ಕೋಲಾರದಲ್ಲಿರುವ ಬಿಇಎಂಎಲ್ (ಬೆಮೆಲ್) ಕಾರ್ಖಾನೆಯನ್ನು ಖಾಸಗಿಯವರಿಗೆ ಹಸ್ತಾಂತರಿಸುವುದಿಲ್ಲ. ಇದು ಕೇಂದ್ರ ಸರ್ಕಾರದ ಅಧೀನದಲ್ಲಿದ್ದು ಈ ಬಗ್ಗೆ ವದಂತಿಗಳಿಗೆ ಕಿವಿಗೊಡಬಾರದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಮನವಿ ಮಾಡಿದರು.
ಜೆಡಿಎಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ವಿಧಾನಪರಿಷತ್ನಲ್ಲಿ ಮಂಗಳವಾರ ಉತ್ತರಿಸಿದ ಸಚಿವ ನಿರಾಣಿಯವರು, “ಬೆಮೆಲ್ ಕಾರ್ಖಾನೆ 16 ಸಾವಿರ ಎಕರೆ ಜಾಗದಲ್ಲಿ 12,500 ಎಕರೆ ಖಾತೆ ಆಗಿದೆ. 3500 ಎಕರೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ರಾಜ್ಯ ಸರ್ಕಾರಕ್ಕೆ ಬಿಟ್ಟು ಕೊಡಲು ನಿರ್ಧರಿಸಿದೆ. ಮತ್ತೊಮ್ಮೆ ಆ ಭಾಗದಲ್ಲಿ ಡ್ರೋಣ್ ಸರ್ವೆ ನಡೆಸಲಾಗಿದ್ದು, ಎರಡು ದಿನಗಳಲ್ಲಿ ಕೇಂದ್ರ ಸಚಿವರಿಗೆ ವರದಿಯನ್ನು ಸಲ್ಲಿಸಲಾಗುತ್ತದೆ. ಇದೇ ಮಾರ್ಚ್ 10 ರಂದು ದೆಹಲಿಗೆ ತೆರಳಿ ಗಣಿ ಸಚಿವರ ಜತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು,” ಎಂದು ಹೇಳಿದರು.
“ಬಿಇಎಂಎಲ್ನಲ್ಲಿ 1149 ಎಕರೆ ಭೂಮಿ ಇದೆ. ಈ ಮೊದಲು ಕೈಗಾರಿಕಾ ಪ್ರದೇಶ ಅಭಿವೃದ್ಧಿ ಪ್ರಕಾರ 979 ಎಕರೆಯನ್ನು ಬೆಮೆಲ್ಗೆ ನೀಡಿದ್ದು, ಅದು ಬಳಕೆಯಾಗದೆ ತಟಸ್ಥವಾಗಿರುವುದರಿಂದ ಹಿಂಪಡೆದು ಅಲ್ಲಿ ಖಾಸಗಿ ಕೈಗಾರಿಕೆಗಳ ಸ್ಥಾಪೆನೆಗೆ ಅವಕಾಶ ಮಾಡಿಕೊಡಲಾಗುವುದು. ಕೈಗಾರಿಕಾ ನಿವೇಶನಗಳ ಹಂಚಿಕೆಯಲ್ಲಿ ಎಸ್ಸಿ-ಎಸ್ಟಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಸಮುದಾಯಗಳಿಗೆ ಆದ್ಯತೆ ನೀಡಲಾಗುವುದು,” ಎಂದು ನಿರಾಣಿ ಭರವಸೆ ನೀಡಿದರು.
“ಕೇಂದ್ರದ ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಖಾನೆಯನ್ನು ಮುಚ್ಚದೆ ಮುಂದುವರಿಸಿಕೊಂಡು ಹೋಗಲು ನಿರ್ಧಾರ ಕೈಗೊಂಡಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವುದರಿಂದ ಕೇಂದ್ರ ತೆಗೆದುಕೊಳ್ಳುವ ನಿಯಮಗಳಿಗೆ ಬದ್ಧರಾಗಬೇಕಾಗುತ್ತದೆ,” ಎಂದು ಅವರು ಹೇಳಿದರು.

“ಕಾರ್ಖಾನೆಯಲ್ಲಿರುವ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲಾಗುತ್ತದೆ. ಕೇಂದ್ರ ಸರ್ಕಾರದ ಸಂಸದೀಯ ಆರ್ಥಿಕ ಸಮಿತಿ 2016ರಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳಿಂದ ಬಂಡವಾಳ ಹಿಂತೆಗೆತಕ್ಕೆ ತೀರ್ಮಾನಿಸಿದೆ. ಹೀಗಾಗಿ ಹಂತ ಹಂತವಾಗಿ ಸರ್ಕಾರಿ ಬಂಡವಾಳವನ್ನು ವಾಪಸ್ ತೆಗೆಯಲಾಗುವುದು. ಬೆಮೆಲ್ನಲ್ಲಿ ಪ್ರಸ್ತುತ ಶೇ.47ರಷ್ಟು ಬಂಡವಾಳ ಇದೆ. ಅದನ್ನು ಸದ್ಯಕ್ಕೆ ಮುಂದುವರಿಸಲಾಗುತ್ತದೆ,” ಎಂದರು.
“ಕಾರ್ಖಾನೆಗಳ ಬಳಿಯೇ ಜನವಸತಿ ಪ್ರದೇಶಗಳಿಗೆ ಉಪನಗರಗಳನ್ನು ನಿರ್ಮಿಸಲು ಸರ್ಕಾರ ಅನುಕೂಲ ಕಲ್ಪಿಸಿಕೊಡುತ್ತಿದೆ. ಅಭಿವೃದ್ಧಿ ಪಡಿಸಿದ ಭೂಮಿಯಲ್ಲಿ ಶೇ.85ರಷ್ಟನ್ನು ಕೈಗಾರಿಕೆಗಳಿಗೆ, ಉಳಿದ ಪ್ರದೇಶದಲ್ಲಿ ಜನ ವಸತಿ ನಿರ್ಮಿಸಿ ವಾಕ್ ಟು ವರ್ಕ್ ಕಲ್ಪನೆಯನ್ನು ಜಾರಿಗೆ ತರಲಾಗುವುದು,” ಎಂದರು.