2018ರ ಮೇ ನಲ್ಲಿ ಕರ್ನಾಟಕದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಸಂಖ್ಯಾ ಬಲದ ಆಧಾರದ ಮೇಲೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಅಂದು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ದಿನ ದೇಶದ ಪ್ರಮುಖ ಬಿಜೆಪಿ ವಿರೋಧಿ ಪ್ರಾದೇಶಿಕ ಪಕ್ಷಗಳ ನಾಯಕರು ಅಂದು ಪ್ರಮಾಣವಚನ ನೆಪದಲ್ಲಿ ಮಹಾ ಘಟಬಂಧನದ ಹೆಸರಿನಲ್ಲಿ ಶಕ್ತಿ ಪ್ರದರ್ಶನ ಕೂಡ ಮಾಡಿದ್ದರು.
ಈ ಎಲ್ಲ ನಾಯಕರಿಗೆ ಪರ್ಯಾಯವಾಗಿ ಯೋಚಿಸಿದ್ದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ (ಕೆ.ಸಿ.ಆರ್) ಮಾತ್ರ. 2018ರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ಸೇತರ ʻಫೆಡರಲ್ ಫ್ರಂಟ್ʼ (ತೃತೀಯ ರಂಗ) ಪರಿಕಲ್ಪನೆ ಹುಟ್ಟು ಹಾಕಿದ್ದರು. ಆದರೆ, ಬೆಂಬಲದ ಕೊರತೆ ಮತ್ತು ಅಸಹಕಾರದಿಂದಾಗಿ ಅವರ ಪರಿಕಲ್ಪನೆ ಸಾಕಾರಗೊಳ್ಳಲಿಲ್ಲ.
ಇದೀಗ ಕೆ.ಸಿ.ಆರ್ ಮತ್ತೆ ಮುನ್ನೆಲೆಗೆ ಬರಲು ಕಾರಣವೇನೆಂದರೆ ಇತ್ತೀಚಿಗೆ ಖಾಸಗಿ ಕಾರ್ಯಕ್ರಮದ ನಿಮಿತ್ತ ಕುಟುಂಬ ಸಮೇತ ತಮಿಳುನಾಡಿನ ದೇವಸ್ಥಾನ ಒಂದಕ್ಕೆ ಭೇಟಿ ನೀಡಿದ್ದರು. ನಂತರ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿ ಮಾಡಿ ಕೆಲವು ಹೊತ್ತು ಚರ್ಚೆ ನಡೆಸಿದ್ದರು. ಆದರೆ, ರಾಜಕೀಯ ಪಡಸಾಲೆಯಲ್ಲಿ ಈ ವಿಚಾರ ಸದ್ಯಕ್ಕೆ ಎಲ್ಲರ ಗಮನ ಸೆಳೆದಿದ್ದು, ತೃತೀಯ ರಂಗದ ಪರಿಕಲ್ಪನೆ ಈ ಮೂಲಕ ಮತ್ತೆ ಚಾಲ್ತಿಗೆ ಬಂದಿದೆ.
