ಆಮ್ ಆದ್ಮಿ ಪಕ್ಷ ಬಿಟ್ಟು ಬಿಜೆಪಿ ಸೇರಿದರೆ ಎಲ್ಲಾ ಪ್ರಕರಣಗಳನ್ನು ಕೈಬಿಡುತ್ತೇವೆ ಎಂದು ನನಗೆ ಸಂದೇಶ ಬಂದಿದೆ ಎಂಬ ಎಎಪಿ ಸಚಿವ ಮನೀಶ್ ಸಿಸೋಡಿಯಾ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ “ದೊಡ್ಡ ಸುಳ್ಳುಗಾರ” ಮತ್ತವರ ಮಂತ್ರಿಗಳು “ದೊಡ್ಡ ಸುಳ್ಳುಗಾರರು” ಎಂದು ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದಿಂದ ಬಿಜೆಪಿಗೆ ಪಕ್ಷಾಂತರ ಮಾಡಿದರೆ ನಿಮ್ಮ ವಿರುದ್ಧ ಇರುವ ಎಲ್ಲಾ ಸಿಬಿಐ ಹಾಗೂ ಇಡಿ ಪ್ರಕರಣಗಳನ್ನೂ ಮುಚ್ಚಿ ಹಾಕುವುದಾಗಿ ಬಿಜೆಪಿ ನನಗೆ ಆಫರ್ ನೀಡಿದೆ ಎಂದು ದಿಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದರು.
ಈ ಕುರಿತು ಕಾಂಗ್ರಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದ ನೇಪಥ್ಯದಲ್ಲಿ ಪ್ರತಿಕ್ರಿಸಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿರುವ ಠಾಕೂರ್, “ಕೇಜ್ರಿವಾಲ್ ಒಬ್ಬ ದೊಡ್ಡ ಸುಳ್ಳುಗಾರ ಮತ್ತವರ ಮಂತ್ರಿಗಳು ದೊಡ್ಡ ಸುಳ್ಳುಗಾರರು ಎಂದು ತೋರುತ್ತದೆ”. ದೆಹಲಿಯ ಎಎಪಿ ಸರ್ಕಾರದ ಗಮನವು “ಮೊಹಲ್ಲಾ ಚಿಕಿತ್ಸಾಲಯಗಳಿಂದ ಮೊಹಲ್ಲಾ ಥೇಕಾಸ್ (ಮದ್ಯ ಮಾರಾಟ)” ಕ್ಕೆ ಸ್ಥಳಾಂತರಗೊಂಡಿರುವುದರಿಂದ ಕೇಜ್ರಿವಾಲ್ ಮಾದರಿಯ ಆಡಳಿತ ವಿಫಲವಾಗಿದೆ ಎಂದು ಹೇಳಿದರು.

ಕೇಜ್ರಿವಾಲ್ ಅಬಕಾರಿ ಹಗರಣದ ಕಿಂಗ್ಪಿನ್ ಆದರೆ ಸಿಸೋಡಿಯಾ ಪ್ರಮುಖ ಆರೋಪಿ. ಈ ಹಗರಣದ ಬಗ್ಗೆ ಅವರಿಬ್ಬರೂ ಇಲ್ಲಿಯವರೆಗೆ ಯಾವುದೇ ತೃಪ್ತಿಕರ ಉತ್ತರವನ್ನು ನೀಡಿಲ್ಲ ಎಂದು ಹೇಳಿದರು.
ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆ(ಸಿಬಿಐ) ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿದಂತೆ 15 ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದೆ.