ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆಯ ʻಕಿಸಿ ಕ ಭಾಯ್ ಕಿಸಿ ಕಿ ಜಾನ್ʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ರಿಲೀಸ್ ಆದ ಕೆಲವೇ ನಿಮಿಷಗಳಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ ʻಕಿಸಿ ಕ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದ ಟ್ರೇಲರ್.

ಈ ಚಿತ್ರದಲ್ಲಿ ಸಲ್ಲುಗೆ ಜೋಡಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದು, ನಿರ್ದೇಶಕ ಫರ್ಹಾದ್ ಸಮ್ಜಿ ʻಕಿಸಿ ಕ ಭಾಯ್ ಕಿಸಿ ಕಿ ಜಾನ್ʼ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಏಪ್ರಿಲ್ 21ಕ್ಕೆ ಈ ಚಿತ್ರ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ಸಲ್ಮಾನ್ ಖಾನ್ ನಟನೆಯ ಸಿನಿಮಾ ಅಂದ್ರೆ ಪಕ್ಕಾ ಮಾಸ್ ಆಗಿರುತ್ತವೆ. ಅಲ್ಲಲ್ಲಿ ಪಂಚ್ ಡೈಲಾಗ್, ಕಾಮಿಡಿ, ಆಕ್ಷನ್ ಅಂತೂ ಇದ್ದೇ ಇರುತ್ವೆ. ʻಕಿಸಿ ಕ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದಲ್ಲೂ ಈ ಅಂಶಗಳು ಮಿಸ್ ಆಗೋದೆ ಇಲ್ಲ ಅನ್ನೋದಕ್ಕೆ ಟ್ರೇಲರ್‌ನಲ್ಲಿ ಸುಳಿವು ಸಿಕ್ಕಿದೆ.

ಚಿತ್ರದ ಟ್ರೈಲರ್ ನೋಡಿ ಸಲ್ಲು ಅಭಿಮಾನಿಗಳಂತೂ ಫಿದಾ ಆಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಟಾಲಿವುಡ್ ಸ್ಟಾರ್ ದಗ್ಗುಬಾಟಿ ವೆಂಕಟೇಶ್ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಟ ಜಗಪತಿ ಬಾಬು ಖಡಕ್ ವಿಲನ್ ಆಗಿ ಅಬ್ಬರಿಸಿದ್ದಾರೆ.

ಅಲ್ಲದೇ ʻಕಿಸಿ ಕ ಭಾಯ್ ಕಿಸಿ ಕಿ ಜಾನ್ʼ ಸಿನಿಮಾದ ಹಾಡೊಂದರಲ್ಲಿ ನಟ ರಾಮ್ ಚರಣ್ ಅತಿಥಿ ಪಾತ್ರ ಮಾಡಿದ್ದಾರೆ. ಒಟ್ನಲ್ಲಿ ʻಕಿಸಿ ಕ ಭಾಯ್ ಕಿಸಿ ಕಿ ಜಾನ್ʼ ಸಿನಿಮಾ ಹೇಗಿರಲಿದೆ ಅಂತ ಏಪ್ರಿಲ್ 21ರವರೆಗೂ ಕಾದು ನೋಡ್ಬೇಕಿದೆ.