ಸದ್ಯದ ಕ್ರಿಕೆಟ್ ಸುದ್ದಿ ಮ್ಯಾಚಿಗೆ ಸಂಬಂಧಿಸಿದ್ದಲ್ಲ, ಅದು ಕ್ರಿಕೆಟ್‌ನೊಳಗಿನ ಪಾಲಿಟಿಕಲ್ ಮ್ಯಾಚ್ ಫಿಕ್ಸಿಂಗ್ ವಿಷಯಕ್ಕೆ ಸಂಬಂಧಿಸಿದ್ದು. ಭಾರತದಲ್ಲಿ ಕ್ರಿಕೆಟ್ ಒಳಗಿನ ಪಾಲಿಟಿಕ್ಸ್ ಇವತ್ತು ನಿನ್ನೆಯದಲ್ಲ. ಅದಕ್ಕೆ ದೊಡ್ಡ ಇತಿಹಾಸವಿದೆ. ಅದಿರಲಿ, ಈಗ ವಿಷಯಕ್ಕೆ ಬರೋಣ.
ಡಿಸೆಂಬರ್ 8 ರಂದು ಬಿಸಿಸಿಐ ದಕ್ಷಿಣ ಆಫ್ರಿಕಾಕ್ಕೆ ಭಾರತದ ಟೆಸ್ಟ್ ತಂಡವನ್ನು ಘೋಷಿಸುತ್ತಿದ್ದಂತೆ ಅದರ ಪತ್ರಿಕಾ ಪ್ರಕಟಣೆಯ ಕೊನೆಯ ಸಾಲಿನಲ್ಲಿ ವಿರಾಟ್ ಕೊಹ್ಲಿ ಬದಲಿಗೆ ರೋಹಿತ್ ಶರ್ಮಾ ಅವರನ್ನು ODI ನಾಯಕನಾಗಿ ನೇಮಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಅಂದಿನಿಂದ ಭಾರತೀಯ ಕ್ರಿಕೆಟ್ನಲ್ಲಿ ಒಂದಿಷ್ಟು ಗೊಂದಲಗಳು ಮೂಡಿವೆ. ಈ ವಿಷಯದಿಂದ ಬಿಸಿಸಿಐ ಭಾರತ ತಂಡ ಹೊರಬರಲು ಹೆಣಗಾಡುತ್ತಿದೆ.
ಕೊಹ್ಲಿಯನ್ನು ತಗೆದಿದ್ದೇಕೆ?
ಅಕ್ಟೋಬರ್-ನವೆಂಬರ್‌ನಲ್ಲಿ ನಡೆದ T20 ವಿಶ್ವಕಪ್‌ನ ಕೊನೆಯಲ್ಲಿ ಕೊಹ್ಲಿ , ಕೆಲಸದ ಹೊರೆಯನ್ನು ಉಲ್ಲೇಖಿಸಿ ಭಾರತ T20 ನಾಯಕತ್ವವನ್ನು ತ್ಯಜಿಸಿದ್ದರು. ಆದರೆ, ಇನ್‌ಸ್ಟಾಗ್ರಾಮ್ ಪೋಸ್ಟ್ನಲ್ಲಿ ಭಾರತದ ಟೆಸ್ಟ್ ಮತ್ತು ಏಕದಿನ ನಾಯಕನಾಗಿ ಮುಂದುವರಿಯುವ ಬಯಕೆ ವ್ಯಕ್ತಪಡಿಸಿದ್ದರು.
