ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಡಿ.ಕೆ.ಶಿವಕುಮಾರ್ ಪಾಲಾಗುವುದೋ ಅಥವಾ ಎಂ.ಬಿ.ಪಾಟೀಲ್ ಅವರಿಗೆ ದಕ್ಕುವುದೋ ಎಂಬುದು ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಂಡ ಬಳಿಕ ಸ್ಪಷ್ಟವಾಗಲಿದೆ. ಡಿ.ಕೆ.ಶಿವಕುಮಾರ್ ಅವರಿಗೆ ಅಧ್ಯಕ್ಷ ಪಟ್ಟ ಬಹುತೇಕ ಖಚಿತ ಎನ್ನಲಾಗುತ್ತಿದೆ. ಆದರೆ, ಯಾರೇ ಅಧ್ಯಕ್ಷರಾದರೂ ನಾಯಕರ ಮಧ್ಯೆ ಒಗ್ಗಟ್ಟು ಮೂಡದಿದ್ದರೆ ರಾಜ್ಯದಲ್ಲಿ ಪಕ್ಷವನ್ನು ಬಲಗೊಳಿಸುವುದು ಕಷ್ಟಸಾಧ್ಯ. ಈ ಕಾರಣಕ್ಕಾಗಿ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಬೆನ್ನಲ್ಲೇ ಪಕ್ಷದ ನಾಯಕರ ಮಧ್ಯೆ ಒಗ್ಗಟ್ಟು ಮೂಡಿಸುವ ಕೆಲಸಕ್ಕೂ ಹೈಕಮಾಂಡ್ ಮುಂದಾಗಬೇಕಾಗುತ್ತದೆ.
ಹೌದು, ಎಐಸಿಸಿ ನಾಯಕರೊಂದಿಗಿನ ಮಾತುಕತೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಮುಖ ಪ್ರತಿಪಾದನೆ ನಾಯಕರ ನಡುವಿನ ಒಗ್ಗಟ್ಟಿನ ಕುರಿತಾಗಿತ್ತು. ಇದರೊಂದಿಗೆ ಈವರೆಗೆ ಒಗ್ಗಟ್ಟಿನ ಬಗ್ಗೆ ರಾಜ್ಯ ಮಟ್ಟದಲ್ಲಿ ಆಗುತ್ತಿದ್ದ ಚರ್ಚೆ ಹೈಕಮಾಂಡ್ ಅಂಗಳಕ್ಕೂ ತಲುಪಿದಂತಾಗಿದೆ. ಅಷ್ಟೇ ಅಲ್ಲ, ಒಗ್ಗಟ್ಟು ಮೂಡಿಸಲು ನಮ್ಮಿಂದ ಸಾಧ್ಯವಿಲ್ಲ, ಹೈಕಮಾಂಡ್ ಮಧ್ಯಪ್ರವೇಶ ಅನಿವಾರ್ಯ ಎಂಬ ಮಾತು ಸಿದ್ದರಾಮಯ್ಯ ಅವರಿಂದ ಕೇಳಿಬಂದಿದೆ. ಇದರಿಂದಾಗಿ ಸೋಲಿನ ಸರಣಿಯಲ್ಲಿ ಪಕ್ಷ ಮುಂದುವರಿಯುತ್ತಿದ್ದರೂ ರಾಜ್ಯ ಕಾಂಗ್ರೆಸ್ ನಾಯಕರು ಸುಧಾರಿಸಿಕೊಳ್ಳುವುದಿಲ್ಲ ಎಂಬುದು ಹೈಕಮಾಂಡ್ ನಾಯಕರಿಗೂ ಸ್ಪಷ್ಟವಾದಂತಾಗಿದೆ.
