ಲೋಕಸಭಾ ಚುನಾವಣಾ ಕಾವು ರಂಗೇರಿದೆ. ಚುನಾವಣಾ ಅಧಿಕಾರಿಗಳು ಕೂಡ ಅಷ್ಟೇ ಅಲರ್ಟ್ ಆಗಿದ್ದಾರೆ. ಆದರೂ ವಾಮ ಮಾರ್ಗದ ಮೂಲಕ ಹಣ- ಹೆಂಡ ಹಂಚಿಕೆಯ ಸದ್ದಾಗುತ್ತಿದೆ. ಹೀಗಾಗಿ ನೀತಿ ಸಂಹಿತೆ ಉಲ್ಲಂಘಿಸುವ ಘಟನೆಗಳು ಆಗಾಗ ನಡೆಯುತ್ತಲೇ ಇದ್ದವು. ಈಗ ವ್ಯಕ್ತಿಯೊಬ್ಬ ಬಟ್ಟೆಯೊಳಗೆ 14 ಲಕ್ಷ ರೂ.ಗಳನ್ನು ಸಾಗಿಸುವಾಗ ಸಿಕ್ಕಿಬಿದ್ದಿದ್ದಾರೆ.
ವಿನೋ ಎಂಬಾತ ಕೇರಳ-ತಮಿಳುನಾಡು ಗಡಿಯಲ್ಲಿನ ವಾಳಯಾರ್ ಚೆಕ್ ಪೋಸ್ಟ್ ನಲ್ಲಿ ಹಣ ಸಾಗಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಬಸ್ ನೊಳಗಿದ್ದ ಆತನ ಬಟ್ಟೆ ಕಂಡು ಅಧಿಕಾರಿಗಳು ಅನುಮಾನಗೊಂಡು ಪರಿಶೀಲಿಸಿದಾಗ ಆತ ಹಣ ಇಟ್ಟುಕೊಂಡು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.
ತಪಾಸಣೆ ಸಂದರ್ಭದಲ್ಲಿ ಆತ ತನ್ನ ಶರ್ಟ್ ಒಳಗಿಂದ ಹಣದ ಕಟ್ಟುಗಳನ್ನು ಹೊರ ತೆಗೆದಿದ್ದಾನೆ. ಒಬ್ಬ ವ್ಯಕ್ತಿಗೆ ಕೇವಲ 50,000 ರೂ.ಗಳನ್ನು ಸಾಗಿಸಲು ಅನುಮತಿಸಲಾಗಿದೆ. ಅನುಮತಿ ನೀಡಿದ ಹಣಕ್ಕಿಂತ ಹೆಚ್ಚಿನ ಹಣ ಸಾಗಿಸಲು ಅಗತ್ಯ ದಾಖಲೆಗಳು ಬೇಕು. ಸದ್ಯ ಈ ವ್ಯಕ್ತಿಯಿಂದ 14 ಲಕ್ಷ ರೂ. ಹಣ ವಶಕ್ಕೆ ಪಡೆದು ಆದಾಯ ತೆರಿಗೆ ಇಲಾಖೆಗೆ ಸೂಚಿಸಲಾಗಿದೆ. ಕೇರಳದಲ್ಲಿ ಏ. 26ರಂದು ಚುನಾವಣೆ ನಡೆಯಲಿದೆ. ಈಗಾಗಲೇ ತಮಿಳುನಾಡಿನಲ್ಲಿ ಮತದಾನ ನಡೆದಿದ್ದು, 950 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.