2019ರಲ್ಲಿ ವಿಜಯ್ ರೂಪಾನಿ ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆರಂಭಿಸಲಾದ ಡ್ಯಾಶ್‌ಬೋರ್ಡ್ ವ್ಯವಸ್ಥೆಯನ್ನು ಕೇರಳ ಅಧ್ಯಯನ ಮಾಡಲು ಕೇರಳ ಸರ್ಕಾರ ನಿರ್ಧರಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಹೌದು, ಇ-ಆಡಳಿತಕ್ಕಾಗಿ ಡ್ಯಾಶ್‌ಬೋರ್ಡ್ ವ್ಯವಸ್ಥೆಯನ್ನು ಅಧ್ಯಯನ ಮಾಡಲು ಮುಖ್ಯ ಕಾರ್ಯದರ್ಶಿ ವಿಪಿ ಜಾಯ್ ನೇತೃತ್ವದ ಇಬ್ಬರು ಸದಸ್ಯರ ತಂಡವನ್ನು ಮೂರು ದಿನಗಳ ಕಾಲ ಗುಜರಾತ್‌ಗೆ ಕಳುಹಿಸಲು ಕೇರಳ ಸರ್ಕಾರ ನಿರ್ಧರಿಸಿದೆ.
ಸರ್ಕಾರದ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಯೋಜನೆಯನ್ನು ಪ್ರಾರಂಭಿಸಲಾಗಿದೆ. ಶ್ರೀಸಾಮಾನ್ಯನ ಕುಂದುಕೊರತೆಗಳನ್ನು ಪರಿಹರಿಸಲು ಈ ವ್ಯವಸ್ಥೆಯನ್ನು ಸ್ಥಾಪಿಸಿ ಸರ್ಕಾರಿ ಅಧಿಕಾರಿಗಳನ್ನು ಹೆಚ್ಚು ಜವಾಬ್ದಾರಿಯುತರನ್ನಾಗಿ ಮಾಡುವುದು ಗುರಿ ಹೊಂದಿದೆ ಎನ್ನಲಾಗಿದೆ.
ಈ ಮೂಲಕ ಸರ್ಕಾರದ ಯೋಜನೆ ಅನುಷ್ಠಾನ ಹಾಗೂ ಇಲಾಖೆಗಳ ಕಾರ್ಯವೈಖರಿಯನ್ನು ಮುಖ್ಯಮಂತ್ರಿಗಳ ಬೆರಳ ತುದಿಯಲ್ಲಿ ಮೌಲ್ಯಮಾಪನ ಮಾಡಬಹುದು. ಡೇಟಾಬೇಸ್ ರಚಿಸಿದ ಸಿಎಂ ಡ್ಯಾಶ್‌ಬೋರ್ಡ್ ಮೂಲಕ ಇಲಾಖೆಗಳ ಕಾರ್ಯಕ್ಷಮತೆಯನ್ನು ಪ್ರತಿದಿನವೂ ಪರಿಶೀಲಿಸಬಹುದು. ಪ್ರತಿಯೊಂದು ವರ್ಗಕ್ಕೂ ಸ್ಟಾರ್ ರೇಟಿಂಗ್ ನೀಡಬಹುದು. ಇದು ನಾಗರಿಕ ಸೇವೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ತರುವ ಗುರಿಯನ್ನು ಹೊಂದಿದೆ ಎನ್ನಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಡುವೆ ನಡೆದ ಸಭೆಯಲ್ಲೂ ‘ಗುಜರಾತ್ ಮಾದರಿ’ ಬಗ್ಗೆ ಚರ್ಚೆ ನಡೆದಿದೆ. ಕೇರಳಕ್ಕೆ ಹಿಂತಿರುಗಿದ ನಂತರ ಕೇರಳ ಮುಖ್ಯಮಂತ್ರಿ ಅವರು ಗುಜರಾತ್ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಲು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ. ಇದರ ಆಧಾರದ ಮೇಲೆ ಮುಖ್ಯ ಕಾರ್ಯದರ್ಶಿ ವಿ.ಪಿ.ಜಾಯ್ ಮತ್ತು ಮುಖ್ಯ ಕಾರ್ಯದರ್ಶಿ ಕಚೇರಿಯ ಉಸ್ತುವಾರಿ ಸಿಬ್ಬಂದಿ ಉಮೇಶ್ ಐಎಎಸ್ ಅವರು ನಾಳೆ ಗುಜರಾತ್‌ಗೆ ತೆರಳುತ್ತಿದ್ದಾರೆ. ಗುಜರಾತ್ ಸರ್ಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಒಂದು ವಾರದೊಳಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಎಡಪಕ್ಷಗಳಿಂದ ನಿರಂತರವಾಗಿ ಟೀಕೆಗೊಳಗಾಗಿರುವ ಬಿಜೆಪಿ ಆಡಳಿತವಿರುವ ಗುಜರಾತ್‌ಗೆ ಕೇರಳ ಮುಖ್ಯ ಕಾರ್ಯದರ್ಶಿಯ ಭೇಟಿಯಾಗಿರುವುದು ಗಮನಾರ್ಹ.
ಗುಜರಾತ್ ಮಾದರಿಯನ್ನು ಅಧ್ಯಯನ ಮಾಡುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಟೀಕಿಸಿದೆ. ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಮಾತನಾಡಿ, ಗುಜರಾತ್ ಸರಕಾರದೊಂದಿಗೆ ಕೇರಳ ಸರಕಾರ ಬಾಂಧವ್ಯ ಬೆಸೆಯಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಈ ನಡೆ ಗುಜರಾತ್ ಮಾದರಿ ‘ಸರಿಯಾದ’ ಮಾದರಿ ಎಂಬುದನ್ನು ಸಾಬೀತುಪಡಿಸುತ್ತದೆ ಎಂದು ಬಿಜೆಪಿ ಕೇರಳ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ.












