ಈ ಲೇಖನದ ಆಡಿಯೋ ಆವೃತ್ತಿ ಇಲ್ಲಿದೆ. ಕ್ಲಿಕ್ ಮಾಡಿ ಕೇಳಿ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಹೊಸಬರನ್ನು ಆಯ್ಕೆ ಮಾಡಲು ದಿನಗಣನೆ ಆರಂಭವಾಗುತ್ತಿದ್ದಂತೆ ಆಯ್ಕೆ ಪ್ರಕ್ರಿಯೆ ಹೊಸ ತಿರುವು ಪಡೆದುಕೊಳ್ಳುವಂತಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಎನಿಸಿಕೊಂಡಿರುವ ಮಾಜಿ ಸಚಿವ, ಹಾಲಿ ಶಾಸಕ ಡಿ.ಕೆ.ಶಿವಕುಮಾರ್ ಅವರನ್ನು ಹೈಕಮಾಂಡ್ ನೇಮಕ ಮಾಡಲಿದೆ ಎಂಬ ಸುದ್ದಿ ಜೋರಾಗುತ್ತಿದ್ದಂತೆ ಪಕ್ಷದೊಳಗೆ ಬಣ ರಾಜಕಾರಣದ ವಾಸನೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಶಿವಕುಮಾರ್ ಅವರ ಜತೆಗೆ ಎಂ.ಬಿ.ಪಾಟೀಲ್ ಅವರ ಹೆಸರೂ ಮುಂಚೂಣಿ ಸಾಲಿಗೆ ಬರುವಂತಾಗಿದೆ. ಇದರ ಜತೆಗೆ ಇವರಿಬ್ಬರ ಬದಲು ಮೂರನೆಯವರನ್ನು ನೇಮಿಸಿ ಎಂಬ ವಾದವೂ ತೀವ್ರಗೊಳ್ಳುತ್ತಿದೆ.
ಹೌದು, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದ ಶಿವಕುಮಾರ್ ವಿರುದ್ಧ ಅವರ ವಿರೋಧಿ ಬಣ ಕನಕಪುರ ಕ್ಷೇತ್ರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ಕುರಿತಂತೆ ಉಂಟಾಗಿರುವ ವಿವಾದವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದೆ. ಶಿವಕುಮಾರ್ ಬದಲಾಗಿ ಎಂ.ಬಿ.ಪಾಟೀಲ್ ಅವರನ್ನು ನೇಮಿಸುವಂತೆ ಒತ್ತಡ ಹೇರಲಾರಂಭಿಸಿದೆ. ಇದಕ್ಕೆ ಪ್ರತಿಯಾಗಿ ಶಿವಕುಮಾರ್ ಅವರ ಪರವಾಗಿರುವ ಗುಂಪು ಎಂ.ಬಿ.ಪಾಟೀಲ್ ವಿರುದ್ಧ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದವನ್ನು ಬಳಸಿಕೊಂಡು ಶಿವಕುಮಾರ್ ಪರ ವಾದ ಆರಂಭಿಸಿದೆ. ಈ ಮಧ್ಯೆ ಮೂಲ ಕಾಂಗ್ರೆಸಿಗರ ಬಣವೊಂದು ಏಸು ಕ್ರಿಸ್ತನ ಪ್ರತಿಮೆ ವಿವಾದ, ಲಿಂಗಾಯತ ಪ3ತ್ಯೇಕ ಧರ್ಮ ವಿವಾದಗಳ ಕಾರಣದಿಂದ ಇವರಿಬಿಬರನ್ನೂ ಬಿಟ್ಟು ಮೂರನೇ ವ್ಯಕ್ತಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ ಎಂದು ವರಿಷ್ಠರ ಮನವೊಲಿಸುವ ಕೆಲಸ ಆರಂಭಿಸಿದೆ.
