ಕೋಲಾರ: ಕೋಲಾರ ಕ್ಷೇತ್ರದ ಅಭಿವೃದ್ಧಿಯ ನಿಟ್ಟಿನಲ್ಲಿ ಮಾಜಿ ಶಾಸಕ ವರ್ತೂರು ಪ್ರಕಾಶ್ 10 ಕೋಟಿ ರೂಪಾಯಿ ಅನುದಾನ ತಂದಿರುವುದು ಸ್ವಾಗತಾರ್ಹ. ಆದ್ರೆ ಅದರಲ್ಲಿ ಶೇ.10ರಷ್ಟು ಕಮೀಷನ್ ಅಲ್ಲ, ಈಗ ಚುನಾವಣೆ ಸಂದರ್ಭವಾದ್ದರಿಂದ ಶೇ.50ರಷ್ಟು ಭ್ರಷ್ಟಾಚಾರ ನಡೆಯುತ್ತೆ. ಇದರಲ್ಲಿ ಯಾವುದೇ ಅನುಮಾನವೇ ಇಲ್ಲವೆಂದು ಜೆಡಿಎಸ್ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಆರೋಪಿಸಿದರು.
ವರ್ತೂರು ಪ್ರಕಾಶ್ & ಬೆಂಬಲಿಗರು ಅನುದಾನದ ಹಣವನ್ನು ಲಪಟಾಯಿಸುತ್ತಿದ್ದಾರೆ:
ಕರ್ನಾಟಕ ಭೂ ಸೇನಾ ನಿಗಮದಂತಹ ಭ್ರಷ್ಟ ಸಂಸ್ಥೆ ಮತ್ತೊಂದಿಲ್ಲ. ಶೇ.40ರಷ್ಟೂ ಕೆಲಸ ಮಾಡದ ಭೂ ಸೇನಾ ನಿಗಮದ ಸಂಸ್ಥೆಗೆ ಟೆಂಡರ್‌ಗಳನ್ನು ನೀಡಿರುವುದು ಅಭಿವೃದ್ಧಿ ಕಾಮಗಾರಿಗಳಿಗೆ ಅಲ್ಲ, ಚುನಾವಣೆ ಸಂದರ್ಭ ಆಗಿರುವುದರಿಂದ ಮಾಜಿ ಶಾಸಕ ವರ್ತೂರು ಪ್ರಕಾಶ್ ಹಾಗೂ ಅವರ ಬೆಂಬಲಿಗರು ಬಂದಿರುವ ಅನುದಾನದಲ್ಲಿ ಹಣ ಲಪಟಾಯಿಸುತ್ತಾರೆ ಎಂದು ದೂರಿದರು.
ಶ್ರೀನಿವಾಸಗೌಡರಿಗೆ ಈಗ ಶಾಸಕ ಅನ್ನೋದು ಜ್ಞಾನೋದಯವಾಗಿದೆ:
ಮಾಜಿ ಶಾಸಕ ವರ್ತೂರು ಪ್ರಕಾಶ್ ಅನುದಾನ ತಂದು 3 ತಿಂಗಳಾಗಿದೆ. ಆದ್ರೆ ನಾನು ಊರಲ್ಲಿ ಇರಲಿಲ್ಲ ಎಂದು ಶಾಸಕ ಕೆ.ಶ್ರೀನಿವಾಸ ಗೌಡರು ಹೇಳುತ್ತಿದ್ದಾರೆ. ಶ್ರೀನಿವಾಸಗೌಡರಿಗೆ ಈಗ ನಾನೊಬ್ಬ ಶಾಸಕ ಅನ್ನೋದು ಜ್ಞಾನೋದಯವಾಗಿದೆ. ಜಿಲ್ಲಾ ಕೇಂದ್ರ ಸ್ಥಾನದಲ್ಲಿರುವ ಶಾಸಕರಿಗೆ ವಿಶೇಷ ಸ್ಥಾನವಿರುತ್ತದೆ. ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಯಾವುದೇ ಕೆಲಸವಾಗಬೇಕಾದರೂ ಅವರ ಗಮನಕ್ಕೆ ಬರಲೇಬೇಕು. ಆದರೂ ಏನೂ ತಿಳಿಯುತ್ತಿಲ್ಲವೆಂದರೆ ನಿಮ್ಮ ಶಾಸಕ ಸ್ಥಾನಕ್ಕೆ ಚ್ಯುತಿ ಅಲ್ಲ, ಅದರ ಅಧಿಕಾರದ ಅತ್ಯಾಚಾರವಾಗಿದೆ ಎಂದು ಲೇವಡಿ ಮಾಡಿದರು.
ಅನುದಾನ ತರಲು ಮಾಜಿ ಶಾಸಕರಿಗೆ ಇರುವ ತಾಕತ್ತು ನಿಮಗೆ ಇಲ್ಲವಾ?
