ಶಿವಮೊಗ್ಗ: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಪಿಚೇಷ್ಟೆಯನ್ನ ಬಿಟ್ಟು ಆರ್ಎಸ್ಎಸ್ ಏನು ಮಾಡಿದೆ ಎಂಬುದನ್ನ ತಿಳಿದುಕೊಳ್ಳಲಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಶಿವಮೊಗ್ಗದಲ್ಲಿ ಈ ಬಗ್ಗೆ ಮಾತನಾಡಿದ ಅವರು, ರಾಷ್ಟ್ರಭಕ್ತ ಸಂಘಟನೆ ಆಗಿರುವ ಆರ್ಎಸ್ಎಸ್ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಒಂದು ರೀತಿ ಕಪಿಗಳ ರೀತಿ ಮಾತನಾಡಿದ್ದಾರೆ. ಆದರೆ ಆರ್ಎಸ್ಎಸ್ ರಾಷ್ಟ್ರ ನಿಷ್ಠ ಸಂಸ್ಥೆಯಾಗಿದ್ದು, ಆರ್ಎಸ್ಎಸ್ ರಾಷ್ಟ್ರಭಕ್ತ ನಾಯಕರನ್ನು ತಯಾರು ಮಾಡುತ್ತಿರುವ ಸಂಘಟನೆಯಾಗಿದೆ. ಇಂತಹ ಆರ್ಎಸ್ಎಸ್ ಹಾಗೂ ಅದರ ನಿಷ್ಠೆಯ ಬಗ್ಗೆ ಕಪಿಚೇಷ್ಟೆ ಮಾಡುತ್ತಾ ಹೋದರೆ ಅವರಿಗೆ ಪ್ರಚಾರ ಸಿಗಬಹುದು. ಆದರೆ ಜನ ಸಿದ್ದರಾಮಯ್ಯ ಹಾಗೂ ಕಾಂಗ್ರೆಸನ್ನು ಧೂಳಿಪಟ ಮಾಡುತ್ತಾರೆ. ಇದನ್ನು ಮುಂದುವರಿಸಿದರೆ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ಧೂಳಿಪಟವಾಗುತ್ತಾರೆ ಎಂದು ಟೀಕಿಸಿದರು
.
ಪ್ರಪಂಚದಲ್ಲಿ ಆರ್ಎಸ್ಎಸ್ನಷ್ಟು ದೊಡ್ಡಸಂಘಟನೆ ಬೇರೆ ಇಲ್ಲ. ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿರುವುದು ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ. ಪಿಎಫ್ಐ ರಾಷ್ಟ್ರದ್ರೋಹಿ ಕೆಲಸ ಮಾಡುತ್ತಿದೆ, ಭಯೋತ್ಪಾದಕತೆ ಮಾಡುತ್ತಿದೆ ಎಂಬ ಕಾರಣಕ್ಕೆ ಬ್ಯಾನ್ ಆಗಿದೆ. ಆದರೆ ಇಂತಹ ಸಂಘಟನೆಗಳನ್ನು ಬೆಳೆಸಿದ್ದು ಸಿದ್ದರಾಮಯ್ಯ ಅವರಂತಹ ನಾಯಕರು. ಆದರೆ ರಾಷ್ಟ್ರದ್ರೋಹಿ ಚಟುವಟಿಕೆ ಧಮನ ಮಾಡುವ ಶಕ್ತಿ ನೀಡಿದ್ದು ಆರ್ಎಸ್ಎಸ್ನ ರಾಷ್ಟ್ರನಿಷ್ಟೆ ಎಂದರು.
ಇವೆಲ್ಲವೂ ಸಿದ್ದರಾಮಯ್ಯನವರಿಗೆ ಅರ್ಥವಾಗಿದೆ. ಆದರೆ ಅವರಿಗೆ ತಮ್ಮ ರಾಜಕೀಯ ಉಳಿವಿಗಾಗಿ ಏನು ಬೇಕಾದರೂ ಪದಬಳಸುವ ಪ್ರಯತ್ನ ನಡೆಸುತಿದ್ದಾರೆ. ಸಿದ್ದರಾಮಯ್ಯ ಅವರಿಗೆ ನಾನೇ ಏರ್ ಟಿಕೆಟ್ ಮಾಡಿ ಕೊಡುತ್ತೇನೆ ಅಥವಾ ಹಡಗಿನಲ್ಲಿ ಅಂಡಮಾನಿಗೆ ಕಳುಹಿಸುತ್ತೇನೆ. ಅಲ್ಲಿ ಸಾವರ್ಕರ್ ಏನು ಶಿಕ್ಷೆ ಅನುಭವಿಸಿದರು ಎಂಬುದನ್ನು ನೋಡಿಕೊಂಡು ಬರಲಿ. ಸಿದ್ದರಾಮಯ್ಯ ಜಿನ್ನಾ ಬಗ್ಗೆ ಮಾತನಾಡಬೇಕಿತ್ತು. ಆದರೆ ದೇಶಭಕ್ತ ಸಾವರ್ಕರ್ ಬಗ್ಗೆ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಸಿದ್ದರಾಮಯ್ಯಗೆ ಆರ್ಎಸ್ಎಸ್ ಹಾಗೂ ಮೋದಿ ಬಗ್ಗೆ ಮಾತನಾಡಲಿಲ್ಲ ಎಂದರೆ ಸಮಾಧಾನವಾಗಲ್ಲ ಎಂದು ಕಿಡಿಕಾರಿದರು.
