ಮಾನವ ಈಗಾಗಲೇ ಪ್ರಕೃತಿಯನ್ನು ಸಾಕಷ್ಟು ಮಲೀನಗೊಳಿಸಿದ್ದು, ಪರಿಸರ ಉಳಿಸಿಕೊಳ್ಳುವುದೇ ಇಂದಿನ ಆಧುನಿಕ ಯುಗದಲ್ಲಿ ದೊಡ್ಡ ಸವಾಲಾಗಿದೆ. ಜನರೂ ಅಭಿವೃದ್ದಿಯ ದೃಷ್ಟಿಯಿಂದ ಪ್ರಕೃತಿಯನ್ನು ನಾಶ ಮಾಡುತ್ತಲೇ ಸಾಗಲಾಗುತ್ತಿದೆ. ಇಂದು ನಮ್ಮ ರಾಷ್ಟ್ರ ರಾಜಧಾನಿಯಲ್ಲಿ ಉಸಿರಾಡಲು ಶುದ್ದ ಗಾಳಿ ಕೂಡ ದೊರೆಯುತ್ತಿಲ್ಲ. ಮುಂದಿನ ಮೂರು ದಶಕಗಳಲ್ಲಿ ನಮ್ಮ ರಾಜ್ಯ ರಾಜಧಾನಿ ಬೆಂಗಳೂರಿನ ವಾತಾವರಣ ಕೂಡ ಇದಕ್ಕಿಂತ ಭಿನ್ನವಾಗಿ ಇರುವುದಿಲ್ಲ ಎಂದು ಪರಿಸರ ತಜ್ಞರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಪರಿಸರ ಸಂರಕ್ಷಣೆಗಾಗಿಯೇ ವಿಶ್ವಸಂಸ್ಥೆ ವಾರ್ಷಿಕವಾಗಿ ಕೋಟ್ಯಾಂತರ ಡಾಲರ್ ಗಳನ್ನು ವ್ಯಯಿಸುತ್ತಿದೆ. ವಿಶ್ವಸಂಸ್ಥೆಯ ಇಂತಹ ಒಂದು ಕಾರ್ಯಕ್ರಮದಲ್ಲಿ ಕೊಡಗಿನ ಬಾಲಕಿಯೊಬ್ಬಳು ಭಾಗವಹಿಸಿ ಜಿಲ್ಲೆಗೆ ಹೆಮ್ಮೆ ತಂದಿದ್ದಾಳೆ. ಬಾಲಕಿ ಯಶ್ಮಿ ದೇಚಮ್ಮ ಭಾರತದಿಂದ ಆಯ್ಕೆ ಆಗಿರುವ ಏಕೈಕ ಬಾಲಕಿ ಆಗಿದ್ದಾಳೆ.
ಈ ಕುರಿತು ಪ್ರತಿಧ್ವನಿಯೊಂದಿಗೆ ಮಾತನಾಡಿದ ಮಣವಟ್ಟೀರ ಯಶ್ಮಿ ದೇಚಮ್ಮ ಅವರು ನಮ್ಮ ಅಜ್ಜ-ಅಜ್ಜಿಯರು ಉಸಿರಾಡಿದ ಶುದ್ಧ ಗಾಳಿಯನ್ನೇ ನಾವೂ ಉಸಿರಾಡಲು ಬಯಸುತ್ತೇವೆ. ನಮ್ಮ ಪೂರ್ವಜರು ಆನಂದಿಸಿದ ಭೂಮಿಯನ್ನೇ ನಾವು ನೋಡಲು, ಅನುವಂಶಿಕವಾಗಿ ಪಡೆಯಲು ಬಯಸುತ್ತೇವೆ ಎಂದು ಹೇಳಿದರು. 9ನೇ ತರಗತಿ ವಿದ್ಯಾರ್ಥಿನಿ ಆಗಿರುವ ಅವರು ಮೂಲತಃ ದಕ್ಷಿಣ ಕೊಡಗಿನ ನೆಲಜಿ ಗ್ರಾಮದವರಾಗಿದ್ದಾರೆ.