ಆದರೆ, ಈ ವಿಚಾರವನ್ನ ರಾಜಕೀಯ ಪಂಡಿತರು ಮತ್ತು ವಿಶ್ಲೇಷಕರು ಬೇರೆಯದೆ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಕೆ.ಸಿ.ಆರ್ ಪರಿಕಲ್ಪನೆ ಯಾವತ್ತು ಕೈಗೂಡಿಲ್ಲ, ಅವರ ಪರಿಕಲ್ಪನೆಗಳು ಯಾವತ್ತು ಮಾತಗಿಯೇ ಉಳಿದಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಕೆ.ಸಿ.ಆರ್ ಮತ್ತು ಸ್ಟಾಲಿನ್ ಭೇಟಿ ಇದೇ ಮೊದಲಲ್ಲ. 2018ರಿಂದಲೂ ಕೆ.ಸಿ.ಆರ್ ಎಲ್ಲಾ ಪ್ರಾದೇಶಿಕ ವಿರೋಧ ಪಕ್ಷಗಳ ನಾಯಕರನ್ನು ಭೇಟಿ ಮಾಡುತ್ತಲೇ ಇದ್ದಾರೆ. ಮಮತಾ ಬ್ಯಾನರ್ಜಿ, ಮುಲಾಯಂ ಸಿಂಗ್, ಮಾಯಾವತಿ, ಲಾಲು ಪ್ರಸಾದ್ ಯಾದವ್ ಸೇರಿದಂತೆ ಹಲವಾರು ನಾಯಕರನ್ನು ಭೇಟಿ ಮಾಡಿದ್ದರು. ಕೆ.ಸಿ.ಆರ್ ಆಸೆಗೆ ಎಲ್ಲಾ ನಾಯಕರು ತಣ್ಣೀರು ಎರಚಿದ್ದರು.
ಕೆ.ಸಿ.ಆರ್ ಮುಂದಿರುವ ಆಯ್ಕೆಗಳೇನು?
ಕಳೆದ ಕೆಲವು ವರ್ಷಗಳಿಂದ ಬದಲಾಗುತ್ತಿರುವ ರಾಜಕೀಯ ಸನ್ನಿವೇಷದಲ್ಲಿ ಕೆ.ಸಿ.ಆರ್ ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಟ್ಟುಗೂಡಿಸುವ ಕೆಲಸವನ್ನು ತೆರೆಮರೆಯಲ್ಲಿ ಮಾಡುತ್ತಿದ್ದಾರೆ. ಆದರೆ ಬಹುತೇಕರು ಇವರು ಪ್ರಧಾನಿಯಾಗುವ ಮಹಾತ್ವಾಕಾಂಕ್ಷೆಯನ್ನು ಹೊಂದಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಈ ಕಾರಣದಿಂದಲೇ ಕೆಲವರು ಅಂತರ ಕೂಡ ಕಾಯ್ದುಕೊಂಡಿದ್ದಾರೆ.
ಇತ್ತ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರಬಲ ವಿರೋಧ ಪಕ್ಷದ ನಾಯಕಿಯಾಗಿ ಹೊರಹೊಮ್ಮಲು ಪ್ರಯತ್ನ ನಡೆಸಿದ್ದಾರೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅವರ ಜೊತೆಗೆ ಧಣಿಗೂಡಿಸಲು ಯಾರೂ ಸಹ ಮುಂದೆ ಬರುತ್ತಿಲ್ಲ ಮತ್ತು ಈ ಹಿಂದೆ ಉತ್ಸಾಹವನ್ನ ಕೆ.ಸಿ.ಆರ್ ತೋರುತ್ತಿಲ್ಲ ಎಂಬ ಅಂಶವನ್ನ ಗಮನಿಸಬೇಕಿದೆ. ಇದನ್ನೆಲ್ಲಾ ನೋಡಿದಾಗ ಈ ಎರಡು ಶಕ್ತಿಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತ ಪ್ರಧಾನಿ ಪಟ್ಟಕ್ಕೆ ಗುರಿ ಇಟ್ಟಿವೆ.
ಕಳೆದ ವಾರ ನಡೆದ ಚಳಿಗಾಲದ ಅಧಿವೇಶನದಲ್ಲಿ ಡಿಎಂಕೆಯ ಸಂಸದ ಟಿ.ಆರ್.ಬಾಲು ಮಾತನಾಡಿ, ಬಿಜೆಪಿ ವಿರುದ್ದದ ಹೋರಾಟದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಗ್ಗೂಡಬೇಕಿದೆ. ಮಮತಾ ಬ್ಯಾನರ್ಜಿ ಪ್ರತ್ಯೇಕವಾಗಿ ಅಥವಾ ಪರೋಕ್ಷವಾಗಿ ವಿರೋಧ ಪಕ್ಷಗಳ ನಡುವೆ ಬಿರುಕನ್ನು ಉಂಟು ಮಾಡಿ ವಿಭಜಿಸಲು ಪ್ರಯತ್ನಿಸಬಾರದು ಎಂದು ಒತ್ತಿ ಹೇಳಿದ್ದನ್ನು ಇಲ್ಲಿ ಗಮನಿಸಿಬಹುದು.
