ಶಿವಮೊಗ್ಗ ನಗರ ದೊಡ್ಡಪೇಟೆ ವ್ಯಾಪ್ತಿಯ ಅಂಗಡಿ ಹಾಗೂ ಗೂಡಂಗಡಿಗಳಲ್ಲಿ ಬಿಡಿ ತಂಬಾಕು ಉತ್ಪನ್ನಗಳನ್ನ ಮಾರಾಟ ಮಾಡುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಮಾರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಕೆಎಸ್ ಈಶ್ವರಪ್ಪ ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ. ದೊಡ್ಡಪೇಟೆ ಪಿಐ ಹರೀಶ್ ಪಟೇಲ್‌ಗೆ ಫೋನ್ ಮಾಡಿದ ಈಶ್ವರಪ್ಪ ಬೇರೆ ಕಡೆ ಇಲ್ಲದ ಕಾನೂನು ಶಿವಮೊಗ್ಗಕ್ಕೇಕೆ..? ಪ್ರಕರಣ ದಾಖಲಿಸಬೇಡಿ ಎಂದು ಬಾಲಿಶವಾಗಿ ಮಾತಿನ ಚಕಮಕಿ ನಡೆಸಿದ್ದಾರೆ.
ಪಿಐಗೆ ಕಾಲ್ ಮಾಡಿ ನಾಲ್ಕೈದು ಅಂಗಡಿಗಳಿಂದ ತಂಬಾಕು ಉತ್ಪನ್ನಗಳನ್ನ ವಶಪಡಿಸಿಕೊಂಡು ಹೋಗಿದ್ದೀರಂತಲ್ಲ ಏಕೆ ಎಂದು ಈಶ್ವರಪ್ಪ ಕೇಳಿದರು. ಅದಕ್ಕೆ ಪಿಐ ಬಿಡಿ ಉತ್ಪನ್ನ ಮಾರಾಟ ಕಾನೂನು ಬಾಹಿರ ಸಾರ್ ಎಂದರು. ಅದಕ್ಕೆ ಈಶ್ವರಪ್ಪ ಇದಕ್ಕೇನು ಪರಿಹಾರ ಎಂದು ಮರುಪ್ರಶ್ನೆ ಹಾಕಿದರು. ಅದಕ್ಕೆ ಪ್ರತ್ಯುತ್ತರವಾಗಿ ಪಿಐ ಸಾರ್ ಮಾರಾಟ ಮಾಡಬಾರದು ಬೇಕಿದ್ದರೆ ಪ್ಯಾಕ್ ಸಿಗರೇಟ್ ನೀಡಬಹುದು ಎಂದು ಹೇಳಿದರು.
ಈಶ್ವರಪ್ಪ ಪಿಐಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು. ನಾನೊಂದು ಪ್ಯಾಕ್ ಸಿಗರೇಟ್ ತರ್ತಿನಿ ಅದನ್ನ ರಸ್ತೆ ಮೇಲೆ ಹೊಡೀತ್ತೀನಿ ಆಗ ನೀವು ಪ್ರಕರಣ ದಾಖಲಿಸಿ, ಸಿಗರೇಟ್ ಸೇದೋವನಿಗೆ ಹಿಡ್ಕೊಂಡು ಒದೀರಿ. ಸಿಗರೇಟ್ ಮಾರೋದಕ್ಕೆ ಅನುಮತಿ ಇದೆ ತಾನೇ..? ಸಿಂಗಲ್ ಆಗಿ ಮಾರಬಾರದಾ..? ಇದು ಯಾವಾಗಿಂದ ಇರೋ ಕಾನೂನು..? ಇದ್ದಕ್ಕಿದ್ದಂತೆ ಈ ಕಾನೂನು ಯಾಕೆ ಅನುಷ್ಟಾನ ಮಾಡ್ತಾ ಇದ್ದೀರಾ..? ರಾಜ್ಯದಲ್ಲಿ ದೇಶದಲ್ಲಿ ಇಲ್ಲದ ಕಾನೂನು ಶಿವಮೊಗ್ಗಕ್ಕೆ ತಂದಿದ್ದೀರೇನೂ..? ಯಾರು ಸಿಗರೇಟ್ ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಾರೋ ಅಂಥವರನ್ನ ಒದ್ದು ಲಾಕಪ್‌ಗೆ ಹಾಕಿ. ಅಂಗಡಿಯಲ್ಲಿ ಸಿಗರೇಟ್ ಮಾರಬೇಡಿ ಎಂಬುದು ಹುಚ್ಚು ಆದೇಶ ಅಲ್ವಾ ಎಂದು ಈಶ್ವರಪ್ಪ ಕಾನೂನನ್ನೇ ಪ್ರಶ್ನಿಸಿದರು.
ಪಿಐ ಹರೀಶ್ ಪಟೇಲ್ ಸಚಿವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು. ಸಾರ್ ಬಿಡಿ ಬಿಡಿಯಾಗಿ ಸಿಗರೇಟ್ ಮಾರುವುದೂ ಕೂಡ ಕಾನೂನಿನಲ್ಲಿ ಅಪರಾಧ. ಅದರ ಬಗ್ಗೆಯೂ ಅಂಗಡಿಗಳಿಗೆ ಅರಿವಿರಬೇಕು ಎಂದು ಹೇಳಿದರು.
ಈಶ್ವರಪ್ಪ ಮಾತ್ರ ಪೊಲೀಸ್ ಅಧಿಕಾರಿಯ ಮಾತಿನಿಂದ ತೃಪ್ತರಾಗಲಿಲ್ಲ. ಶಿವಮೊಗ್ಗ ಎಸ್‌ಪಿಗೆ ಈಗ ಎಚ್ಚರ ಆಯ್ತಾ..? ಅಂಗಡಿಯವರು ಜೀವನ ಹೇಗೆ ಮಾಡಬೇಕು. ಹೌದಪ್ಪ ಕಾಯ್ದೆ ೨೦೦೯ರಿಂದಲೇ ಇದೆ ಎಂದು ಈಗ ಹೇಳ್ತಾ ಇದ್ದೀಯಾ, ಇಷ್ಟು ದಿನ ಶಿವಮೊಗ್ಗದಲ್ಲಿ ಇಲ್ಲದ ಕಾಯ್ದೆ ಈಗೇಕೆ ತರ್ತಾ ಇದ್ದೀರಾ. ಪೊಲೀಸ್ ಅಧಿಕಾರಿಗಳು ನನ್ನನ್ನ ಸುಮ್ಮನೇ ಮೈ ಮೇಲೆ ಎಳೆದುಕೊಳ್ತೀರಾ ಎಂದು ಗದರಿದರು. ಅಂಗಡಿಯಲ್ಲಿ ಮಾರಬಾರದು ಅಂತ ಕಾನೂನಿದ್ಯಾ..? ಮೊದಲು ಜನರಿಗೆ ಅರಿವು ಮೂಡಿಸುವ ಕಾನೂನು ಮಾಡಿ. ನಂತರ ಅಂಗಡಿ ಮೇಲೆ ಕಾನೂನು ಚಲಾಯಿಸಿ. ಶಿವಮೊಗ್ಗ ಎಸ್‌ಪಿ ಈ ಕೆಲಸಕ್ಕೆ ಮುಂದಾಗುವಂತೆ ತಿಳಿ ಹೇಳಿ ಎಂದು ಪಿಐಗೆ ಉತ್ತರವೂ ನೀಡದಂತೆ ಏರು ದನಿಯಲ್ಲಿ ಮಾತನಾಡಿದ್ದಾರೆ.