ರಾಜ್ಯ ಸರ್ಕಾರದ ವಿರುದ್ಧ 40% ಕಮಿಷನ್ ಆರೋಪಗಳು ಕೇಳಿ ಬರುತ್ತಿರುವ ನಡುವೆ ಕೈಗಾರಿಕಾ ಇಲಾಖೆಯ ಅಧಿಕಾರಿಗಳು 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸಲು ಹೊರಟಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಕನ್ನಡದ ಸಾಮಾನ್ಯ ಚಲನ ಚಿತ್ರವೊಂದನ್ನು 3-4 ಕೋಟಿಯಲ್ಲಿ ನಿರ್ಮಿಸಲಾಗುತ್ತದೆ. ಇತ್ತೀಚೆಗೆ ತೆರೆಕಂಡ ʼಗುರು ಶಿಷ್ಯರುʼಚಿತ್ರವನ್ನು 5 ಕೋಟಿಯಲ್ಲಿ ನಿರ್ಮಿಸಲಾಗಿದೆ. ಹೀಗಿರುವಾಗ ಸರ್ಕಾರದ ಇಲಾಖೆಯ ಐದು ನಿಮಿಷದ ಕಿರು ಚಿತ್ರಕ್ಕೆ4.5 ಕೋಟಿ ಏಕೆ ಬೇಕು ಎನ್ನುವ ಪ್ರಶ್ನೆ ಎದುರಾಗಿದೆ.
ಅದಾಗ್ಯೂ, ಕೈಗಾರಿಕಾ ಇಲಾಖೆ ಸಚಿವ ಮುರುಗೇಶ ನಿರಾಣಿ ಈ ಪ್ರಯತ್ನಕ್ಕೆ ತಡೆಯೊಡ್ಡಿದ್ದು, ಯೋಜನೆ ರದ್ದುಪಡಿಸುವಂತೆ ಸೂಚಿಸಿದ್ದಾರೆ.
ನವೆಂಬರ್ 2ರಿಂದ 4ರವರೆಗೆ ನಡೆಯುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶಿಸಲು ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರವೊಂದನ್ನು ನಿರ್ಮಿಸುವ ಯೋಜನೆಯನ್ನು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಮಾಡಿತ್ತು. ಕುತೂಹಲವೆಂದರೆ, ಈ ಕಿರುಚಿತ್ರ ನಿರ್ಮಾಣದ ವಿಚಾರ ಸ್ವತಃ ಸಚಿವರ ಗಮನಕ್ಕೇ ಅಧಿಕಾರಿಗಳು ತಂದಿರಲಿಲ್ಲ.
ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯದ ಲಭ್ಯತೆ ಮತ್ತಿತರ ಅಂಶಗಳನ್ನು ವಿವರಿಸುವ ಐದು ನಿಮಿಷಗಳ ಕಿರುಚಿತ್ರ ನಿರ್ಮಿಸಿ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪ್ರದರ್ಶಿಸಲು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ನಿರ್ಧರಿಸಿತ್ತು.ಖಾಸಗಿ ಸಂಸ್ಥೆಯೊಂದರ ಜತೆ ₹ 4.5 ಕೋಟಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಾಣಕ್ಕೆ ಇಲಾಖೆ ಒಪ್ಪಂದವನ್ನೂ ಸಹ ಮಾಡಿಕೊಂಡಿತ್ತು.

ದುಬಾರಿ ವೆಚ್ಚದಲ್ಲಿ ಕಿರುಚಿತ್ರ ನಿರ್ಮಿಸುವ ಪ್ರಸ್ತಾವದ ಕುರಿತು ಕೈಗಾರಿಕಾ ಸಚಿವರಿಗೆ ಮಾಹಿತಿಯನ್ನೇ ನೀಡದ ಅಧಿಕಾರಿಗಳು ತಮ್ಮ ಹಂತದಲ್ಲೇ ನಿರ್ಧಾರ ಕೈಗೊಂಡು, ಚಿತ್ರ ನಿರ್ಮಾಣ ಸಂಸ್ಥೆಯೊಂದನ್ನು ಆಯ್ಕೆಮಾಡಿ, ಒಪ್ಪಂದ ಮಾಡಿಕೊಂಡಿದ್ದರು. ಈ ಎಲ್ಲಾ ಪ್ರಯತ್ನಗಳು ಗೌಪ್ಯವಾಗಿಯೇ ನಡೆದಿತ್ತು. ಇದು ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ ಅವರಿಗೆ ಪತ್ರ ಬರೆದಿರುವ ಸಚಿವ ನಿರಾಣಿ, ಕಿರುಚಿತ್ರ ನಿರ್ಮಾಣ ಯೋಜನೆ ರದ್ದು ಮಾಡಲು ಸೂಚಿಸಿದ್ದಾರೆ. ಆ ಮೂಲಕ ತನ್ನ ಇಲಾಖೆ ಮೂಲಕ ತಮಗೆ ಬರಬಹುದಾಗಿದ್ದ ಸಂಭಾವ್ಯ ಆರೋಪದಿಂದ ತಪ್ಪಿಸಿಕೊಂಡಿದ್ದರು.
‘₹ 4.5 ಕೋಟಿ ವೆಚ್ಚದಲ್ಲಿ ಐದು ನಿಮಿಷಗಳ ಕಿರುಚಿತ್ರ ನಿರ್ಮಾಣಕ್ಕೆ ಚಿತ್ರ ನಿರ್ಮಾಣ ಸಂಸ್ಥೆಯೊಂದರ ಜತೆ ಕೈಗಾರಿಕಾ ಇಲಾಖೆಯು ಒಪ್ಪಂದ ಮಾಡಿಕೊಂಡಿರುವುದಾಗಿ ತಿಳಿದುಬಂದಿರುತ್ತದೆ. ಕಿರುಚಿತ್ರ ನಿರ್ಮಾಣಕ್ಕೆ ನಿಗದಿಪಡಿಸಿರುವ ಈ ಮೊತ್ತವು ತುಂಬಾ ಹೆಚ್ಚಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಇದು ಅನಗತ್ಯ ಮತ್ತು ಸೂಕ್ತವಾಗಿರುವುದಿಲ್ಲ. ಇಲಾಖೆಯು ಇಂತಹ ಒಪ್ಪಂದ ಮಾಡಿಕೊಂಡಿದ್ದಲ್ಲಿ ಕಾರ್ಯಾದೇಶವನ್ನು ವಜಾ ಮಾಡಲು ಸೂಚಿಸಿದೆ’ ಎಂದು ನಿರಾಣಿ ಪತ್ರದಲ್ಲಿ ಬರೆದಿದ್ದಾರೆ.
ಅಲ್ಲದೆ, ಇನ್ನು ಮುಂದೆ ಇಂತಹ ಪ್ರಕರಣಗಳಲ್ಲಿ ಇಲಾಖಾ ಸಚಿವರು ಹಾಗೂ ಅನುಭವಿಗಳ ಜತೆಗೆ ಸಮಾಲೋಚನೆ, ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಬೇಕು ಎಂದು ಸೂಚಿಸಿದ್ದಾರೆ.











