ಮೈಸೂರು: ಫೆಬ್ರವರಿ 6 ರಂದು ಜಿಲ್ಲೆಯ ನಂಜನಗೂಡಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ತಂದೆ ಮಗನ ಅಪಹರಣ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಪ್ರಕರಣದ ಪ್ರಮುಖ ಆರೋಪಿಗಳಾದ 10 ಮಂದಿಯನ್ನು ಬಂಧಿಸಿದ್ದು, 21 ಲಕ್ಷ ರೂ. ನಗದು ವಶಕ್ಕೆ ಪಡೆಯಲಾಗಿದೆ ಎಂದರು.
ಹರ್ಷ ಇಂಪೆಕ್ಸ್ ಫ್ಯಾಕ್ಟರಿ ಮಾಲೀಕ ದೀಪಕ್ ಮತ್ತು ಅವರ ಪುತ್ರ ಹರ್ಷ ಎಂಬ ಇಬ್ಬರ ಅಪಹರಣ ನಡೆದಿತ್ತು. ಉದ್ಯಮಿ ಮೊಬೈಲ್ ಫೋನ್’ನಿಂದಲೇ ಆರೋಪಿಗಳು ಕುಟುಂಬಸ್ಥರಿಗೆ ಕಾಲ್ ಮಾಡಿ 1 ಕೋಟಿ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ನಡುವೆ 35 ಲಕ್ಷ ರೂ. ಅನ್ನು ಆರೋಪಿಗಳು ವಸೂಲಿ ಮಾಡಿದ್ದರು. ಈ ಕುರಿತು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿ, ಪ್ರಕರಣಕ್ಕೆ ಬಳಸಿದ್ದ ಕಾರು, ಮೂರು ದ್ವಿಚಕ್ರ ವಾಹನ, 5 ಡ್ರಾಗರ್, 3 ಲಾಂಗ್, 11 ಮೊಬೈಲ್ ಫೋಮ್ ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.

11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ ಪ್ರಮುಖ ಆರೋಪಿ
ಪ್ರಕರಣದ ತನಿಖೆಗಾಗಿ ಮೂರು ತಂಡಗಳನ್ನು ರಚಿಸಿದ್ದು, ಮಂಡ್ಯ ಮೂಲದ ಎ1 ಆರೋಪಿ ಕೊಲೆ ಪ್ರಕರಣದಲ್ಲಿ 11 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ. ಸ್ನೇಹಿತರ ತಂಡ ಕಟ್ಟಿಕೊಂಡು ಕಿಡ್ನಾಪ್ ಮಾಡಿ ಮತ್ತೆ ಜೈಲು ಪಾಲಾಗಿದ್ದಾನೆ.











