ಕರೋನಾ ಸೋಂಕಿನಿಂದ ಇಡೀ ದೇಶದ ಭವಿಷ್ಯ ಕತ್ತಿಯ ಹಲಗಿನ ಮೇಲೆ ನಿಂತು ಬ್ಯಾಲೆನ್ಸ್ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಅದೆಷ್ಟು ಜನರ ಪ್ರಾಣಕ್ಕೆ ಕತ್ತಿಯ ಮೊನಚಾದ ಹಲಗು ತಾಗುತ್ತದೆಯೋ..? ಎನ್ನುವುದು ಮಾತ್ರ ಯಾರಿಗೂ ತಿಳಿಯುತ್ತಿಲ್ಲ., ಈ ನಡುವೆ ಕತ್ತಿಯ ಹಲಗಿನ ಮೇಲೆ ನಿಂತಿರುವ ಕೋಟ್ಯಂತರ ಮಂದಿ ಖಾಸಗಿ ಉದ್ಯೋಗಿಗಳು ಗುಂಪು ಗುಂಪಾಗಿ ಮೊನಚು ಹಲಗಿಗೆ ತಾಗಿ ಕೆಲಸ ಕಳೆದುಕೊಳ್ತಿದ್ದಾರೆ. ಖಾಸಗಿ ವಲಯದ ಶೇಕಡ 70 ರಷ್ಟು ಜನರು ಉದ್ಯೋಗ ಕಳೆದುಕೊಂಡು ಬೀದಿಗೆ ಬೀಳಲಿದ್ದಾರೆ ಎನ್ನುವ ವರದಿಗಳು ಜನರನ್ನು ದಿಕ್ಕೆಡುವಂತೆ ಮಾಡಿದೆ. ಖಾಸಗಿ ಉದ್ಯೋಗಿಗಳ ಬದುಕು ಬರಡಾಗುವ ಲಕ್ಷಣಗಳು ಗೋಚರಿಸುತ್ತಿರುವ ಬೆನ್ನಲ್ಲೇ ಸರ್ಕಾರಿ ನೌಕರರ ಕೆಲಸಕ್ಕೂ ಅಭದ್ರತೆ ಶುರುವಾಗಿದೆ. ಸ್ವತಃ ಸರ್ಕಾರವೇ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಸಿದ್ಧತೆ ನಡೆಸಿದೆ.
ಗಾರ್ಮೆಂಟ್ ಸೇರಿದಂತೆ ಕಾರ್ಖಾನೆಗಳಿಗೆ ಶೇಕಡ 10 ರಿಂದ 30 ರಷ್ಟು ಮಾತ್ರ ವರ್ಕ್ ಆರ್ಡರ್ ಬರುತ್ತಿದ್ದು, ಪೂರ್ಣ ಪ್ರಮಾಣದ ಕಾರ್ಮಿಕರನ್ನು ಬಳಸಿ ಕೆಲಸ ಮಾಡುವುದು ಸಾಧ್ಯವಿಲ್ಲ ಎನ್ನುವುದು ಉದ್ಯಮಿಗಳ ವಾದ. ಅದೇ ಕಾರಣಕ್ಕೆ ಉದ್ಯೋಗಿಗಳಿಗೆ ಸೋಡಾ ಚೀಟಿ ಕೊಟ್ಟು ಕಳುಹಿಸುವ ನಿರ್ಧಾರ ಮಾಡುತ್ತಿದ್ದಾರೆ. ಆದರೆ ಸರ್ಕಾರವೂ ಕೂಡ ಆರ್ಥಿಕ ಮುಗ್ಗಟ್ಟನ್ನು ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ತನ್ನ ನೌಕರರನ್ನು ಮನೆಗೆ ಕಳುಹಿಸುವ ತಯಾರಿ ನಡೆಸಿದೆ.
