ಎಪ್ಪತ್ತು ವರ್ಷದ ಈ ವ್ಯಕ್ತಿ ಒಂದು ಕಾಲದಲ್ಲಿ ವೈದ್ಯರು. ಅರಿವಳಿಕೆಯ ತಜ್ಞರಾಗಿ ರೋಗ ಚಿಕಿತ್ಸೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದರು. ಈಗಲೂ ಅರಿವಳಿಕೆ ಪಡೆದ ಸ್ಥಿತಿಯಲ್ಲಿರುವ ವ್ಯವಸ್ಥೆಗೆ ಮದ್ದು ನೀಡುವ ಹೋರಾಟಕ್ಕೆ ಮುಂಚೂಣಿಯಲ್ಲಿದ್ದಾರೆ.
ಕಳೆದ ಒಂದೂವರೆ ತಿಂಗಳಿನಿಂದ ದೆಹಲಿಯ ನಾಲ್ಕು ದಿಕ್ಕುಗಳಲ್ಲಿ ನಡೆಯುತ್ತಿರುವ ರೈತ ಹೋರಾಟದ ನೇತೃತ್ವವಹಿಸಿರುವ ಇವರ ಹೆಸರು ದರ್ಶನ್ ಪಾಲ್. ಕ್ರಾಂತಿಕಾರಿ ಕಿಸಾನ್ ಯೂನಿಯನ್ ಪಂಜಾಬ್ನ ಅಧ್ಯಕ್ಷರಾದ ಇವರು ಕಳೆದ ಜೂನ್ ತಿಂಗಳಿಂದ ರೈತರನ್ನು ಸಂಘಟಿಸುತ್ತಿದ್ದಾರೆ.
ಮೂಲತಃ ಪಟಿಯಾಲದವರಾದ ಪಾಲ್, ವೈದ್ಯರಾಗಿ ಸೇವೆ ಸಲ್ಲಿಸುತ್ತಲೇ ಹಲವು ರೈತ-ಕಾರ್ಮಿಕ ಸಮಸ್ಯೆಗಳ ಪರವಾಗಿ ಹೋರಾಡಿದವರು. ರೈತ ಸಾಲ ಮನ್ನಾಕ್ಕಾಗಿ ಹಲವು ವರ್ಷಗಳ ಕಾಲ ಹೋರಾಡಿದ್ದರು.
2002ರಲ್ಲಿ ತಮ್ಮ ಪಂಜಾಬ್ ನಾಗರಿಕ ವೈದ್ಯ ಸೇವೆ ತೊರೆದ ಪಾಲ್ ತಮ್ಮ ಕುಟುಂಬಕ್ಕೆ ಸೇರಿದ 15 ಎಕರೆ ಭೂಮಿಯಲ್ಲಿ ಕೃಷಿ ಆರಂಭಿಸಿದರು. ಹಾಗೆಯೇ ಭಾರತೀಯ ಕಿಸಾನ್ ಯೂನಿಯನ್ನ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 2016ರಲ್ಲಿ ಕ್ರಾಂತಿಕಾರಿ ಕಿಸಾನ್ ಯೂನಿಯನ್ ಸೇರಿದ ಪಾಲ್ ಕಳೆದ ವರ್ಷ ಯೂನಿಯನ್ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದರು.
ಆಲ್ ಇಂಡಿಯಾ ಕಿಸಾನ್ ಸಂಘರ್ಷ ಸಮಿತಿ ಸದಸ್ಯರೂ ಆಗಿರುವ ಪಾಲ್, ರೈತರ ಹೋರಾಟವನ್ನು ಪಂಜಾಬಿಗಷ್ಟೇ ಸೀಮಿತವಾಗಿಸದೆ, ಉತ್ತರ ಪ್ರದೇಶ, ರಾಜಸ್ಥಾನ, ಕರ್ನಾಟಕ, ಮಹಾರಾಷ್ಟ್ರದಲ್ಲೂ ಸಂಘಟಿಸಿದ್ದಾರೆ.
ಈಗ ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ಹೋರಾಟ ಸಂಘಟಿಸಲಾರಂಭಿಸಿದ ಪಾಲ್ 31 ಸಂಘಟನೆಗಳನ್ನು ಒಗ್ಗೂಡಿಸಿ, ಸಮನ್ವಯಕಾರರಾಗಿ ಹೋರಾಟ ಮುನ್ನಡೆಸುತ್ತಿದ್ದಾರೆ.