ವಿಧಾನಸಭೆ ಉಪ ಚುನಾವಣೆ ಹೀನಾಯ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ಮತ್ತು ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಈ ಪೈಕಿ ಸಿದ್ದರಾಮಯ್ಯ ಅವರ ರಾಜೀನಾಮೆ ಅಂಗೀಕರಿಸಲು ನಿರಾಕರಿಸಿದ್ದ ಕಾಂಗ್ರೆಸ್ ಹೈಕಮಾಂಡ್, ಸದ್ಯಕ್ಕೆ ಹುದ್ದೆಯಲ್ಲಿ ಮುಂದುವರಿಯುವಂತೆ ಸೂಚನೆ ನೀಡಿತ್ತು. ಆದರೆ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಬೇರೆಯವರನ್ನು ಹುಡುಕಲಾರಂಭಿಸಿತು. ಈ ಸಂದರ್ಭದಲ್ಲಿ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂಬ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೆ ಮುನ್ನ ಭಿನ್ನಮತ ಮರೆತು ಒಮ್ಮತಾಭಿಪ್ರಾಯದೊಂದಿಗೆ ಬನ್ನಿ ಎಂದು ವರಿಷ್ಠರು ಸೂಚಿಸಿದ್ದರೂ ಪರಿಸ್ಥಿತಿ ಮಾತ್ರ ಸುಧಾರಿಸಲಿಲ್ಲ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಭರ್ತಿ ಮಾಡಿದ ಬಳಿಕ ಕಾಂಗ್ರೆಸ್ಸಿನಲ್ಲಿರುವ ಹಳೆಯ ಮತ್ತು ವಲಸೆ ಕಾಂಗ್ರೆಸ್ ಎಂಬ ಬಣ ರಾಜಕಾರಣಕ್ಕೆ ಮದ್ದೆರೆಯುವ ಪ್ರಯತ್ನ ಮಾಡಲು ಹೈಕಮಾಂಡ್ ಮುಂದಾಗಿದೆ.
ಒಂದೂವರೆ ದಶಕದ ಹಿಂದೆ ಮಾಯವಾದ ಕಾಂಗ್ರೆಸ್ ಒಗ್ಗಟ್ಟು
ರಾಜ್ಯ ಕಾಂಗ್ರೆಸ್ ನಲ್ಲಿ ಒಗ್ಗಟ್ಟು ಎಂಬುದು ದೂರವಾಗಿ ದಶಕವೇ ಕಳೆದಿದೆ. 1999ರಲ್ಲಿ ಎಸ್.ಎಂ.ಕೃಷ್ಣ ಅವರ ಪಾಂಚಜನ್ಯ ಯಾತ್ರೆಯ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಿದ್ದ ಕಾಂಗ್ರೆಸ್ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೆ ಬಂತು. ಆದರೆ, ಇದು ಹೆಚ್ಚು ಕಾಲ ನಿಲ್ಲಲಿಲ್ಲ. ಇದರ ಪರಿಣಾಮ 1999-2004ರ ಮಧ್ಯೆ ಕಾಂಗ್ರೆಸ್ ಸರ್ಕಾರದ ಆಡಳಿತ ಉತ್ತಮವಾಗಿದ್ದರೂ 2004ರಲ್ಲಿ ಅಧಿಕಾರ ಕಳೆದುಕೊಂಡು ನಂತರ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವಂತಾಯಿತು. ಇದಾದ ಬಳಿಕ ಒಗ್ಗಟ್ಟು, ಸಂಘಟನಾತ್ಮಕ ಹೋರಾಟ ಎಂಬುದು ಕನಸಿನ ಮಾತಾಯಿತು. ಇದರ ಮಧ್ಯೆಯೂ 2013ರಲ್ಲಿ ಆಗಿನ ಬಿಜೆಪಿ ಸರ್ಕಾರದ ಮೇಲಿನ ಭ್ರಷ್ಟಾಚಾರ ಆರೋಪ, ಅಕ್ರಮ ಗಣಿಗಾರಿಕೆ ಪ್ರಕರಣದಿಂದಾಗಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವಂತಾಯಿತು. ಇಲ್ಲಿ ಕಾಂಗ್ರೆಸ್ ಮತ್ತು ಅದರ ನಾಯಕರು ಮಾಡಿದ ಸಾಧನೆಗಿಂತಲೂ ಬಿಜೆಪಿ ಒಡೆದು ಮೂರು ಹೋಳಾಗಿದ್ದೇ ಪಕ್ಷ ಅಧಿಕಾರಕ್ಕೆ ಬರಲು ಕಾರಣವಾಯಿತು.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ರಾಜ್ಯದಲ್ಲಿ ಹಳೆಯ ಕಾಂಗ್ರೆಸ್ ಮತ್ತು ವಲಸೆ ಕಾಂಗ್ರೆಸ್ ಎಂಬ ಎರಡು ಬಣಗಳಾದವು. ವಲಸೆ ಕಾಂಗ್ರೆಸ್ಸಿಗರಿಗೆ ಸರ್ಕಾರದಲ್ಲಿ ಸಚಿವ ಸ್ಥಾನದ ಜತೆಗೆ ಉತ್ತಮ ಖಾತೆಗಳೂ ಹಂಚಿಕೆಯಾಯಿತು. ಹಳೆಯ ಕಾಂಗ್ರೆಸ್ಸಿನ ಪ್ರಮುಖ ನಾಯಕರಾದ ಡಾ.