ವಿಶ್ವ ವ್ಯಾಪ್ತಿಯ ಪರಿಸರವಾದಿಗಳಿಗೆ ಕಾವೇರಿಯ, ಕೊಡಗಿನ ಪರಿಚಯ ಮಾಡಿದ ಈ ಬಾಲಕಿ, ಯುನೈಟೆಡ್ ನೇಷನ್ ಓಷನ್ ಡೆಕೇಡ್ 2021 ವಾಟರ್ ಸಮ್ಮಿಟ್ನ 13-17 ರ ವಯೋಮಿತಿಯ ವೀಡಿಯೋ ಕಥಾ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ ಏಕೈಕ ಭಾರತೀಯ ವಿದ್ಯಾರ್ಥಿನಿ ಯಾಗಿದ್ದಾರೆ. ಕಾವೇರಿ ನದಿಯ ಮೂಲ ರೂಪದಿಂದ ಪ್ರಾರಂಭ ಗೊಳ್ಳುವ ವೀಡಿಯೋ, ನದಿಯ ಪಾವಿತ್ರ್ಯತೆಯನ್ನು, ಕಾವೇರಿಯ ಪೂಜ್ಯ ರೂಪವನ್ನು ವಿವರಿಸುತ್ತಾ, ಇಂದಿನ ಕಾವೇರಿಯ ನೈಜ ಕಲುಷಿತ ರೂಪವನ್ನು, ನದಿಯನ್ನು ಸ್ವಚ್ಛತೆಯೆಡೆಗೆ ಮರಳಿ ಪರಿವರ್ತಿಸುವಲ್ಲಿ ಪಡುತ್ತಿರುವ ಶ್ರಮವನ್ನು ಇಂಪಾದ ಕೊಡವ ಹಾಡಿನ ಹಿನ್ನೆಲೆಯನ್ನೊಳಗೊಂಡಂತೆ ವಿವರಿಸುತ್ತದೆ. “ನಾವು ಕಾವೇರಿಯನ್ನು ಸರಿಪಡಿಸುವದಕ್ಕಿಂತ, ಅವಳನ್ನು ನಾವು ಗುಣಮುಖಳನ್ನಾಗಿಸೋಣ,” ಎಂಬ ಅರ್ಥಪೂರ್ಣವಾದ ಸಂದೇಶದೊಂದಿಗೆ ರೂಪಿಸಿರುವ ವೀಡಿಯೋ ಹೆಚ್ 2021 ಜಲ ಶೃಂಗಸಭೆಯಲ್ಲಿ ವಿಶ್ವದೆಲ್ಲ್ಲೆಡೆಯಿಂದ ಬಂದ 65 ಇನ್ನಿತರ ವೀಡಿಯೋಗಳ ಪೈಕಿ ಆಯ್ಕೆಯಾಗಿರುವ ಆರು ವೀಡಿಯೋಗಳಲ್ಲಿ ಇದು ಒಂದಾಗಿದೆ.

ಮೈಸೂರಿನ ಆಚಾರ್ಯ ವಿದ್ಯಾಕುಲ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ಯಶ್ಮಿ, ನೆಲಜಿಯ ಮಣವಟ್ಟೀರ ಕುಶಾಲಪ್ಪ ಹಾಗೂ ನಳಿನಿ ದಂಪತಿಯ ಪುತ್ರಿ. “ಇನ್ಸ್ಟಾಗ್ರಾಂ ನಲ್ಲಿ ಹೆಚ್ 200 ಯುನೈಟೆಡ್ ನೇಷನ್ ಓಷನ್ ಡೆಕೆಡ್ ಸಮ್ಮಿಟ್ನ ಪರಿಚಯವನ್ನು ನಾನು ಪಡೆದೆ. ಡಿಸೆಂಬರ್ ತಿಂಗಳಿನಲ್ಲಿ ನಾನು ಇನ್ನೊಂದು ಇದೇ ರೀತಿಯ ಸಮ್ಮೇಳನದಲ್ಲಿ ಭಾಗವಹಿಸಿದ್ದು ಈ ಸಮ್ಮೇಳನದಲ್ಲಿ ನಾನು ಹವಾಮಾನ ಬದಲಾವಣೆಯ ಬಗ್ಗೆ ಹಾಗೂ ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ವಿಶ್ವದೆಲ್ಲೆಡೆಯ ಗಣ್ಯರಿಂದ ಕೇಳಿ ಅರಿತೆ ಎಂದು ಯಶ್ಮಿ ವಿವರಿಸುತ್ತಾರೆ.
ಭೂಮಿಯು ಬಹಳ ನೋವಿನ ಸ್ಥಿತಿಯಲ್ಲಿದೆ ಎಂದು ವಿವರಿಸುವ ಯಶ್ಮಿ, ಮುಂದಿನ ಪೀಳಿಗೆ ಭೂಮಿಯನ್ನು ವಿಮುಕ್ತ, ಸ್ವತಂತ್ರ ರೂಪದಲ್ಲಿ ಕಾಣಬೇಕಾದರೆ, ಅದರ ರಕ್ಷಣೆಯನ್ನು ಈಗಿನಿಂದಲೇ ಪ್ರಾರಂಭಿಸಬೇಕು ಎನ್ನುತ್ತಾರೆ. “ನನ್ನ ತಾಯಿ ಕೊಡಗಿನಲ್ಲಿ ಹುಟ್ಟಿ ಬೆಳೆಯುತ್ತಿದ್ದಾಗ, ಕೊಡಗು ಅತೀ ಸುಂದರವಾಗಿತ್ತಂತೆ. ಆ ಕಾಲದಲ್ಲಿ ಎಷ್ಟೇ ಮಳೆ ಬಂದರೂ, ಪ್ರಕೃತಿಯಿಂದ ಯಾರಿಗೂ ಏನೂ ಹಾನಿಯಾಗುತ್ತಿರಲಿಲ್ಲ. ಆದರೆ, ಇದೆಲ್ಲಾ ಈಗ ಬದಲಾಗಿದೆ.

