ಹಾಸನ: ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ಹಣ ನೀಡದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಅನ್ನು ನ್ಯಾಯಾಲಯ ಜಪ್ತಿ ಮಾಡಿದ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ.

2023ರಲ್ಲಿ ಕೆಎಸ್ಆರ್ಟಿಸಿ ಬಸ್ ಅಪಘಾತದಲ್ಲಿ ಹಾಸನ ಮೂಲದ ರೇಣುಕಪ್ಪ ಮತ್ತು ರವಿ ಕಿರಣ್ ಮೃತಪಟ್ಟಿದ್ದರು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಚನ್ನರಾಯಪಟ್ಟಣ ನ್ಯಾಯಾಲಯವು, ಮೃತರ ಕುಟುಂಬಕ್ಕೆ ಒಟ್ಟು 32.5 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೆಎಸ್ಆರ್ಟಿಸಿಗೆ ಆದೇಶಿಸಿತ್ತು. ಆದರೆ ಘಟನೆ ನಡೆದು ಎರಡೂವರೆ ವರ್ಷ ಕಳೆದರೂ ಚಿಕ್ಕಮಗಳೂರು ವಿಭಾಗದ ಅಧಿಕಾರಿಗಳು ಪರಿಹಾರ ಹಣ ಪಾವತಿಸಿರಲಿಲ್ಲ.

ಇದರಿಂದ ಬೇಸರಗೊಂಡ ಮೃತರ ಕುಟುಂಬಸ್ಥರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಹಾರ ನೀಡದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿಪೋಗೆ ಸೇರಿದ ಬಸ್ಗಳನ್ನು ಜಪ್ತಿ ಮಾಡುವಂತೆ ನ್ಯಾಯಾಲಯ ಕಠಿಣ ಆದೇಶ ನೀಡಿತ್ತು. ಇಂದು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ನ್ನು ಚನ್ನರಾಯಪಟ್ಟಣದಲ್ಲಿ ಸೀಜ್ ಮಾಡಲಾಯಿತು. ಈ ದಿಢೀರ್ ಕ್ರಮದಿಂದ ಬಸ್ನಲ್ಲಿದ್ದ ಪ್ರಯಾಣಿಕರು ನಡುರಸ್ತೆಯಲ್ಲಿ ಇಳಿದು ಪರದಾಡುವಂತಾಯಿತು.