ಇದಕ್ಕೆಲ್ಲಾ ಕಾರಣ ಪ್ರದೇಶ ಕಾಂಗ್ರೆಸ್ಸಿನಲ್ಲಿ ತೀವ್ರಗೊಂಡಿರುವ ಆಂತರಿಕ ಬಿಕ್ಕಟ್ಟು. ಇದರ ಪರಿಣಾಮ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಬೆಂಬಲಿತ ಬಣ, ಡಿ.ಕೆ.ಶಿವಕುಮಾರ್ ಬೆಂಬಲಿತ ಬಣ ಮತ್ತು ಮೂಲ ಕಾಂಗ್ರೆಸ್ಸಿಗರ ಬಣ ಎಂದು ಮೂರು ಗುಂಪುಗಳಾಗಿದ್ದು, ಮೂರೂ ಗುಂಪುಗಳು ಪ್ರತ್ಯೇಕವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಲಾಬಿ ಆರಂಭಿಸಿವೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರತಿಪಕ್ಷ ಸ್ಥಾನ ಕುರಿತು ಚರ್ಚಿಸಲು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಹೈಕಮಾಂಡ್ ದೆಹಲಿಗೆ ಆಗಮಿಸಿದ್ದು, ಶನಿವಾರದ ವೇಳೆಗೆ ಇವರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈ ವೇಳೆ ಮೂರು ವಾದಗಳನ್ನು ಪ್ರತ್ಯೇಕವಾಗಿ ರಾಜ್ಯದ ನಾಯಕರು ವರಿಷ್ಠರ ಮುಂದಿಡಲಿದ್ದು, ಈ ವಾದಗಳ ನಂತರ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಡಿ.ಕೆ.ಶಿವಕುಮಾರ್ ಗೆ ಏಸು ಪ್ರತಿಮೆ ವಿವಾದ ಮುಳುವಾಗುವುದೇ
ಪ್ರಸ್ತುತ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮುಂಚೂಣಿಯಲ್ಲಿರುವ ಹೆಸರು ಡಿ.ಕೆ.ಶಿವಕುಮಾರ್ ಅವರದ್ದು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಜೈಲು ವಾಸ ಅನುಭವಿಸಿದ್ದರೂ ರಾಜ್ಯದಲ್ಲಿ ಪಕ್ಷ ಸಂಘಟನೆ ದೃಷ್ಟಿಯಿಂದ ಆ ಪ್ರಕರಣವನ್ನು ಬದಿಗಿಟ್ಟು ಶಿವಕುಮಾರ್ ಅವರನ್ನು ನೇಮಿಸಲು ಕಾಂಗ್ರೆಸ್ ವರಿಷ್ಠರು ಆಸಕ್ತಿ ಹೊಂದಿದ್ದರು. ಆದರೆ, ಶಿವಕುಮಾರ್ ಅವರು ತಮ್ಮ ಕ್ಷೇತ್ರದ ಕಪಾಲ ಬೆಟ್ಟದಲ್ಲಿ ವಿಶ್ವದಲ್ಲೇ ಅತಿ ದೊಡ್ಡ ಏಸು ಕ್ರಿಸ್ತನ ಪ್ರತಿಮೆ ನಿರ್ಮಿಸಲು ಮುಂದಾಗಿರುವುದು ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ಕಾಯುತ್ತಿದ್ದವರಿಗೆ ಹೊಸ ಅಸ್ತ್ರ ನೀಡಿದಂತಾಗಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ಆರಂಭವಾದ ಮೇಲೆ ಶಿವಕುಮಾರ್ ಅವರು ದಿಡೀರ್ ಆಗಿ ಏಸು ಪ್ರತಿಮೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಸೋನಿಯಾ ಗಾಂಧಿ ಅವರನ್ನು ಓಲೈಸಲು ಅವರು ಈ ಕೆಲಸ ಮಾಡಿದ್ದಾರೆ ಎಂಬ ಆರೋಪ ಪ್ರತಿಪಕ್ಷಗಳಿಂದ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಶಿವಕುಮಾರ್ ಅವರು ಒಕ್ಕಲಿಗ ಸಮುದಾಯದವರಾಗಿ ತಮ್ಮ ಸಮುದಾಯಕ್ಕೆ ಸೇರಿದ ಬಾಲಗಂಗಾಧರ ನಾಥ ಸ್ವಾಮೀಜಿ ಅಥವಾ ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡುವ ಬದಲು ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡುವ ಮೂಲಕ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಹೊರಟಿದ್ದಾರೆ ಎಂಬ ಟೀಕೆಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹೆಚ್ಚಾಗಿದೆ.
