ಕೇರಳ ರಾಜ್ಯದ ವಿಶ್ವವಿದ್ಯಾಲಯಗಳ ಉಪ-ಕುಲಪತಿ ಹುದ್ದೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿರುವ ಬಗ್ಗೆ ಅಲ್ಲಿನ ರಾಜ್ಯಪಾಲ, ವಿಶ್ವವಿದ್ಯಾಲಯಗಳ ಕುಲಪತಿಯೂ ಆಗಿರುವ ಆರಿಫ್ ಮೊಹಮ್ಮದ್ ಖಾನ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ರಾಜ್ಯದ ವಿಶ್ವವಿದ್ಯಾಲಯಗಳ ಉಪ-ಕುಲಪತಿ ಹುದ್ದೆಯಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯುತ್ತಿದೆ. ಇದು ಹೀಗೆ ಮುಂದುವರಿದರೆ ನಾನು ಕುಲಪತಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ. ನೀವು ವಿಶ್ವವಿದ್ಯಾಲಯಗಳ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿಕೊಂಡು ಆ ಸ್ಥಾನವನ್ನು ವಹಿಸಿಕೊಳ್ಳಿ ಎಂದು ತಿಳಿಸಿದ್ದಾರೆ.
ರಾಜ್ಯದ ಉನ್ನತ ಯೂನಿವರ್ಸಿಟಿಗಳ ಉಪಕುಲಪತಿಗಳ ನೇಮಕದ ವಿಚಾರದಲ್ಲಿ ಕೇರಳ ಸರ್ಕಾರ ತೀವ್ರ ಹಸ್ತಕ್ಷೇಪ ಮಾಡುತ್ತಿದೆ. ಈ ಮೂಲಕ ಕುಲಪತಿಯಾದ ನನ್ನ ಅಧಿಕಾರವನ್ನು ದುರ್ಬಲಗೊಳಿಸುತ್ತಿದೆ. “ವಿಶ್ವವಿದ್ಯಾನಿಲಯದ ಮುಖ್ಯಸ್ಥನಾಗಿ ಮುಂದುವರಿಯಲು ಮತ್ತು ನನ್ನ ಅಡಿಯಲ್ಲಿ ಸ್ವಾಯತ್ತತೆಯನ್ನು ಸವೆಸಲು ನನಗೆ ಆಸಕ್ತಿ ಇಲ್ಲ. ನಾನು ಅನೇಕ ಹಂತಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ವಿರೋಧಿಸಿದ್ದೇನೆ ಎಂದು ರಾಜ್ಯಪಾಲರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಮುಂದುವರೆದು, ಕಣ್ಣೂರು ವಿಶ್ವವಿದ್ಯಾಲಯದ ಉಪ ಕುಲಪತಿ ಗೋಪಿನಾಥ್ ರವೀಂದ್ರನ್ ಕಳೆದ ತಿಂಗಳು ನಿವೃತ್ತರಾಗಬೇಕಿತ್ತು. ಆದರೆ ಮತ್ತೆ ನಾಲ್ಕು ವರ್ಷಗಳ ಕಾಲ ಅವಧಿ ವಿಸ್ತರಣೆ ಮಾಡಲಾಗಿದೆ. ಹಾಗೇ ಮತ್ತೊಂದು ಪ್ರಮುಖ ವಿಶ್ವವಿದ್ಯಾಲಯಕ್ಕೆ ಉಪ ಕುಲಪತಿ ನೇಮಕ ಮಾಡಲು ಅಭ್ಯರ್ಥಿಗಳ ಸಮಿತಿ ರಚಿಸಲು ಹೆಸರು ಸೂಚಿಸಿ ಎಂದು ರಾಜ್ಯಪಾಲರು ಕೇರಳ ಸರ್ಕಾರವನ್ನು ಕೇಳಿದರೆ, ತಿರುಗಿ ಒಬ್ಬರ ಹೆಸರನ್ನು ಮಾತ್ರ ಸರ್ಕಾರ ಸೂಚಿಸಿತ್ತು. ಹೀಗೆ ಹಲವು ಕಾರಣಗಳಿಂದ ಆರಿಫ್ ಮೊಹಮ್ಮದ್ ಖಾನ್ ಕೇರಳ ಸರ್ಕಾದ ಕುರಿತು ಬೇಸರಗೊಂಡಿದ್ದಾರೆ.
ಅದರಲ್ಲೂ ಕಣ್ಣೂರಿನ ವಿಶ್ವವಿದ್ಯಾಲಯದ ಉಪಕುಲಪತಿಗೆ ಅವಧಿ ವಿಸ್ತರಣೆ ಮಾಡಿದ್ದು ಸ್ವಲ್ಪ ಮಟ್ಟಿಗೆ ವಿವಾದವನ್ನೂ ಸೃಷ್ಟಿಸಿತು. ಅಷ್ಟೇ ಅಲ್ಲ, ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಪತ್ನಿಯನ್ನು ಕಣ್ಣೂರು ವಿಶ್ವ ವಿದ್ಯಾಲಯದ ಬೋಧಕ ಹುದ್ದೆಗೆ ನೇಮಕ ಮಾಡುವಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ.