ಕೊಡಗು: ಪೊನ್ನಂಪೇಟೆ ತಾಲೂಕಿನ ಚೂರಿಕಾಡು ಗ್ರಾಮದ ಕಾಫಿ ತೋಟದಲ್ಲಿ ಇಬ್ಬರನ್ನು ಬಲಿ ಪಡೆದಿದ್ದ ಹುಲಿ ಕೊನೆಗೂ ಸೆರೆಯಾಗಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.
ಸಮೀಪದ ನಾಣಚ್ಚಿ ಬಳಿಯ ಕಾಫಿ ತೋಟದಲ್ಲಿ ಅಡಗಿದ್ದ ಹುಲಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಯಿತು.
ಇದರ ಅಂದಾಜು ವಯಸ್ಸು 12. ವಯಸ್ಸಾಗಿರುವ ಕಾರಣಕ್ಕೆ ಇದು ಕಾಡಿನಿಂದ ಹೊರಬಂದು ಜನ ಜಾನುವಾರುಗಳ ಮೇಲೆ ಆಕ್ರಮಣ ಮಾಡುತ್ತಿತ್ತು ಎಂದು ವಲಯ ಅರಣ್ಯಾಧಿಕಾರಿ ಅಶೋಕ್ ಹುನಗುಂದ ತಿಳಿಸಿದರು.
ನಿನ್ನೆಯಿಂದ ಅರಣ್ಯ ಇಲಾಖೆ ಹುಲಿ ಸೆರೆಗೆ ಸುತ್ತಲಿನ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಮಾಡುತ್ತಿತ್ತು.ಇಂದು ಮುಂಜಾನೆಯಿಂದಲೇ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಅರಣ್ಯ ಇಲಾಖೆ, ಶಾರ್ಪ್ ಶೂಟರ್, ವೈದ್ಯರು ಮತ್ತು 100 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಗಳ 8 ತಂಡ ಮಾಡಿ ಹುಡುಕಾಟ ಆರಂಭಿಸಿತ್ತು.
ಅಲ್ಲದೇ ಅಭಿಮನ್ಯು ನೇತೃತ್ವದ 4 ಸಾಕಾನೆಗಳನ್ನು ತಂದು ಹುಲಿ ಸೆರೆಗೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅ ಇಬ್ಬರನ್ನು ಬಲಿಪಡೆದ ಸ್ಥಳದಲ್ಲಿ ಬೋನ್ ಇಟ್ಟು ಹುಲಿ ಸೆರೆಗೆ ಅರಣ್ಯ ಇಲಾಖೆ ಸಕಲ ಕ್ರಮಗಳನ್ನು ಕೈಗೊಂಡಿತ್ತು.
ಹುಲಿ ಉಪವಲಯ ಅರಣ್ಯಾಧಿಕಾರಿ ರಂಜನ್ ಅವರ ಕಣ್ಣಿಗೆ ಕಾಣಿಸಿಕೊಂಡಿದೆ. ಆಗ ತಕ್ಷಣವೇ ಅವರು ಅರಿವಳಿಕೆ ಚುಚ್ಚುಮದ್ದು ಪ್ರಯೋಗಿಸಿದರು. ಸ್ವಲ್ಪ ದೂರು ಸಾಗಿದ ಹುಲಿ ಪ್ರಜ್ಞೆ ತಪ್ಪಿ ಬಿದ್ದಿತು.
ಸೆರೆ ಹಿಡಿದ ಹುಲಿಯನ್ನು ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಲಾಯಿತು ಎಂದು ಅವರು ಹೇಳಿದರು.