“ಕೆಲಸದ ಹೊರೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯವಾದ ವಿಷಯ. ಕಳೆದ 8-9 ವರ್ಷಗಳಲ್ಲಿ ಎಲ್ಲಾ ಮೂರು ಮಾದರಿಯ ಆಟಗಳನ್ನು ಆಡಿರುವ ಮತ್ತು ಕಳೆದ 5-6 ವರ್ಷಗಳಿಂದ ನಿಯಮಿತವಾಗಿ ನಾಯಕತ್ವ ವಹಿಸಿರುವ ನನಗೆ ಅಪಾರ ಕೆಲಸದ ಹೊರೆಯಾಗಿದೆ. ಇದನ್ನು ಪರಿಗಣಿಸಿ ನಾನು ಟೆಸ್ಟ್ ಮತ್ತು ODI ಕ್ರಿಕೆಟ್‌ನಲ್ಲಿ ನಾಯಕತ್ವ ವಹಿಸುವೆ ಎಂದು ಅವರು ಸೆಪ್ಟೆಂಬರ್ 16 ರಂದು ಪೋಸ್ಟ್ ಮಾಡಿದ್ದಾರೆ. ಆದರೂ, ಆಯ್ಕೆದಾರರು ವೈಟ್-ಬಾಲ್ ಕ್ರಿಕೆಟ್‌ನಲ್ಲಿ (ಒನ್ ಡೇ ಮತ್ತು ಟಿ-20) ಪ್ರತ್ಯೇಕ ನಾಯಕರನ್ನು ಹೊಂದಲು ನಿರಾಕರಿಸಿದರು. ಅದರಂತೆ, ಅವರು ರೋಹಿತ್ ಶರ್ಮಾರಿಗೆ T20 ನಾಯಕತ್ವದ ಜೊತೆಗೆ ODI ನಾಯಕತ್ವವನ್ನೂ ನೀಡಿದರು. ಕೊಹ್ಲಿಯನ್ನು ಟೆಸ್ಟ್ ನಾಯಕನಾಗಿ ಮಾತ್ರ ಉಳಿಸಿಕೊಳ್ಳಲಾಯಿತು.
ಬಿಸಿಸಿಐ ಮತ್ತು ಕೊಹ್ಲಿ ನಡುವೆ ಸಂವಹನ ನಡೆದಿದೆಯಾ?
ಗಂಗೂಲಿ ಪ್ರಕಾರ BCCI T20 ನಾಯಕತ್ವವನ್ನು ಬಿಟ್ಟುಕೊಡದಂತೆ ಕೊಹ್ಲಿಗೆ ಮನವಿ ಮಾಡಿತ್ತು. “ನಾವು (ಬಿಸಿಸಿಐ) ಟಿ20 ನಾಯಕತ್ವದಿಂದ ಕೆಳಗಿಳಿಯದಂತೆ ವಿರಾಟ್‌ಗೆ ಮನವಿ ಮಾಡಿದ್ದವು” ಎಂದಿದ್ದಾರೆ.
ಭಾರತ ತಂಡದ ದಕ್ಷಿಣ ಆಫ್ರಿಕಾ ಪ್ರವಾಸದ ಮೊದಲು ಬುಧವಾರ (ಡಿಸೆಂಬರ್ 15) ನಡೆದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಇದಕ್ಕೆ ವ್ಯತಿರಿಕ್ತವಾಗಿ ಹೇಳಿದರು. ಆ ನಿಟ್ಟಿನಲ್ಲಿ ಯಾರೂ ತನ್ನೊಂದಿಗೆ ಸಂವಹನ ನಡೆಸಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
“ಟಿ20 ತಂಡದ ನಾಯಕತ್ವವನ್ನು ಬಿಟ್ಟುಕೊಡಬೇಡಿ ಎಂದು ನನಗೆ ಎಂದಿಗೂ ಹೇಳಲಿಲ್ಲ. ನಾನು ಡಿಸೆಂಬರ್ 8 ರವರೆಗೆ T20 ತಂಡದ ನಾಯಕತ್ವದ ನಿರ್ಧಾರವನ್ನು ಪ್ರಕಟಿಸಿದಾಗಿನಿಂದ ನನಗೆ ಯಾವುದೇ ಪೂರ್ವ ಸಂವಹನ ಇರಲಿಲ್ಲ. ಆಗ ನನಗೆ ಆಯ್ಕೆ ಸಭೆಯ ಮೊದಲ ಕರೆ ಬಂದಿತು. ಮುಖ್ಯ ಆಯ್ಕೆಗಾರ (ಚೇತನ್ ಶರ್ಮಾ) ನನ್ನೊಂದಿಗೆ ಟೆಸ್ಟ್ ತಂಡದ ಬಗ್ಗೆ ಚರ್ಚಿಸಿದರು, ನಾವಿಬ್ಬರೂ ಒಪ್ಪಿಕೊಂಡೆವು. ಕರೆಯನ್ನು ಕೊನೆಗೊಳಿಸುವ ಮೊದಲು, ಐವರು ಆಯ್ಕೆದಾರರು ನಾನು ಒನ್ ಡೇ ನಾಯಕನಾಗಿ ಮುಂದುವರೆಯುವುದಿಲ್ಲ ಎಂದು ನಿರ್ಧರಿಸಿದ್ದಾರೆ ಎಂದು ನನಗೆ ತಿಳಿಸಲಾಯಿತು. ಅದಕ್ಕೆ ನಾನು ‘ಸರಿ, ಸರಿ’ ಎಂದು ಉತ್ತರಿಸಿದೆ. ನಂತರ ಆಯ್ಕೆ ಸಮಿತಿ ಕರೆಯಲ್ಲಿ. ನಾವು ಅದರ ಬಗ್ಗೆ ಸಂಕ್ಷಿಪ್ತವಾಗಿ ಚಾಟ್ ಮಾಡಿದೆವು. ಅಷ್ಟೇ ನಡೆದಿದ್ದು. ಅದಕ್ಕೂ ಮೊದಲು ಯಾವುದೇ ಸಂವಹನ ಇರಲಿಲ್ಲ’ ಎಂದು ಕೊಹ್ಲಿ ಸ್ಪಷ್ಟ ಪಡಿಸಿದ್ದಾರೆ.
ODI ನಾಯಕತ್ವದ ಘೋಷಣೆಯ ದಿನದಂದು BCCI ಉನ್ನತ ಅಧಿಕಾರಿಯೊಬ್ಬರು ಒನ್ ಡೇ ತಂಡದ ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕೊಹ್ಲಿಯೊಂದಿಗೆ (ಆಯ್ಕೆ ಸಭೆಯ ಮುನ್ನಾದಿನದಂದು) ಯಾವುದೇ ಸಂವಹನ ನಡೆಸಿಲ್ಲ ಎಂದಿದ್ದರು. ಬುಧವಾರದ ಪತ್ರಿಕಾಗೋಷ್ಠಿಯಲ್ಲಿ ಕೊಹ್ಲಿ ಅದನ್ನು ಇನ್ನೊಂದು ರೀತಿಯಲ್ಲಿ ದೃಢಪಡಿಸಿದ್ದನ್ನು ಗಮನಿಸಬಹುದು.
ಡ್ರೆಸ್ಸಿಂಗ್ ರೂಮ್ ಬಿರುಕು?
ಈ ಊಹಾಪೋಹವು 1980 ರ ದಶಕದಲ್ಲಿ ಸುನಿಲ್ ಗವಾಸ್ಕರ್ ಮತ್ತು ಕಪಿಲ್ ದೇವ್ ನಡುವಿನ ಭಿನ್ನಾಭಿಪ್ರಾಯದ ಸಂಘರ್ಷವನ್ನು ನೆನಪಿಸುತ್ತದೆ. 1984-85ರಲ್ಲಿ ಇಂಗ್ಲೆಂಡ್ ವಿರುದ್ಧದ ಕೊಲ್ಕೊತ್ತಾ ಟೆಸ್ಟ್ನಲ್ಲಿ ಕಪಿಲ್ ದೇವ್ ಅವರನ್ನು ಹೊರಗಿಡಲಾಗಿತ್ತು. ಹಿಂದಿನ ದೆಹಲಿ ಟೆಸ್ಟ್ನಲ್ಲಿ ಕಳಪೆ ಶಾಟ್ ಕಾರಣಕ್ಕೆ ಔಟಾದ ಹಿನ್ನೆಲೆಯಲ್ಲಿ ಈ ಕ್ರಮ ಅನುಸರಿಸಲಾಗಿತ್ತು. ಅದು ಗವಾಸ್ಕರ್ ಮತ್ತು ಕಪಿಲ್ ನಡುವಿನ ಆಂತರಿಕ ಭಿನ್ನಮತವೇ ಆಗಿತ್ತು. ಭಾರತ ತಂಡದಲ್ಲಿ ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಸೂಪರ್ ಸ್ಟಾರ್‌ಗಳು. ಅವರ ನಡುವೆಯೂ ನಾಯಕತ್ವಕ್ಕಾಗಿ ಆಂತರಿಕ ಸಂಘರ್ಷವಿರುವುದು ಸಹಜವೇ.