ಈ ಅಂಶವನ್ನು ಹೈಕಮಾಂಡ್ ಗಮನಕ್ಕೆ ತಂದು ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ತಪ್ಪಿಸಲು ಅವರ ವಿರೋಧಿ ಬಣ ಮುಂದಾಗಿದೆ. ಈಗಾಗಲೇ ಮುಸ್ಲಿಂ ಸಮುದಾಯವನ್ನು ಓಲೈಸಲು ಬಹುಸಂಖ್ಯಾತ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂಬ ಆರೋಪ ಕಾಂಗ್ರೆಸ್ ಮೇಲಿದೆ. ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಲು ಇದು ಪ್ರಮುಖ ಕಾರಣ. ಹೀಗಿರುವಾಗ ಏಸು ಕ್ರಿಸ್ತನ ಪ್ರತಿಮೆ ನಿರ್ಮಾಣ ಮಾಡಲು ಮುಂದಾದವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲು ಮುಂದಾದರೆ ಕಾಂಗ್ರೆಸ್ ಹಿಂದೂ ವಿರೋಧಿ. ಮುಸ್ಲಿಮ್ ಮತ್ತು ಕ್ರೈಸ್ತರು ಮಾತ್ರ ಆ ಪಕ್ಷಕ್ಕೆ ಬೇಕು. ಹಿಂದೂ ಸೇರಿದಂತೆ ಇತರೆ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಆರೋಪವನ್ನು ಮತ್ತಷ್ಟು ತೀವ್ರಗೊಳಿಸಲು ಬಿಜೆಪಿಗೆ ಮತ್ತೊಂದು ಅಸ್ತ್ರ ಸಿಕ್ಕಂತಾಗುತ್ತದೆ. ಆದ್ದರಿಂದ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದು ಬೇಡ. ಅದರ ಬದಲು ರಾಜ್ಯದಲ್ಲಿ ಮತ್ತೊಂದು ಪ್ರಬಲ ಸಮುದಾಯವಾಗಿರುವ ಲಿಂಗಾಯತ ಸಮುದಾಯಕ್ಕೆ ಈ ಹುದ್ದೆ ನೀಡಬೇಕು ಎಂಬ ವಾದವನ್ನು ವರಿಷ್ಠರ ಮುಂದೆ ಮಂಡಿಸಲು ನಿರ್ಧರಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮ ವಿವಾದ
ಲಿಂಗಾಯತ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದಾದರೆ ಮೊದಲ ಸಾಲಿನಲ್ಲಿ ಬರುವ ಹೆಸರು ಎಂ.ಬಿ.ಪಾಟೀಲ್. ಇವರಿಗೆ ಸಿದ್ದರಾಮಯ್ಯ ಅವರ ಬೆಂಬಲವೂ ಇರುವುದರಿಂದ ಪಕ್ಷ ಸಂಘಟನೆಗೆ ಅನುಕೂಲವಾಗುತ್ತದೆ ಎಂಬುದು ಎಂ.ಬಿ.ಪಾಟೀಲ್ ಅವರ ಪರ ಇರುವವರ ಮಾತು. ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸತಿವರಾದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರು ಕೇಳಿಬಂದಿತ್ತಾದರೂ ಪಾಟೀಲ್ ಸಚಿವರಾಗಿದ್ದರು ಎಂಬ ಕಾರಣಕ್ಕೆ ದಿನೇಶ್ ಗುಂಡೂರಾವ್ ಅವರನ್ನು ಆಯ್ಕೆ ಮಾಡಲಾಗಿತ್ತು. ಹೀಗಾಗಿ ಈ ಬಾರಿ ಎಂ.ಬಿ.ಪಾಟೀಲ್ ಅವರಿಗೆ ಅವಕಾಶ ನೀಡಿ ಲಿಂಗಾಯತ ಸಮುದಾಯವನ್ನು ಒಲಿಸಿಕೊಳ್ಳಲು ಸೂಕ್ತ ಸಮಯ ಎಂದು ಸಿದ್ದರಾಮಯ್ಯ ಬಣ ಹೇಳುತ್ತಿದೆ.