ಅನುದಾನ ತರಲು ಮಾಜಿ ಶಾಸಕರಿಗೆ ಇರುವ ತಾಕತ್ತು, ಶಕ್ತಿ ನಿಮಗೆ ಇಲ್ಲವಾ? ಬೇರೆ ಕ್ಷೇತ್ರಗಳ ಅನುದಾನದ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ನಗರಸಭೆಗೆ 40 ಕೋಟಿ ಅನುದಾನದ ಜತೆಗೆ ನನ್ನ ವಿಶೇಷ ಅನುದಾನದಲ್ಲಿ 5 ಕೋಟಿ ರೂಪಾಯಿ ಅನುದಾನ ನೀಡಿದ್ದೇನೆ. ಅಲ್ಲದೆ ಕೇಂದ್ರ ಸರ್ಕಾರದ 14, 15ನೇ ಹಣಕಾಸು ಯೋಜನೆಯಡಿ ಅನುದಾನ ಬಂದಿದೆ. ಕ್ರಿಯಾ ಯೋಜನೆಯ ಬಗ್ಗೆ ನಿಮಗೆ ಗಮನಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ ಅವರು, ಕ್ಷೇತ್ರದ ಮತದಾರರೇ ಇನ್ನು ಮುಂದೆ ಇಂತಹ ಶಾಸಕರನ್ನು ಆಯ್ಕೆ ಮಾಡದೆ, ಮನಸ್ಸಾಕ್ಷಿಯಿಂದ 24 ಗಂಟೆ ನಿಮ್ಮ ಜತೆಯಲ್ಲಿದ್ದು, ಅಭಿವೃದ್ಧಿ ಚಿಂತನೆ ಹೊಂದಿರುವವರನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಇನ್ನು ಉಸ್ತುವಾರಿ ಸಚಿವರು 2 ವರ್ಷದಲ್ಲಿ ಕೇವಲ 1 ಬಾರಿ ಕೆಡಿಪಿ ಸಭೆ ನಡೆಸಿದ್ದು, ಅದು ಗುತ್ತಿಗೆದಾರರನ್ನು ಹೆದರಿಸಲಷ್ಟೇ ಸೀಮಿತವಾಯಿತೇ ಹೊರತು ಯಾವುದೇ ಪ್ರಯೋಜನವಾಗಲಿಲ್ಲ. ಕ್ರಿಯಾ ಯೋಜನೆಗಳನ್ನು ರೂಪಿಸಲು ತಮಗೆ ಬೇಕಾದವರನ್ನು ಬೆಂಗಳೂರಿಗೆ ಕರೆಯಿಸಿಕೊಂಡು ತಯಾರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ರಾಜ್ಯ ಸರ್ಕಾರದಲ್ಲಿ ಬಿಜೆಪಿ ಶಾಸಕರಿಗೆ 50 ಲಕ್ಷ ರೂ. ಅನುದಾನ ಕೊಟ್ಟರೆ ಬಿಜೆಪಿಯೇತರ ಶಾಸಕರಿಗೆ 25 ಲಕ್ಷ ಅನುದಾನ ನೀಡಿ ತಾರತಮ್ಯ ಮಾಡುತ್ತಿದ್ದಾರೆ. ಆ ಮೂಲಕ ನೀತಿ ನಿಯಮಗಳನ್ನು ಗಾಳಿಗೆ ದೂರಿದ್ದಾರೆ ಎಂದು ಆರೋಪಿಸಿದರು.
ಸರ್ಕಾರದ ಭ್ರಷ್ಟಾಚಾರಕ್ಕೆ ಬಿಜೆಪಿ ಶಾಸಕನ ಪುತ್ರನ ಬಂಧನವೇ ಸಾಕ್ಷಿ:
ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮನೆಯಲ್ಲಿ ಕೋಟ್ಯಾಂತರ ರೂಪಾಯಿ ಸಿಕ್ಕಿದೆ. ಇದು ಸಾಸುವೆ ಕಾಳಿನಷ್ಟು ಮಾತ್ರ ವಿಧಾನ ಪರಿಷತ್’ನಲ್ಲಿ ಕಮೀಷನ್ ಬಗ್ಗೆ ವಿರೋಧ ಪಕ್ಷಗಳು ಆರೋಪ ಮಾಡಿದಾಗ ಬಿಜೆಪಿ ಸಚಿವರು, ಶಾಸಕರು ಮಾನ ಮರ್ಯಾದ ಇಲ್ಲದೆ ಸಾಕ್ಷಿ ಕೊಡಿ, ಸಾಕ್ಷಿ ಕೂಡಿ ಎಂದು ಕೇಳುತ್ತಿದ್ದರು, ಇದೀಗ ಇದಕ್ಕಿಂತ ಸಾಕ್ಷಿ ಬೇಕಾ, ಹೇರಳವಾಗಿ ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಕ್ಕೆ ಶಾಸಕರ ಪುತ್ರನ ಲಂಚವಾತಾರವೇ ಸಾಕ್ಷಿ ಎಂದರು.