ಬೆಂಗಳೂರು: ಕೇರಳ(Kerala) ರಾಜ್ಯದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯಗೊಳಿಸುವ ಕುರಿತಂತೆ ಉಂಟಾಗಿದ್ದ ಆತಂಕ ಹಾಗೂ ಚರ್ಚೆಗಳ ನಡುವೆಯೇ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್(Pinarayi Vijayan) ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ಹೊರರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಮಲಯಾಳಂ ಪರೀಕ್ಷೆ ಕಡ್ಡಾಯವಲ್ಲ ಎಂದು ಅವರು ತಿಳಿಸಿದ್ದು, ಈ ಕುರಿತು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಕೇರಳ ಸರ್ಕಾರ ಇತ್ತೀಚೆಗೆ ‘ಮಲಯಾಳ ಭಾಷಾ ಮಸೂದೆ–2025’ಗೆ ಅನುಮೋದನೆ ನೀಡಿದ ಬಳಿಕ, ಕನ್ನಡ ಭಾಷಿಕರಲ್ಲಿ ಹಾಗೂ ಕರ್ನಾಟಕ ಸರ್ಕಾರದ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಕೇರಳದಲ್ಲಿರುವ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಹಕ್ಕುಗಳನ್ನು ಕಾಪಾಡುವಂತೆ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದರು.

ಪಿಣರಾಯಿ ವಿಜಯನ್ ಸ್ಪಷ್ಟನೆ ಏನು?
ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ತಮ್ಮ ಅಧಿಕೃತ ಎಕ್ಸ್ (X) ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದು, ಹೊರರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಗಳಿಗೆ ಮಲಯಾಳಂ ಪರೀಕ್ಷೆ ಕಡ್ಡಾಯವಿಲ್ಲ. 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಮಲಯಾಳಂ ಪರೀಕ್ಷೆ ಅನಿವಾರ್ಯಗೊಳಿಸಿಲ್ಲ. ಪಿಯುಸಿ (ಪ್ಲಸ್–2) ಹಂತದಲ್ಲಿಯೂ ಮಲಯಾಳಂ ಪರೀಕ್ಷೆ ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ. ಮಲಯಾಳ ಭಾಷಾ ಮಸೂದೆ–2025ರಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳಿಗೆ ಸಂಪೂರ್ಣ ರಕ್ಷಣೆ ನೀಡಲಾಗಿದೆ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಕನ್ನಡ, ತಮಿಳು ಸೇರಿದಂತೆ ಇತರೆ ಭಾಷೆ ಮಾತನಾಡುವ ಸಮುದಾಯಗಳ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದಲೇ ಈ ಮಸೂದೆಯನ್ನು ತರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರಿ ಸಚಿವಾಲಯಗಳು ಮತ್ತು ಇಲಾಖೆಗಳೊಂದಿಗೆ. ತಮ್ಮ ಮಾತೃಭಾಷೆಯಲ್ಲೇ ಪತ್ರ ವ್ಯವಹಾರ ನಡೆಸಬಹುದಾಗಿದೆ. ಸರ್ಕಾರಿ ಕಚೇರಿಗಳಿಂದಲೂ ಅದೇ ಭಾಷೆಯಲ್ಲಿ ಉತ್ತರ ಪಡೆಯುವ ಅವಕಾಶವಿದೆ ಎಂದು ತಿಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ಪಠ್ಯಕ್ರಮದ (NEP) ಅನ್ವಯ ಲಭ್ಯವಿರುವ ಭಾಷೆಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಈ ಭಾಷಾ ನೀತಿ ಭಾರತೀಯ ಸಂವಿಧಾನದ ವಿಧಿ 346 ಮತ್ತು 347 ಹಾಗೂ 1963ರ ಅಧಿಕೃತ ಭಾಷಾ ಕಾಯ್ದೆಗೆ ಸಂಪೂರ್ಣವಾಗಿ ಅನುಗುಣವಾಗಿದೆ ಎಂದು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.

ಮಲಯಾಳ ಭಾಷಾ ಮಸೂದೆ–2025ರಲ್ಲಿ ಏನಿದೆ?
ಈ ಮಸೂದೆ ಕೇರಳ ರಾಜ್ಯದಾದ್ಯಂತ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಉತ್ತೇಜಿಸುವ ಉದ್ದೇಶ ಹೊಂದಿದೆ. 2016ರಲ್ಲಿ ಇದೇ ರೀತಿಯ ಮಸೂದೆಯನ್ನು ಮಂಡಿಸಲಾಗಿದ್ದು, ಅದು ಭಾಷಾ ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂಬ ಕಾರಣಕ್ಕೆ ಅಂದಿನ ರಾಜ್ಯಪಾಲರು ತಿರಸ್ಕರಿಸಿದ್ದರು. ನಂತರ ಈ ಮಸೂದೆಯಲ್ಲಿ ಕೆಲವು ತಿದ್ದುಪಡಿಗಳನ್ನು ಮಾಡಲಾಗಿದ್ದು, ಈಗ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸುವ ವಿಧಾನದೊಂದಿಗೆ ಮರು ಮಂಡನೆಗೆ ಮುಂದಾಗಿದೆ.
1ರಿಂದ 10ನೇ ತರಗತಿಯವರೆಗೆ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಭಾಷಾ ಕಲಿಕೆಗೆ ಸಂಬಂಧಿಸಿದಂತೆ ಈ ಮಸೂದೆ ಮಾರ್ಗಸೂಚಿಗಳನ್ನು ನೀಡುತ್ತದೆ. ಆದರೆ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳ ಮೇಲೆ ಮಲಯಾಳಂ ಪರೀಕ್ಷೆ ಬಲವಂತವಾಗುವುದಿಲ್ಲ ಎಂಬುದನ್ನು ಕೇರಳ ಸರ್ಕಾರ ಸ್ಪಷ್ಟಪಡಿಸಿದೆ.