ಸೂರ್ಯನಿಗೆ ಉಗಿದರೆ ಉಗುಳು ತನ್ನ ಮುಖದ ಮೇಲೆ ಬೀಳುತ್ತದೆ ಎಂಬುದು ಸಿದ್ದರಾಮಯ್ಯಗೆ ತಿಳಿದಿಲ್ಲ. ಕಪಿಯಂತೆ ಆಡುವುದನ್ನು ಬಿಡು ಎಂದು ಹೇಳುತ್ತೇನೆ ಅಷ್ಟೆ. ಕೇಸ್ ದಾಖಲಿಸುವಷ್ಟು ದೊಡ್ಡ ಮನುಷ್ಯ ಸಿದ್ದರಾಮಯ್ಯ ಅಲ್ಲ. ಸೋನಿಯಾಗಾಂಧಿ ಹಾಗೂ ವಿದೇಶಿ ವ್ಯಕ್ತಿಗಳನ್ನು ನೋಡಿ ಅವರೇ ದೇಶಭಕ್ತರು ಎಂದುಕೊಂಡಿದ್ದಾರೆ. ಸಿದ್ದರಾಮಯ್ಯಗೆ ಟಿಪ್ಪು, ಜಿನ್ನಾ, ಸೋನಿಯಾಗಾಂಧಿ ಅಷ್ಟೇ ಗೊತ್ತು ಎಂದರು.
ಯಾವ ಕ್ಷೇತ್ರದಲ್ಲಿ ನಿಲ್ಲಬೇಕು ಎಂದು ಸಿದ್ದರಾಮಯ್ಯ ಕ್ಷೇತ್ರ ಹುಡುಕುತಿದ್ದಾರೆ. ಒಂದೊಂದು ಚುನಾವಣೆಯಲ್ಲಿ ಒಂದೊಂದು ಕ್ಷೇತ್ರದಲ್ಲಿ ನಿಲ್ಲುವ ಮೂಲಕ ಅಲೆಮಾರಿ ರಾಜಕಾರಣಿಯಾಗಿದ್ದಾರೆ. ಮೋದಿ ಹಾಗೂ ಆರ್ಎಸ್ಎಸ್ ಬೈದರೆ ಮುಸಲ್ಮಾನರು ತಮಗೆ ಮತ ನೀಡುತ್ತಾರೆ ಎಂಬ ಭ್ರಮೆಯಲ್ಲಿ ಸಿದ್ದರಾಮಯ್ಯ ಇದ್ದಾರೆ ಎಂದರು.
ಇದೇ ವೇಳೆ ವಿಧಾನಸೌಧದಲ್ಲಿ ಹಣ ಸಿಕ್ಕ ಪ್ರಕರಣದ ಬಗ್ಗೆ ತನಿಖೆ ಮಾಡಿ ತಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತಾರೆ. ಮೀಸಲಾತಿ ವಿಚಾರಕ್ಕೂ ಯಡಿಯೂರಪ್ಪ ಅವರ ಕೈವಾಡಕ್ಕೂ ಸಂಬಂಧ ಎಲ್ಲಿದೆ ಎಂಬುದನ್ನು ಯತ್ನಾಳ್ ಸ್ಪಷ್ಟಪಡಿಸಬೇಕು. ಆರಂಭದಿಂದಲೂ ಈ ಬಗ್ಗೆ ಟೀಕೆ ಮಾಡುತಿದ್ದಾರೆ. ಇದು ಒಳ್ಳೆಯದಲ್ಲ. ಯಡಿಯೂರಪ್ಪ ಪಕ್ಷಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ.
ಯತ್ನಾಳ್ ನನ್ನ ಆತ್ಮೀಯ ಸ್ನೇಹಿತ. ಪಂಚಮಸಾಲಿಗೆ ಮೀಸಲಾತಿ ನೀಡುವ ಬಗ್ಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಆಪಾದನೆ ಮಾಡಬೇಡಿ. ನನ್ನ ಮೇಲೆ ಆಪಾದನೆ ಬಂದಾಗ ತುಂಬಾ ನೋವಾಗಿತ್ತು. ನಾನು ತಪ್ಪು ಮಾಡಿದ್ದರೆ ಶಿಕ್ಷೆ ನೀಡು ಎಂದು ಚಾಮುಂಡೇಶ್ವರಿಯಲ್ಲಿ ಬೇಡಿಕೊಂಡಿದ್ದೆ. ಬಳಿಕ ನನಗೆ ಕ್ಲೀನ್ ಚಿಟ್ ಸಿಕ್ಕ ಬಳಿಕ ಸಮಾಧಾನವಾಯಿತು.
ಬಳಿಕ ಮಂತ್ರಿ ಸ್ಥಾನ ನೀಡುವಂತೆ ಜನರೇ ಒತ್ತಾಯ ಮಾಡಲು ಆರಂಭಿಸಿದರು. ಹೀಗಾಗಿ ನಾನು ಎರಡು ದಿನ ಅಧಿವೇಶನಕ್ಕೂ ಹೋಗಿರಲಿಲ್ಲ. ಬಳಿಕ ಸಿಎಂ ಮಂತ್ರಿ ಸ್ಥಾನ ನೀಡುವ ಭರವಸೆ ನೀಡಿದ್ದರು. ಬಳಿಕ ಅಧಿವೇಶನಕ್ಕೆ ಹೋದೆ. ನನಗೆ ಮಂತ್ರಿ ಸ್ಥಾನ ಕೊಡುವುದು ಬಿಡುವುದು ಪಕ್ಷಕ್ಕೆ ಬಿಟ್ಟ ವಿಚಾರ ಎಂದರು.