ಭಾರತ ತಂಡದ ಮಾಜಿ ನಾಯಕ ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯ ಹಾಲಿ ಅಧ್ಯಕ್ಷ ಮೊಹಮ್ಮದ್ ಅಜರುದ್ದೀನ್ ಮಂಗಳವಾರ (ಡಿಸೆಂಬರ್ 14) ಟ್ವೀಟ್ ಮಾಡಿದ್ದು, “ಒನ್ ಡೇ ಸರಣಿಗೆ ತಾನು ಲಭ್ಯವಿಲ್ಲ ಎಂದು ವಿರಾಟ್ ಕೊಹ್ಲಿ ತಿಳಿಸಿದ್ದಾರೆ ಮತ್ತು ಮುಂಬರುವ ಟೆಸ್ಟ್‌ಗೆ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ವಿರಾಮವನ್ನು ತೆಗೆದುಕೊಳ್ಳುವುದರಿಂದ ಯಾವುದೇ ಹಾನಿ ಇಲ್ಲ. ಆದರೆ ಯಾವ ಸಂದರ್ಭದಲ್ಲಿ ಇದು ನಡೆಯಿತು ಎಂಬುದು ಮುಖ್ಯ. ಇದು ಅವರಿಬ್ಬರ ಮಧ್ಯದ ಬಿರುಕಿನ ಊಹಾಪೋಹವನ್ನು ಸಮರ್ಥಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವದಂತಿಗಳನ್ನು ಹರಡುವವರನ್ನು ನಂಬಬೇಡಿ ಎಂದಿರುವ ಕೊಹ್ಲಿ, “ನಾನು ಈ ಸಮಯದಲ್ಲಿ ಆಯ್ಕೆಗೆ ಲಭ್ಯವಿದ್ದೇನೆ. ಏಕೆಂದರೆ ನಾನು ವಿಶ್ರಾಂತಿ ಪಡೆಯಲು ಬಯಸುತ್ತೇನೆ ಎಂದು BCCI ಯೊಂದಿಗೆ ಯಾವುದೇ ಸಂವಹನವನ್ನು ಮಾಡಿಲ್ಲ. ನಾನು ದಕ್ಷಿಣ ಆಫ್ರಿಕಾದಲ್ಲಿ ಒನ್‌ಡೇಗಳಿಗೆ ಲಭ್ಯವಿದ್ದೇನೆ ಮತ್ತು ನಾನು ಯಾವಾಗಲೂ ಆಡಲು ಉತ್ಸುಕನಾಗಿದ್ದೇನೆʼ ಎಂದಿದ್ದಾರೆ.
ರೋಹಿತ್ ಜೊತೆಗಿನ ಭಿನ್ನಾಭಿಪ್ರಾಯ ತಳ್ಳಿ ಹಾಕಿದ ಕೊಹ್ಲಿ
ವೈಟ್-ಬಾಲ್ ಕ್ರಿಕೆಟ್‌ನಲ್ಲಿ ರೋಹಿತ್ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್‌ಗೆ ಸಂಪೂರ್ಣ ಬೆಂಬಲ ಮತ್ತು ಸಹಕಾರ ನೀಡುವೆ ಎಂದು ಕೊಹ್ಲಿ ಭರವಸೆ ನೀಡಿದ್ದಾರೆ. ರೋಹಿತ್ ನಾಯಕತ್ವದ ಬಗ್ಗೆ ಅವರು ಗುಣಗಾನ ಮಾಡಿ, ”ನನ್ನ ಮತ್ತು ರೋಹಿತ್ ನಡುವೆ ಯಾವುದೇ ಸಮಸ್ಯೆ ಇಲ್ಲ. ಕಳೆದ ಎರಡೂವರೆ ವರ್ಷಗಳಲ್ಲಿ ನಾನು ಅದನ್ನು ಪದೇ ಪದೇ ವಿವರಿಸಿದ್ದೇನೆ. ರೋಹಿತ್ ಅತ್ಯಂತ ಸಮರ್ಥ ನಾಯಕ” ಎಂದಿದ್ದಾರೆ.