ದೇಶಾದ್ಯಂತ ಭಾರೀ ಸುದ್ದಿ ಮಾಡಿರುವ ಹಿಜಾಬ್ ವಿವಾದ ಇದೀಗ ಕರ್ನಾಟಕದ ನಂತರ ಬಿಜೆಪಿ ಮೈತ್ರಿ ಆಡಳಿತವಿರುವ ಪುದುಚೇರಿಗೂ ವಿಸ್ತರಿಸಿದೆ. ಸರ್ಕಾರಿ ಶಾಲೆಯೊಂದರ ಪ್ರಾಂಶುಪಾಲರು ಮುಸ್ಲಿಂ ವಿದ್ಯಾರ್ಥಿನಿಗೆ ಹಿಜಾಬ್ ಅಥವಾ ಬುರ್ಖಾ ಧರಿಸದಂತೆ ಸೂಚನೆ ನೀಡಿರುವುದು ಇದೀಗ ಹೊಸ ವಿವಾದ ಹುಟ್ಟುಹಾಕಿದೆ.
ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಈಗಾಗಲೇ ಸ್ಥಳೀಯ ಸಂಘಟನೆಗಳ ಮುಖಂಡರು ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ದೂರು ಸಲ್ಲಿಸಿದ್ದು, ಸರ್ಕಾರಿ ಶಾಲೆಯ ಆವರಣಗಳಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳನ್ನು ನಿಷೇಧಿಸುವಂತೆ ಆಗ್ರಹಿಸಿದೆ.
ಬಾಲಕಿಯ ತಂದೆ ಹೇಳುವ ಪ್ರಕಾರ ಅರಿಯಂಕುಪ್ಪಂನ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಈ ಹಿಂದೆ ಪ್ರತಿನಿತ್ಯ ಹಿಜಾಬ್/ಬುರ್ಖಾ ಧರಿಸಿ ಶಾಲೆಗೆ ಹೋಗುತ್ತಿದ್ದಳು. ನನ್ನ ಮಗಳು ಶಾಲಾ ಆವರಣ ಪ್ರವೇಶಿಸಿದ ನಂತರ ಬುರ್ಖಾವನ್ನು ತೆಗೆದು ಹಿಜಾಬ್ ಅನ್ನು ಹಾಕಿಕೊಂಡು ತರಗತಿಗೆ ಹೋಗುತ್ತಿದ್ದಳು. ಫೆಬ್ರವರಿ 4ರಂದು ಶಾಲೆಗಳು ಪುನಾರಂಭಗೊಂಡ ನಂತರ ಪ್ರಾಂಶುಪಾಲರು 1ನೇ ತರಗತಿಯಿಂದ ಸಹ ನನ್ನ ಮಗಳು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇಷ್ಟು ದಿನ ಇಲ್ಲದ ಆಕ್ಷೇಪಣೆ ಎತ್ತಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರೇಗೌಡ, ಈ ಪ್ರಕರಣ ನನ್ನ ಗಮನಕ್ಕೆ ಬಂದಿದ್ದು ಅಧಿಕಾರಿಗಳಿಗೆ ಈ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ಧೇನೆ ಎಂದು ಹೇಳಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಹಿಜಾಬ್/ಬುರ್ಖಾ ಧರಿಸದಂತೆ ನಿಷೇಧಿಸಿರುವ ಯಾವುದೇ ಸೂಚನೆಗಳನ್ನು ನೀಡಲಾಗಿಲ್ಲ ಎಂದು ಹೇಳಿದ್ದಾರೆ.












