ಬಿಜೆಪಿಯ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಕೇಳಿಬಂದಿದ್ದ ಅತ್ಯಾಚಾರ ಆರೋಪದ ತನಿಖೆಯ ಅಂತಿಮ ವರದಿಯನ್ನು ಮ್ಯಾಜಿಸ್ಟ್ರೇಟ್ ಕೋರ್ಟ್ಗೆ ಸಲ್ಲಿಸಲು SITಗೆ ಕರ್ನಾಟಕ ಹೈಕೋರ್ಟ್ ಗುರುವಾರ ಅನುಮತಿ ನೀಡಿದೆ.
ಹೈಕೋರ್ಟಿನ ವಿಭಾಗೀಯ ಪೀಠವು ಎಸ್ಐಟಿಯ ತನಿಖೆಯ ಅಂತಿಮ ವರದಿಯನ್ನು ಸಮರ್ಥ ನ್ಯಾಯಾಲಯದ ಮುಂದೆ ಸಲ್ಲಿಸಲು ಅನುಮತಿ ನೀಡಿದೆ. ಆದರೆ ಎಸ್ಐಟಿಯ ಸಂವಿಧಾನದ ಕಾನೂನು ಬದ್ಧತೆಯ ಪ್ರಶ್ನೆಯನ್ನು ವಾದಗಳಿಗೆ ಮುಕ್ತಗೊಳಿಸಿದೆ. ಅರ್ಜಿದಾರರು ಎತ್ತಿರುವ ಪ್ರಶ್ನೆಗಳನ್ನು ಮುಕ್ತವಾಗಿರಿಸಿದೆ. ಅಂತಿಮ ವರದಿ ಸಲ್ಲಿಕೆಗೆ ಎಸ್ಐಟಿ ಅವಕಾಶ ಕೋರಿತ್ತು. ಸದ್ಯ ಎಸ್ಐಟಿ ತನಿಖೆ ಪ್ರಶ್ನಿಸಿರುವ ಯುವತಿಯ ಅರ್ಜಿ ಬಗ್ಗೆ ಇಂದು ವಿಚಾರಣೆ ನಡಿಸಿದ ಕೋರ್ಟ್ ತನಿಖಾ ವರದಿ ಸಲ್ಲಿಸಲು ಆಕ್ಷೇಪಣೆ ಏನೂ ಇಲ್ಲ ಎಂದು ತಿಳಿಸಿದೆ.
ಸಂತ್ರಸ್ತೆ ಯುವತಿಯ ದೂರಿನಂತೆಯೇ ಎಫ್ಐಆರ್ ದಾಖಲಾಗಿದ್ದು, ಕ್ರೈಮ್ ನಂ. 30/21ಗೆ ಪ್ರತ್ಯೇಕ ತನಿಖಾಧಿಕಾರಿ ನೇಮಕವಾಗಿದೆ. ಯುವತಿ ದೂರಿಗೆ ಸಂಬಂಧಿಸಿದ ತನಿಖೆ ಮುಕ್ತಾಯವಾಗಿದ್ದು, ಅಂತಿಮ ವರದಿ ಸಲ್ಲಿಕೆಗೆ ಅನುಮತಿ ನೀಡುತ್ತಿದ್ದೇವೆ ಎಂದು ಎಸ್ಐಟಿ ಪರ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು.
“ಆರೋಪಿ ರಮೇಶ್ ಜಾರಕಿಹೊಳಿ ಅವರಿಗೆ ರಕ್ಷಣೆ ನೀಡಲು ಸರ್ಕಾರದ ಬದಲು ಪೊಲೀಸ್ ಆಯುಕ್ತರು ಎಸ್ಐಟಿ ರಚಿಸಿದ್ದಾರೆ. ಪೊಲೀಸ್ ಆಯುಕ್ತರಿಗೆ ಎಸ್ಐಟಿ ರಚಿಸುವ ಅಧಿಕಾರವಿಲ್ಲ. ಹೀಗಾಗಿ ಈ ಎಸ್ಐಟಿ ಅಂತಿಮ ವರದಿ ಸಲ್ಲಿಸಬಾರದು ಅಂತ ಯುವತಿ ಪರ ಹಿರಿಯ ವಕೀಲರು ವಾದ ಮಂಡಿಸಿದ್ದಾರೆ. ಎಸ್ಐಟಿಯ ಸಂವಿಧಾನಕ್ಕೆ ಸಂಬಂಧಿಸಿದ ಪ್ರಶ್ನೆ ಮತ್ತು ಈ ಎಸ್ಐಟಿಯ ಸಿಂಧುತ್ವವನ್ನು ಈ ನ್ಯಾಯಾಲಯವು ಪರಿಗಣಿಸುತ್ತದೆ” ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಲೈಂಗಿಕ ಕಿರುಕುಳದ ಸೆಕ್ಸ್ ಸಿಡಿ ಬಹಿರಂಗವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ರಮೇಶ್ ಜಾರಕಿಹೊಳಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಎಸ್ ಟಿ ಸಲ್ಲಿಸುವ ಅಂತಿಮ ವರದಿ ಮೇಲೆ ರಮೇಶ್ ಜಾರಕಿಹೊಳಿ ಭವಿಷ್ಯ ನಿಂತಿದೆ.