ಜಿ.ಪರಮೇಶ್ವರ್ ಮತ್ತು ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಲು ಒದ್ದಾಡಬೇಕಾಯಿತು. ಇದರೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿ ಆರಂಭವಾದ ಹಳೆಯ ಕಾಂಗ್ರೆಸ್ಸಿಗರು ಮತ್ತು ವಲಸೆ ಕಾಂಗ್ರೆಸ್ಸಿಗರ ಬಣ ರಾಜಕಾರಣ ಜೋರಾಯಿತು. ಹಳೇ ಕಾಂಗ್ರೆಸ್ಸಿನ ಬಹುತೇಕ ನಾಯಕರ ವಿರೋಧದ ನಡುವೆಯೂ ಎಂ.ಬಿ.ಪಾಟೀಲ್ ಅವರ ಮಾತು ಕೇಳಿಕೊಂಡು ಸಿದ್ದರಾಮಯ್ಯ ಅವರು ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆಗೆ ಮುಂದಾಗಿದ್ದು ಬಣ ರಾಜಕಾರಣದ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದರ ಪರಿಣಾಮ 2018ರಲ್ಲಿ ಮತ್ತೆ ಕಾಂಗ್ರೆಸ್ ಸೋತು ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವಂತಾಯಿತು. ಹೆಚ್ಚು ಸ್ಥಾನ ಗಳಿಸಿದ್ದರೂ ರಾಜ್ಯದಲ್ಲಿ ನಡೆಯುತ್ತಿದ್ದ ಬಣ ರಾಜಕಾರಣದಿಂದ ಬೇಸತ್ತು ಹೈಕಮಾಂಡ್ ನಾಯಕರೇ ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಟ್ಟರು.
ಪದೇ ಪದೇ ಎಡವಿದರೂ ಎಚ್ಚೆತ್ತುಕೊಳ್ಳದ ನಾಯಕರು
ಹೆಚ್ಚು ಸ್ಥಾನ ಗಳಿಸಿದ್ದರೂ ಕಾಂಗ್ರೆಸ್ ಗೆ ಮುಖ್ಯಮಂತ್ರಿ ಸ್ಥಾನ ತಪ್ಪಲು ಕಾರಣವಾದ ಈ ವಿಚಾರದ ಬಗ್ಗೆ ಅರಿವಿದ್ದರೂ ಕಾಂಗ್ರೆಸ್ ನಾಯಕರು ಎಚ್ಚೆತ್ತುಕೊಳ್ಳಲಿಲ್ಲ. ಬದಲಾಗಿ ಅದು ಮತ್ತಷ್ಟು ಹೆಚ್ಚಾಯಿತು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಯಾರೆಲ್ಲಾ ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೋ ಅವರಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಪ್ರಮುಖ ಸ್ಥಾನಮಾನ ಸಿಕ್ಕಿತ್ತು. ಸಿದ್ದರಾಮಯ್ಯ ಅವರನ್ನು ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರೂ ಸರ್ಕಾರದಲ್ಲಿ ಅವರ ಮಾತಿಗೆ ಕಿಮ್ಮತ್ತು ಸಿಗುತ್ತಿರಲಿಲ್ಲ. ಯಾರೆಲ್ಲಾ ಸಿದ್ದರಾಮಯ್ಯ ಅವರಿಗೆ ಆಪ್ತ ಶಾಸಕರಿದ್ದಾರೋ ಅವರ ಮಾತುಗಳಿಗೆ ಮನ್ನಣೆ ಸಿಗಲಿಲ್ಲ. ಇದು ಕಾಂಗ್ರೆಸ್ಸಿನ ಆಂತರಿಕ ಕಚ್ಚಾಟ ಹೆಚ್ಚುವಂತೆ ಮಾಡಿತು. ತಮ್ಮ ಆಪ್ತರಿಗೆ ಬೆಲೆ ಇಲ್ಲ ಎಂದು ಅರಿವಾಗುತ್ತಿದ್ದಂತೆ ಸಿದ್ದರಾಮಯ್ಯ ಕೂಡ ಸುಮ್ಮನಾದರು. ಇದರ ಸಂಪೂರ್ಣ ಲಾಭ ಪಡೆದ ಬಿಜೆಪಿ ಮೈತ್ರಿ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂತು. ಇಲ್ಲಿ ಬಿಜೆಪಿಯವರು ಆಪರೇಷನ್ ಕಮಲದ ಮೂಲಕ ಮೈತ್ರಿ ಶಾಸಕರನ್ನು ಸೆಳೆದುಕೊಂಡು ಸರ್ಕಾರ ಕೆಡವಿದರು ಎಂಬ ಆರೋಪ ಬಂತಾದರೂ ಆಪರೇಷನ್ ಕಮಲಕ್ಕೆ ಪ್ರೇರಣೆ ನೀಡಿದ್ದು ಕಾಂಗ್ರೆಸ್ ನಾಯಕರ ಆಂತರಿಕ ಕಚ್ಚಾಟ ಎಂಬುದು ಸುಳ್ಳಲ್ಲ.
