ರಾಜ್ಯದಲ್ಲಿ 2023ರ ವಿಧಾನಸಭಾ ಚುನಾವಣೆ ರಂಗೇರಿದೆ. ದಿನ ಕಳೆದಂತೆ ಪಕ್ಷದ ನಾಯಕರು ರಾಜ್ಯದ ಮೂಲೆ ಮೂಲೆಗೂ ತಿರುಗಿ ಅಬ್ಬರದ ಪ್ರಚಾರ ಮಾಡ್ತಿದ್ದಾರೆ. ಇದೀಗ ನಾಳೆ ಬಿಜೆಪಿ ಪರ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಭರ್ಜರಿ ಮತಬೇಟೆ ನಡೆಸಲಿದ್ದಾರೆ. ಕೆಲ ದಿನಗಳ ಹಿಂದೆ ಬಿಜೆಪಿ ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿಯವರ ಪರ ಪ್ರಚಾರ ಮಾಡುವುದಾಗಿ ಕಿಚ್ಚ ಸುದೀಪ್ ಘೋಷಿಸಿದ್ದರು. ಸುದೀಪ್‌ರ ಈ ನಿರ್ಧಾರದ ಬಗ್ಗೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿದ್ದವು. ಆದರೆ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ನಟ ಕಿಚ್ಚ ಸುದೀಪ್ ತಮ್ಮ ಮಾವ ಬಸವರಾಜ ಬೊಮ್ಮಾಯಿಯವರ ಬೆಂಬಲಕ್ಕೆ ನಿಂತಿದ್ದಾರೆ.
ಕಳೆದ ವಾರವಷ್ಟೇ ಸಿಎಂ ಬೊಮ್ಮಾಯಿ ಪರ ಪ್ರಚಾರಕ್ಕಾಗಿ ಶಿಗ್ಗಾಂವಿಗೆ ತೆರಳಿದ್ದ ಸುದೀಪ್, ನಾಳೆ ಹಲವು ಊರುಗಳಲ್ಲಿ ಬಿಜೆಪಿ (BJP) ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿದ್ದಾರೆ. ಬೊಮ್ಮಾಯಿ ಮಾಮ ಸೂಚಿಸಿದ ಊರುಗಳಿಗೆ ಹೋಗಿ ಪ್ರಚಾರ ಮಾಡುತ್ತೇನೆ ಎಂದಿದ್ದ ಕಿಚ್ಚ ಕೊಟ್ಟ ಮಾತಿನಂತೆ ನಾಳೆಯಿಂದ ಭರ್ಜರಿ ಪ್ರಚಾರ (campaign) ಮಾಡಲಿದ್ದಾರೆ. ಕಿಚ್ಚನಿಗಾಗಿಯೇ ಹೆಲಿಕಾಪ್ಟರ್ ಸಿದ್ಧಗೊಂಡಿದೆ. ನಾಳೆ ಸುದೀಪ್ ಯಾವೆಲ್ಲ ಊರಿಗೆ ಹೋಗಬೇಕು ಮತ್ತು ಯಾರ ಪರವಾಗಿ ಪ್ರಚಾರ ಮಾಡಬೇಕು ಎನ್ನುವುದರ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಬೆಂಗಳೂರಿನಿಂದ ಹೊರಡುವ ಕಿಚ್ಚ, ನಾಳೆಯೇ ಐದು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಮಾಡಲಿದ್ದಾರೆ. ಬೆಂಗಳೂರಿನಿಂದ ಹೊರಡುವ ಇವರ ಪಯಣ ಮೊದಲು ಮೊಳಕಾಲ್ಮೂರು ಕ್ಷೇತ್ರದಿಂದ ಪ್ರಚಾರ ಆರಂಭಿಸಲಿದೆ. ಬೆಳಗ್ಗೆ 10.15ಕ್ಕೆ ಮೊಳಕಾಲ್ಮೂರು (Molakalmuru) ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ತಿಪ್ಪೇಸ್ವಾಮಿ ಪರವಾಗಿ ಕಿಚ್ಚ ಮತಯಾಚನೆ ಮಾಡಲಿದ್ದಾರೆ. ಮೊಳಕಾಲ್ಮೂರು ಕ್ಷೇತ್ರದಿಂದ ನೇರವಾಗಿ ಜಗಳೂರು (Jagaluru) ಕ್ಷೇತ್ರದತ್ತ ಹೆಲಿಕಾಪ್ಟರ್ ನಲ್ಲೇ ಪ್ರಯಾಣ ಮುಂದುವರೆಸುವ ಸುದೀಪ್ 12.30ಕ್ಕೆ ಜಗಳೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಅವರ ಪರವಾಗಿ ರೋಡ್ ಶೋ ನಡೆಸಲಿದ್ದಾರೆ.
ಒಂದು ಗಂಟೆಗೂ ಅಧಿಕ ಕಾಲ ಅವರು ರೋಡ್ ಶೋ ಮಾಡಲಿದ್ದಾರೆ. ಮಾಯಕೊಂಡದಿಂದ ಸುದೀಪ್ ದಾವಣಗೆರೆಗೆ (Davangere) ತೆರಳಲಿದ್ದು, ದಾವಣಗೆರೆಯ ಸೌತ್ ಮತ್ತು ನಾರ್ತ್ ಕ್ಷೇತ್ರಗಳ ಅಭ್ಯರ್ಥಿಗಳಾದ ಲೊಕ್ಕಿಕೆರೆ ನಾಗರಾಜ ಹಾಗೂ ಬಿ.ಜಿ. ಅಜಯ್ ಕುಮಾರ್ ಪರವಾಗಿ ಸಂಜೆ 4.20ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ. ಅಲ್ಲಿಂದ ನೇರವಾಗಿ ಸಂಡೂರಿಗೆ ತೆರಳಿ ಸಂಡೂರು (Sandur) ಬಿಜೆಪಿ ಅಭ್ಯರ್ಥಿ ಶಿಲ್ಪಾ ನಾಗೇಂದ್ರ ಪರವಾಗಿ ಸಂಜೆ 6.10ಕ್ಕೆ ರೋಡ್ ಶೋ ಮೂಲಕ ಮತಯಾಚನೆ ಮಾಡಲಿದ್ದಾರೆ.