ಸದ್ಯಕ್ಕೆ ತೆಲಂಗಾಣದೊಂದಿಗೆ ಯಾವುದೇ ಅಂತರರಾಜ್ಯ ಸಮಸ್ಯೆ ಇಲ್ಲದ ಕಾರಣ ಅವರು ಹೆಚ್ಚಿನ ಗಮನವನ್ನ ತೃತೀಯ ರಂಗದ ಕಡೆಗೆ ಹರಿಸುತ್ತಿದ್ದಾರೆ. ಸದ್ಯ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವು ಕಾಂಗ್ರೆಸ್ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಸ್ಟಾಲಿನ್ ಕೆ.ಸಿ.ಆರ್ ಹೇಗೆ ಪ್ರತಿಕ್ರಿಯಿಸುತ್ತಾರೆ ಏಂಬುದು ಕುತೂಹಲ ಮೂಡಿದೆ.
ಮಹತ್ವ ಪಡೆಯದ ತೃತೀಯ ರಂಗ
ಸದಾ ಬಿಜೆಪಿ ವಿರುದ್ದ ಕಿಡಿಕಾರುತ್ತಲೇ ಇರುವ ಕೆ.ಸಿ.ಆರ್ ಮೋದಿ ಸರ್ಕಾರದ ವಿರುದ್ದ ಹರಿಹಾಯುತ್ತಲೇ ಇರುತ್ತಾರೆ. ಕಳೆದ ತಿಂಗಳು ಭತ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರುತ್ತಿರುವ ತಾರತಮ್ಯ ಧೋರಣೆ ಖಂಡಿಸಿ ಸ್ವತಃ ತೆಲಂಗಾಣದ ಮುಖ್ಯಮಂತ್ರಿ ಕೆ.ಸಿ. ಆರ್ ರೈತರ ಜೊತೆಗೆ ಬೀದಿಗಿಳಿದು ಕೇಂದ್ರದ ವಿರುದ್ದ ಪ್ರತಿಭಟಿಸಿದ್ದರು.
ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಯ ವೇಳೆ ಅವರು ರೈತರೊಂದಿಗೆ ಇರುವುದಾಗಿ ಹೇಳಿ, ಪ್ರತಿಭಟನೆ ವೇಳೆ ಮೃತಪಟ್ಟ 700ಕ್ಕೂ ಹೆಚ್ಚು ರೈತರ ಕುಟುಂಬಗಳಿಗೆ ತೆಲಂಗಾಣ ಸರ್ಕಾರದ ವತಿಯಿಂದ ಪರಿಹಾರ ಕೂಡ ನೀಡುವುದಾಗಿ ಘೋಷಿಸಿದ್ದರು. ಆದರೂ ಬಿಜೆಪಿ ಮತ್ತು ಮೋದಿ ವಿರುದ್ದ ಸದಾ ಕೆಂಡ ಕಾರುತ್ತಲೇ ಇರುವ ಕೆ.ಸಿ.ಆರ್ಗೆ ಸಮಾನ ಮನಸ್ಕ ವಿರೋಧ ಪಕ್ಷಗಳಿಂದ ಬೆಂಬಲ ಸಿಗದೇ ಇರುವುದು ವಿಪರ್ಯಾಸ.
