ಬಿಡುಗಡೆ ಆದಾಗಿನಿಂದ ಒಂದಲ್ಲ ಒಂದು ದಾಖಲೆ ಬರೆಯುತ್ತಿದ್ದ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡುತ್ತಿರುವ ಯಶ್ ಅಭಿನಯಿಸಿ ಪ್ರಶಾಂತ್ ನೀಲ್ ನಿರ್ದೇಶಿಸಿದ ಕೆಜಿಎಫ್-2 ಚಿತ್ರ ಇದೀಗ ಬಾಲಿವುಡ್ ನಲ್ಲಿ ಅತೀ ಹೆಚ್ಚು ಗಳಿಸಿದ 2ನೇ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕೆಜಿಎಫ್-2 ಚಿತ್ರ 1000 ಕೋಟಿ ರೂ. ದಾಟಿ ಮುನ್ನುಗ್ಗುತ್ತಿದ್ದು, ಚಿತ್ರ ಬಿಡುಗಡೆ ಆಗಿ 15 ದಿನ ಕಳೆದರೂ ಗಳಿಕೆಯ ನಾಗಾಲೋಟ ಮುಂದುವರಿದಿದೆ. ಅದರಲ್ಲೂ ಬಾಲಿವುಡ್ ಸ್ಟಾರ್ ನಟರಾದ ಟೈಗರ್ ಶ್ರಾಫ್ ಅಭಿನಯದ ಹಿರೋಪಂತಿ-2 ಮತ್ತು ಅಜಯ್ ದೇವಗನ್ ಅಭಿನಯಿಸಿದ ರನ್ ವೇ ೩೪ ಚಿತ್ರ ಬಿಡುಗಡೆ ಆದರೂ ರಾಕಿಭಾಯ್ ಕಲೆಕ್ಷನ್ ಗೆ ಯಾವುದೇ ಧಕ್ಕೆ ಆಗಿಲ್ಲ.
ಇದೀಗ ಕೆಜಿಎಫ್-2 ಚಿತ್ರ ಅಮಿರ್ ಖಾನ್ ಅಭಿನಯದ ದಬಾಂಗ್ ಚಿತ್ರದ ಸಾರ್ವಕಾಲಿಕ ದಾಖಲೆ ಗಳಿಕೆ ದಾಖಲೆಯನ್ನು ಮುರಿದು 2ನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ಇದೀಗ ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಂತರದ ಸ್ಥಾನದಲ್ಲಿದ್ದು , ಈ ದಾಖಲೆಯನ್ನು ಮುರಿದು ನಂ.೧ ಸ್ಥಾನಕ್ಕೆ ಲಗ್ಗೆ ಹಾಕುವುದೇ ಎಂಬ ಕುತೂಹಲ ಮೂಡಿಸಿದೆ.

ಬಾಹುಬಲಿ-2 ಚಿತ್ರ 510.99 ಕೋಟಿ ರೂ. ಗಳಿಸಿ ಮೊದಲ ಸ್ಥಾನದಲ್ಲಿದರೆ, ಕೆಜಿಎಫ್-2 ಚಿತ್ರ 389.10 ಕೋಟಿ ಬಾಚಿ ಎರಡನೇ ಸ್ಥಾನಕ್ಕೆ ಲಗ್ಗೆ ಹಾಕಿದೆ. ದಬಾಂಗ್ ಚಿತ್ರ 387.38 ಕೋಟಿ ರೂ. ಸಂಗ್ರಹಿಸಿ ಮೂರನೇ ಸ್ಥಾನಕ್ಕೆ ಕುಸಿದಿದೆ.
ಕೆಜಿಎಫ್-2 ಚಿತ್ರ ಬಿಡುಗಡೆ ಆದ ಮೂರೇ ವಾರದಲ್ಲಿ ಹಿಂದಿನ ಎಲ್ಲಾ ದಾಖಲೆಗಳನ್ನು ಧೂಳೀಪಟ ಮಾಡಿದ್ದು, ಕನಿಷ್ಠ 50 ದಿನ ಓಡಿದರೂ ನಂ.1 ಸ್ಥಾನ ಅಲಂಕರಿಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.