ಹವಾಮಾನ ಬದಲಾವಣೆಯ ಪರಿಣಾಮಗಳನ್ನು ನಾನು ಹೆಚ್ಚಾಗಿ ಅಂತ ರಾಷ್ಟ್ರೀಯ ಸಮ್ಮೇಳನದಲ್ಲಿ ಅರಿತುಕೊಂಡೆ. ಪ್ರತೀ ವಾರವೂ ಒಂದೊಂದು ವಿಷಯದ ಬಗೆಗೆ ನಾನು ಲೇಖನ ಹಾಗೂ ಇನ್ನಿತರ ಚರ್ಚೆಗಳಲ್ಲಿ ಪಾಲ್ಗೊಂಡು, ನೀರು ಹಾಗೂ ಅದರ ಪಾವಿತ್ರ್ಯತೆ ಎಂಬ ವಿಷಯದ ಬಗ್ಗೆ ವೀಡಿಯೋ ಮಾಡಲು ನಿರ್ಧರಿಸಿದೆ ಎಂದು ಯಶ್ಮಿ ವಿವರಿಸುತ್ತಾರೆ.

ಕೊಡಗಿಗೆ ಬಂದು, ಈ ಬಾಲಕಿ ಇನ್ನಿತರ ಸಂಬಂಧಿಕರ ಸಹಾಯದಿಂದ ಕಾವೇರಿ ನದಿ, ಕೊಡಗಿನ ಛಾಯಾಚಿತ್ರ ಹಾಗೂ ವೀಡಿಯೋಗಳನ್ನು ಸಂಗ್ರಹಿಸಿ ತನ್ನ ಸಹೋದರ ಸಂಬಂಧಿಯಾದ ಭುವನಾ ನಾಣಯ್ಯ ಹಾಗೂ ಸೋದರಮಾವ ನಾಣಯ್ಯ ಅವರು ಹಾಡಿರುವ ಕೊಡವ ಹಾಡಿನ ಹಿನ್ನೆಲೆಯೊಂದಿಗೆ ಸುಮಾರು 1.30 ನಿಮಿಷದ ವೀಡಿಯೋ ಮಾಡಿ ವಿಶ್ವದ ಹಲವಾರು ಪರಿಸರ ಪ್ರೇಮಿಗಳ, ಗಣ್ಯರ ಮನಸೆಳೆದಿದ್ದಾರೆ.

ಯಶ್ಮಿ ಮಾಡಿರುವ ವೀಡಿಯೋ ಮುಂಬರುವ ಯುನೈಟೆಡ್ ನೇಷನ್ನ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಯುಎನ್ ವತಿಯಿಂದ ಹವಾಯಿನಲ್ಲಿ ನಡೆಯುವ ಸಬಲೀಕರಣ ಮತ್ತು ನಾಯಕತ್ವ ಶೃಂಗಸಭೆಯಲ್ಲಿ ಭಾಗವಹಿಸಲು ಯಶ್ಮಿಗೆ ಅವಕಾಶ ಕಲ್ಪಿಸಿಕೊಡಲಾಗಿರುವುದು ಮತ್ತೊಂದು ವಿಶೇಷತೆಯಾಗಿದೆ. ಇಂತಹ ಇನ್ನಷ್ಟು ಯುವ ಪ್ರತಿಭೆಗಳು ನಮ್ಮ ನಾಡಿನಿಂದ ಹೊರಹೊಮ್ಮಿ ದೇಶದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿಯಲಿ ಎಂದು ಆಶಿಸೋಣ.