2018 ರಲ್ಲಿ ಕೆ.ಸಿ.ಆರ್ ಅವರು ನಟ ಪ್ರಕಾಶ್ ರೈ ಅವರ ಆದಿಯಾಗಿ ಮಾಜಿ ಪ್ರಧಾನಿ ದೇವೇಗೌಡರನ್ನು ಪದ್ಮನಾಭ ನಗರದ ಅವರ ಮನೆಯಲ್ಲಿ ಭೇಟಿ ನೀಡಿ ಈ ಕುರಿತು ಮಾತುಕಥೆ ನಡೆಸಿದ್ದರು. ಅದೇ ವೇಳೆ ದೇಶದ ಉಳಿದ ಪ್ರಾದೇಶಿಕ ಪಕ್ಗಳ ನಾಯಕರನ್ನು ಒಂದು ಸುತ್ತು ಭೇಟಿ ಮಾಡಿಕೊಂಡು ತೃತೀಯ ರಂಗದ ಬಗ್ಗೆ ಚರ್ಚಿಸಿದ್ದರು. ಹಲವು ನಾಯಕರು ಇವರ ಮಾತಿಗೆ ಒಪ್ಪಿಗೆ ಸೂಚಿಸಿದ್ದರು. 2018ರ ವರ್ಷ್ಯಾಂತ್ಯದಲ್ಲಿ ನಡೆದ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕೆ.ಸಿ.ಆರ್ ನೇತೃತ್ವದ ಟಿಆರ್ಎಸ್ ಪಕ್ಷವು ದಿಗ್ವಿಜಯ ಸಾಧಿಸುವ ಮೂಲಕ ಇವರ ತೃತೀಯ ರಂಗದ ಪರಿಕಲ್ಪನೆಗೆ ಮತ್ತಷ್ಟು ಶಕ್ತಿ ಸಿಕ್ಕಿತ್ತು. ಅದೇ ಸಮಯಕ್ಕೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮುನ್ನೆಲೆಗೆ ಬಂದಿರುವ ವಿಷಯ ಇದಾಗಿದ್ದು, ಇದು ಬಿಜೆಪಿಯ ʻಬಿʼ ಟೀಮ್ ಆಗಿ ಕಾರ್ಯ ನಿರ್ವಹಿಸಲಿದೆ ಎಂದೆಲ್ಲ ಟೀಕೆಗಳು ಕೇಳಿಬಂದವು.
ಕೆ.ಸಿ.ಆರ್ ಮಾಡಿದ ಒಂದು ಸಣ್ಣ ತಪ್ಪೇನೆಂದರೆ ಬಿಜೆಪಿ ಮತ್ತು ಕಾಂಗ್ರೆಸ್ನಿಂದ ಅಂತರವನ್ನ ಕಾಯ್ದುಕೊಂಡಿರುವ ಬಿಜೆಡಿ, ಬಿಎಸ್ಪಿ, ವೈಎಸ್ಆರ್ಸಿಪಿ, ಶಿರೋಮಣಿ ಅಕಾಲಿದಳದಂತಹ ಪಕ್ಷಗಳ ವರಿಷ್ಠರನ್ನು ಸಂಪರ್ಕಸಿದೆ ಕಾಂಗ್ರೆಸ್ ಕೊತೆಗೆ ಹೆಚ್ಚು ಒಡನಾಟ ಇದ್ದಂತಹ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದ್ದು ಎಂಬುದು ಗಮನನಿಸಬೇಕಾದ ಸಂಗತಿ. ಈಗ ಮತ್ತೆ ಚಾಲ್ತಿಗೆ ಬಂದಿರುವ ಈ ವಿಷಯ ಮುಂದಿನ ದಿನಗಳಲ್ಲಿ ರಾಷ್ಟ್ರ ರಾಜಕೀಯದಲ್ಲಿ ಈ ತೃತೀಯ ರಂಗ ಪರಿಕಲ್ಪನೆ ಹೇಗೆ ಬದಲಾಗುತ್ತದೆ? ಮತ್ತ್ಯಾವ ತಿರುವು ಪಡೆಯುತ್ತದೆ ಎಂಬುದನ್ನ ಕಾದು ನೋಡಬೇಕಿದೆ.