ಆದರೆ, ಸಿದ್ದರಾಮಯ್ಯ ವಿರೋಧಿ ಬಣ ಎಂ.ಬಿ.ಪಾಟೀಲ್ ವಿರುದ್ಧ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದವನ್ನು ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ವಿಭಜಿಸಿ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪಿಸಲು ತೀರ್ಮಾನಿಸಲಾಗಿತ್ತು. ಇದಕ್ಕೆ ಮೂಲ ಕಾರಣಕರ್ತರಾಗಿದ್ದವರು ಎಂ.ಬಿ.ಪಾಟೀಲ್. ಅದರಂತೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಈ ಸಮಿತಿ ವರದಿ ಆಧರಿಸಿ ಪ್ರತ್ಯೇಕ ಲಿಂಗಾಯ ಧರ್ಮ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಈ ಶಿಫಾರಸನ್ನು ಒಪ್ಪಿಕೊಳ್ಳಲಿಲ್ಲ.
ಈ ಮಧ್ಯೆ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಗೆ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ಇದು 2018ರ ವಿಧಾನ ಸಭೆ ಚುನಾವಣೆಯಲ್ಲಿ ಪ್ರತೀಕಾಲ ಪರಿಣಾಮ ಬೀರಿ ಲಿಂಗಾಯತ ಸಮುದಾಯ ಪ್ರಬಲವಾಗಿರುವ ಪ್ರದೇಶಗಳಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವಾಗಿತ್ತು. ಹೀಗಾಗಿ ಎಂ.ಬಿ.ಪಾಟೀಲ್ ಅವರಿಗೆ ಅಧ್ಯಕ್ಷ ಸ್ಥಾನ ನೀಡಿದರೆ ವೀರಶೈವ ಲಿಂಗಾಯತರು ತಿರುಗಿ ಬೀಳಬಹುದು ಎಂಬ ವಾದವನ್ನು ಸಿದ್ದರಾಮಯ್ಯ ವಿರೋಧಿ ಬಣ ಕಾಂಗ್ರೆಸ್ ವರಿಷ್ಠ ನಾಯಕರ ಮುಂದಿಡಲು ತೀರ್ಮಾನಿಸಿದೆ.
ಇಬ್ಬರ ಜಗಳದಲ್ಲಿ ಮೂರನೆಯವನಿಗೆ ನ್ಯಾಯ
ಡಿ.ಕೆ.ಶಿವಕುಮಾರ್ ಬಣ ಮತ್ತು ಸಿದ್ದರಾಮಯ್ಯ ಬಣದ ಈ ಜಗಳದ ಮಧ್ಯೆ ಕಾಂಗ್ರೆಸ್ಸಿನ ಮತ್ತೊಂದು ಬಣ ಅವರಿಬ್ಬರನ್ನು ಹೊರತಾಗಿ ಮೂರನೆಯವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿ ಎಂದು ಹೈಕಮಾಂಡ್ ನಾಯಕರನ್ನು ಒತ್ತಾಯಿಸಲು ನಿರ್ಧರಿಸಿದೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲ್ ಪೈಕಿ ಯಾರನ್ನೂ ಆಯ್ಕೆ ಮಾಡಿದರೂ ಅದರಿಂದ ಪ್ರತೀಕೂಲ ಪರಿಣಾಮ ಉಂಟಾಗಬಹುದು. ಹೀಗಾಗಿ ಅವರ ಬದಲು ವಿವಾದಾತೀತವಾಗಿರುವ ಮೂರನೆಯವರನ್ನು ಈ ಹುದ್ದೆಗೆ ನೇಮಕ ಮಾಡಿ. ನೀವು ಯಾರನ್ನೇ ನೇಮಕ ಮಾಡಿದರೂ ನಾವು ಸಹಕಾರ ಕೊಡುತ್ತೇವೆ. ಒಟ್ಟಿನಲ್ಲಿ ಪಕ್ಷವನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹಿಡಿತಕ್ಕೆ ಸಿಗದಂತೆ ನೋಡಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಈ ಮೂರು ವಾದಗಳ ಪೈಕಿ ಯಾವುದನ್ನು ಒಪ್ಪಿಕೊಳ್ಳುತ್ತದೆ ಎಂದು ಕಾದು ನೋಡಬೇಕು.