ಈಗಾಗಲೇ ಕೆಎಸ್‌ಆರ್‌ಟಿಸಿ ಗುತ್ತಿಗೆ ಸಿಬ್ಬಂದಿಗಳನ್ನ ಕೆಲಸದಿಂದ ವಜಾ ಮಾಡಲಾಗಿದೆ. ವಜಾಗೊಂಡ ನೌಕರರು ಸಿಎಂ ಯಡಿಯೂರಪ್ಪ ಭೇಟಿ ಮಾಡಿ, ನಮ್ಮ ಬದುಕು ಬೀದಿಗೆ ಬಿದ್ದಂತಾಗಿದೆ. ಕಳೆದ 12 ತಿಂಗಳಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದೆವು. ಇದೀಗ ಏಕಾಏಕಿ ಲಾಕ್‌ಡೌನ್ ನಡುವೆ ಕೆಲಸದಿಂದ 2 ಸಾವಿರ ನೌಕರರನ್ನು ವಜಾ ಮಾಡಿದ್ದಾರೆ ಎಂದು ನೋವು ತೋಡಿಕೊಂಡಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ KSRTC 2 ಸಾವಿರ ಸಿಬ್ಬಂದಿಗಳಲ್ಲಿ ಕೆಲವರಿಗೆ ಈಗಾಗಲೇ ರಿಲೀವಿಂಗ್ ಲೆಟರ್ ತಲುಪಿದ್ದು, ಇನ್ನಷ್ಟು ಜನರಿಗೆ ಇನ್ನಷ್ಟೇ ತಲುಪಬೇಕಿದೆ. ಈ ತಿಂಗಳೇ ಕೊನೇ ಎಂದು ರಿಲೀವ್ ಲೆಟರ್ ಕಳುಹಿಸಿದ್ದಾರೆ. ಈಗ ಕೆಲಸದಿಂದ ತೆಗೆದು ಹಾಕಿದ್ರೆ ನಾವು ಎಲ್ಲಿಗೆ ಹೋಗಬೇಕು ಎಂದು ಗುತ್ತಿಗೆ ನೌಕರರು ನೋವು ತೋಡಿಕೊಂಡಿದ್ದು, ಕೆಲಸದಲ್ಲಿ ಮುಂದುವರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಗುತ್ತಿಗೆ ನೌಕರರು ಮಾತ್ರವಲ್ಲ, ಕಾಯಂ ನೌಕರರಿಗೂ ಕುತ್ತು..!
ಹೌದು, ಕಳೆದ ಕೆಲವು ದಿನಗಳಲ್ಲಿ ಮಾಧ್ಯಮಗಳಲ್ಲಿ ಹೀಗೊಂದು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಸಾರಿಗೆ ಇಲಾಖೆ ತನ್ನ ನೌಕರರನ್ನು ಅರ್ಧ ವೇತನ ಕೊಟ್ಟು ಮನೆಯಲ್ಲೇ ಉಳಿದುಕೊಳ್ಳುವಂತೆ ಮಾಡಲು ಯೋಜನೆ ರೂಪಿಸಿದೆ ಎನ್ನಲಾಗಿತ್ತು. ಆದರೆ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವಧಿ ಮಾತನಾಡಿ, ಗುತ್ತಿಗೆ ನೌಕರರನ್ನು ಸ್ವಲ್ಪ ದಿನ ಮನೆಯಲ್ಲಿರಲು ಸೂಚಿಸಲು ಪ್ರಸ್ತಾವನೆ ಇದೆ ಎಂದಿದ್ದರು. ಇದೀಗ ಸೋಡಾ ಚೀಟಿ ಕೊಟ್ಟು ಮನೆಗೆ ಕಳುಹಿಸಿದೆ.
ಆದ್ರೆ, ಕೆಎಸ್‌ಆರ್‌ಟಿಸಿ ಕಾಯಂ ನೌಕರರ ಕೆಲಸಕ್ಕೂ ಇದೀಗ ಕುತ್ತು ಬಂದಿದೆ. ಮಂಗಳವಾರ ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಶಿವಯೋಗಿ ಸಿ ಕಳಸದ ಅವರು ಒಂದು ಸುತ್ತೋಲೆ ಹೊರಡಿಸಿದ್ದು, ಕರೋನಾ ಸಂಕಷ್ಟ ಕಾಲದಲ್ಲಿ ನೌಕರರ ಆರೋಗ್ಯ ಹಿತದೃಷ್ಟಿಯಿಂದ ದೈಹಿಕ ಅಸಮರ್ಥಗೊಂಡ ನಿಗಮದ ಅಧಿಕಾರಿಗಳು ನೌಕರರು ಸ್ವಯಂ ನಿವೃತ್ತಿ ಪಡೆಯುವುದಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದಿದ್ದಾರೆ. ಎಲ್ಲಾ ವರ್ಗದ ಅಧಿಕಾರಿಗಳು ನೌಕರರು ಸ್ವಯಂ ನಿವೃತ್ತಿ ಪಡೆಯಲು ಅರ್ಹರಾಗಿದ್ದು, ಸ್ವಯಂ ನಿವೃತ್ತಿ ಪಡೆದರೆ ಆಕರ್ಷಕ ಸ್ವಯಂ ನಿವೃತ್ತಿ ಯೋಜನೆಯ ಸೌಲಭ್ಯವನ್ನು ಕೊಡಲಾಗುವುದು ಎಂದು ಆಸೆ ಹುಟ್ಟಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಆಡಳಿತಾತ್ಮಕ ಕಾರಣ ಎನ್ನುವುದನ್ನೂ ಸಾರಿಗೆ ನಿಗಮ ಒಪ್ಪಿಕೊಂಡಿದೆ. ಆಡಳಿತಾತ್ಮಕ ಕಾರಣ ಎಂದರೆ ವೇತನ ಸಮಸ್ಯೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಕರೋನಾ ನಷ್ಟದಿಂದ ಪಾರಾಗುವ ಉದ್ದೇಶದಿಂದ ಕಾಯಂ ನೌಕರರನ್ನು ಸ್ವಯಂ ನಿವೃತ್ತಿ ಹೊಂದುವಂತೆ ಸಾರಿಗೆ ನಿಗಮ ಪಸ್ತಾವನೆ ಮುಂದಿಟ್ಟಿದೆ. ದೈಹಿಕವಾಗಿ ಹಾಗೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಮಿಕರಿಗೆ ಇದರಿಂದಒಳಿತು ಆಗಲಿದೆ ಎನ್ನುವುದು ಸರಿಯಷ್ಟೆ. ಆದ್ರೆ 45 ರಿಂದ 50 ವರ್ಷ ತುಂಬಿರುವ ಎಲ್ಲರಿಗೂ ನಿವೃತ್ತಿ ಪಡೆಯುವಂತೆ ಒತ್ತಡ ಹೇರುವ ಕೆಲಸ ಮಾಡಲಾಗ್ತಿದೆ ಎನ್ನಲಾಗಿದೆ. ಕೆಎಸ್‌ಆರ್‌ಟಿಸಿ ಮಾತ್ರವಲ್ಲ, ಬಿಎಂಟಿಸಿಯಲ್ಲೂ ಇದೇ ಸೂತ್ರ ಜಾರಿ ಮಾಡಲು ಸಿದ್ಧತೆಗಳು ನಡೆಯುತ್ತಿದ್ದು, ಈಗ ಕೆಲಸ ಬಿಟ್ಟು ಹೋದರೆ ಕಾಸು ಕೊಡ್ತೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಎಲ್ಲಿಗೆ ತಲುಪಲಿದೆಯೋ ಗೊತ್ತಿಲ್ಲ ಎನ್ನುವ ಮಾತುಗಳು ಅಧಿಕಾರಿಗಳ ವಲಯದಿಂದ ಬರುತ್ತಿದೆ.
ಸಂಸ್ಥೆಯ ಈ ನಿರ್ಧಾರ ಯಾಕೆ ಗೊತ್ತಾ..?
ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಂಸ್ಥೆಗಳ ನೌಕರರು ನೇರವಾಗಿ ಸರ್ಕಾರದ ಅಧೀನದಲ್ಲಿ ಕೆಲಸ ಮಾಡುವುದಿಲ್ಲ. ಅವುಗಳು ಸಾರಿಗೆ ಇಲಾಖೆಯ ಸ್ವತಂತ್ರ ಸಂಸ್ಥೆಗಳು. ಸಂಸ್ಥೆಯೇ ನೌಕರರ ವೇತನ, ಖರ್ಚು ವೆಚ್ಚವನ್ನೆಲ್ಲಾ ಸರಿದೂಗಿಸಬೇಕು. ನಷ್ಟವಾದರೂ ಸಂಸ್ಥೆಯೇ ಹೊಣೆ ಹೊರಬೇಕು. ಲಾಭ ಬಂದರೂ ಅದು ಸಂಸ್ಥೆಯಲ್ಲೇ ಉಳಿಯಲಿದೆ. ಆದರೆ ಇದೀಗ ಕಳೆದ ಮೂರು ತಿಂಗಳಿಂದ ಕರೋನಾ ಲಾಕ್‌ಡೌನ್ ಆಗಿದ್ದು, ಸಾರಿ ಸಂಸ್ಥೆಗಳು ನಷ್ಟದಲ್ಲಿದೆ. ಇದೀಗ ಸಾರಿಗೆ ಇಲಾಖೆ ಸಂಚಾರ ಶುರು ಮಾಡಿದರೂ ಜನರು ಕರೋನಾ ಭೀತಿಯಲ್ಲಿ ಬಸ್ ಹತ್ತುವುದಕ್ಕೆ ಹಿಂಜರಿಯುತ್ತಿದ್ದಾರೆ. ಇದು ಸಮಸ್ಯೆಗೆ ಬಹುಮುಖ್ಯ ಕಾರಣ. ಕರೋನಾ ಸೋಂಕು ಕಡಿಮೆಯಾಗಿ ಯಾವುದೇ ಸಮಸ್ಯೆ ಇಲ್ಲ ಎನ್ನುವ ತನಕವೂ ಜನರು ಬಸ್ ಹತ್ತುವುದು ಬಹುತೇಕ ಕಷ್ಟ. ಇದೇ ಕಾರಣದಿಂದ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಇನ್ನೊಂದು ಬಹುಮುಖ್ಯ ಕಾರಣ ಸಾರಿಗೆ ಸಿಬ್ಬಂದಿಗೆ ಕೊಡುತ್ತಿರುವ ವೇತನ.
