ಕರೋನ ಹೆಚ್ಚಳದಿಂದ ಘೋಷಿಸಿರುವ ಲಾಕ್ಡೌನ್ ಅನ್ನು ಬಕ್ರಿದ್ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಸಡಿಲಿಕೆ ಮಾಡಿರುವ ಆದೇಶವನ್ನು ರದ್ದುಪಡಿಸಬೇಕೆಂದು ಕೇರಳ ಸರ್ಕಾರಕ್ಕೆ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಎಚ್ಚರಿಕೆ ನೀಡಿದೆ.
ಬಕೀದ್ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಭಾನುವಾರದಿಂದ ಮೂರು ದಿನಗಳ ಕಾಲ ಲಾಕ್ಡೌನ್ ಸಡಿಲಿಕೆ ಮಾಡಿ, ಬಕ್ರಿದ್ ಹಬ್ಬವನ್ನು ಆಚರಿಸಲು ಅನುವು ಮಾಡಿಕೊಟ್ಟಿದ್ದು, ಕೂಡಲೇ ಆದೇಶವನ್ನು ಹಿಂಪಡೆಯಬೇಕೆಂದು ಐಎಂಎ ಒತ್ತಾಯಿಸಿದೆ.
ಉತ್ತರ ಭಾರತದಲ್ಲಿ ಹಲವು ರಾಜ್ಯಗಳು ಸಾಂಕ್ರಾಮಿಕ ದೃಷ್ಟಿಯಿಂದ ಜನಪ್ರಿಯ ಉತ್ಸವ ಹಾಗೂ ತೀರ್ಥಯಾತ್ರೆಗಳನ್ನು ರದ್ದುಗೊಳಿಸಿವೆ. ಇಂತಹ ಸಂದರ್ಭದಲ್ಲಿ ಕೇರಳ ಸರ್ಕಾರ ಗುಂಪು ಸೇರುವುದಕ್ಕೆ ಅವಕಾಶ ನೀಡಿರುವ ನಿರ್ಧಾರವನ್ನು ತೆಗೆದುಕೊಂಡಿರುವುದು ದುರದೃಷ್ಟಕರ ಎಂದು ಐಎಂಎ ಟೀಕಿಸಿದೆ.
ಇದಲ್ಲದೆ ಕರೋನ ಹೆಚ್ಚುತ್ತಿರುವ ಈ ಸಮಯದಲ್ಲಿ ಜನರ ಹಿತದೃಷ್ಟಿಯಿಂದ ಲಾಕ್ಡೌನ್ ಸಡಿಲಿಕೆ ಆದೇಶವನ್ನು ರದ್ದು ಮಾಡದಿದ್ದರೆ, ಕೇರಳ ಸರ್ಕಾರದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೊರೆ ಹೋಗುವುದಾಗಿ ಭಾರತೀಯ ವೈದ್ಯಕೀಯ ಸಂಘ ತಿಳಿಸಿದೆ.