ ಅಧಿಕ ಸಮಯ ಕಣ್ಣು ಒಂದೇ ರೀತಿ ಕಾರ್ಯ ನಿರ್ವಹಿಸಿದರೆ ಬಣ್ಣಗಳನ್ನು ಗುರುತಿಲು ಅಶಕ್ತ ಆಗುತ್ತದೆ ಎನ್ನುವುದು ವೈಜ್ಞಾನಿಕ ಅಂಶ. ಹೀಗಿರುವಾಗ 90 ನಿಮಿಷದಲ್ಲಿ ಮೈಸೂರು ಮುಟ್ಟುವ ಗುರಿ ನೀಡುವುದು ಅಪಘಾತಕ್ಕೆ ಆಹ್ವಾನ ಕೊಟ್ಟಂತೆ ಕಾಣಿಸುತ್ತಿದೆ. ಅಲ್ಲಲ್ಲಿ ನಿಂತು ಸಂಚಾರ ಮಾಡುವ ಅವಕಾಶ ಇದ್ದಿದ್ದರೆ ಸ್ವಲ್ಪ ತಡವಾದರೂ ನಿಧಾನಕ್ಕೆ ತೆರಳುವ ಅವಕಾಶವಿತ್ತು. ನಾಡಿನ ಸಂಸ್ಕೃತಿ, ಆಹಾರ ಪದ್ದತಿ ಪರಿಚಯ ಆಗುತ್ತಿತ್ತು. ಇನ್ಮುಂದೆ ಮದ್ದೂರು ವಡೆ, ಕಬ್ಬಿನ ಹಾಲು, ಮಂಡ್ಯದ ಬೆಲ್ಲ, ಬಿಡದಿ ತಟ್ಟೆ ಇಡ್ಲಿ ಎಲ್ಲವೂ ನೆನಪು ಮಾತ್ರ.