ಆದರೆ, ರಾಜ್ಯದ ಕಾಂಗ್ರೆಸ್ ನಾಯಕರು ಪಾಠ ಕಲಿಯಲಿಲ್ಲ. ಸಿದ್ದರಾಮಯ್ಯ ವಿರುದ್ಧ ಹಿರಿಯ ಕಾಂಗ್ರೆಸ್ಸಿಗರ ಅಸಮಾಧಾನ ಮುಂದುವರಿಯಿತು. ಇದರ ಪರಿಣಾಮ ವಿಧಾನಸಭೆ ಉಪ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಬೇಕಾಯಿತು. ಸೋಲಿನ ಬಳಿಕವೂ ಕಾಂಗ್ರೆಸ್ ರಾಜ್ಯ ನಾಯಕರು ಸುಧಾರಿಸಿಕೊಳ್ಳದ ಕಾರಣ ಹೈಕಮಾಂಡ್ ಈಗ ಭಿನ್ನಮತ ಶಮನಕ್ಕೆ ಮಧ್ಯಪ್ರವೇಶಿಸಲು ಮುಂದಾಗಿದೆ.
ಒಗ್ಗಟ್ಟು ಮೂಡಿಸಲು ಹೈಕಮಾಂಡ್ ಯೋಚನೆ ಏನು?
ಹಿರಿಯ ಕಾಂಗ್ರೆಸ್ ನಾಯಕರು ಮುನಿಸಿಕೊಳ್ಳಲು ಪ್ರಮುಖ ಕಾರಣ ಸಿದ್ದರಾಮಯ್ಯ. ಅವರು ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂಬುದು ಹಿರಿಯರ ಆರೋಪ. ಆದರೆ, ಏಕಾಏಕಿ ಸಿದ್ದರಾಮಯ್ಯ ಅವರನ್ನು ದೂರವಿಟ್ಟು ಪಕ್ಷ ಸಂಘಟನೆ ಮಾಡುವುದು ಕನಸಿನ ಮಾತು ಎಂಬುದು ಹೈಕಮಾಂಡ್ ನಾಯಕರಿಗೂ ಗೊತ್ತು. ಅದಕ್ಕಾಗಿ ಸಿದ್ದರಾಮಯ್ಯ ಅವರನ್ನು ಮುಂದೆ ಬಿಟ್ಟೇ ಬಣ ರಾಜಕಾರಣಕ್ಕೆ ಮದ್ದು ಹುಡುಕುತ್ತಿದ್ದಾರೆ. ಮೂಲಗಳ ಪ್ರಕಾರ ಸಂಘಟನಾ ಚಾಕಚಕ್ಯತೆ ಹೊಂದಿರುವ ಡಿ.ಕೆ.ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿ, ಸಿದ್ದರಾಮಯ್ಯ ಅವರ ಬೆಂಬಲಿಗರಿಗೆ ಪಕ್ಷದಲ್ಲಿ ಕಾರ್ಯಾಧ್ಯಕ್ಷ ಸ್ಥಾನ ಸೇರಿದಂತೆ ಇತರೆ ಪ್ರಮುಖ ಹುದ್ದೆಗಳನ್ನು ನೀಡುವ ಬಗ್ಗೆ ಒಲವು ಹೊಂದಿದ್ದಾರೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರೆ ಹಿರಿಯ ಕಾಂಗ್ರೆಸ್ಸಿಗರ ಅಸಮಾಧಾನ ಕಡಿಮೆಯಾಗುತ್ತದೆ. ಸಿದ್ದರಾಮಯ್ಯ ಮತ್ತು ಅವರ ಆಪ್ತರಿಗೆ ಸೂಕ್ತ ಸ್ಥಾನಮಾನ ನೀಡಿದರೆ ಅವರೂ ಸಮಾಧಾನಗೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಾರೆ ಎಂಬುದು ಕಾಂಗ್ರೆಸ್ ವರಿಷ್ಠರ ನಂಬಿಕೆ. ಆದರೆ, ಭವಿಷ್ಯದಲ್ಲಿ ಈ ನಂಬಿಕೆಯನ್ನು ರಾಜ್ಯ ನಾಯಕರು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.