ಮಾರ್ಚ್ ತಿಂಗಳಿಂದ ಲಾಕ್‌ಡೌನ್ ಆರಂಭವಾಗಿದೆ. ರಾಜ್ಯ ಸಾರಿಗೆ ಸಂಸ್ಥೆಗಳಾದ KSRTC, BMTC, NWKRTC, NEKRTC ಸಾರಿಗೆ ಸಂಸ್ಥೆಗಳ ಸಿಬ್ಬಂದಿಗಳಿಗೆ ತಿಂಗಳ ವೇತನವೇ ಬರೋಬ್ಬರಿ 325 ಕೋಟಿ ಆಗುತ್ತದೆ. ಮಾರ್ಚ್ ತಿಂಗಳಿಂದ ಯಾವುದೇ ಸಂಚಾರ ನಡೆಸದೆ ಇರುವ ಕಾರಣ ಸಂಸ್ಥೆಗೆ ಯಾವಯದೇ ಆದಾಯದ ಮೂಲ ಇಲ್ಲ. ಹಾಗಾಗಿ ವೇತನ ಕೊಡುವುದಕ್ಕೂ ಕಷ್ಟವಾಗಿದೆ. ಸಿಬ್ಬಂದಿಗಳಿಗೆ ವೇತನ ನೀಡಲು ಸಹಾಯ ಮಾಡುವಂತೆ ಸಾರಿಗೆ ಸಚಿವರು ಮನವಿ ಮಾಡಿದ್ದರಿಂದ ಕಳೆದ ಮೂರು ತಿಂಗಳು ಅರ್ಧದಷ್ಟು ಹಣವನ್ನು ರಾಜ್ಯ ಸರ್ಕಾರವೇ ನೀಡಿತ್ತು. ಮೇ ತಿಂಗಳಲ್ಲಿ ವೇತನ ನೀಡಲು ಸಾಧ್ಯವೇ ಇಲ್ಲ ಎನ್ನುವ ಪರಿಸ್ಥಿತಿ ಬಿಗಡಾಯಿಸಿದ್ದರಿಂದ ಸರ್ಕಾರ ವಿಶೇಷ ಅನುದಾನ ನೀಡಬೇಕೆಂದು ಮನವಿ ಮಾಡಿದ್ದರು. ಹಾಗಾಗಿ ಗುರುವಾರ ಸಂಜೆ ಮೇ ತಿಂಗಳ ವೇತನಕ್ಕಾಗಿ 325.01 ಕೋಟಿ ರೂಪಾಯಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.
ಒಟ್ಟಾರೆ, ರಾಜ್ಯದ ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕುವುದು ಬಹುತೇಕ ಖಚಿತ. ಅದರಿಂದ ಹೊರ ಬಹುವ ಮಾರ್ಗ ಅಧಿಕಾರಿಗಳಿಗಂತು ತಿಳಿಯದಾಗಿದೆ. ಅದೇ ಕಾರಣದಿಂದ ಗುತ್ತಿಗೆ ನೌಕರರನ್ನು ಮನೆಗೆ ಕಳುಹಿಸಲಾಗಿದೆ. ಕಾಯಂ ನೌಕರರಿಗೂ ಸ್ವಯಂ ನಿವೃತ್ತಿ ಯೋಜನೆ ಜಾರಿ ಮಾಡಿದೆ. ಆದರೆ ಕೆಲಸ ಕಳೆದುಕೊಳ್ಳುವ ನೌಕರರು ಮುಂದಿನ ಜೀವನ ಹೇಗೆ ಸಾಗಿಸುವುದು ಎನ್ನುವ ಆತಂಕ ಮನೆ ಮಾಡಿದೆ.