ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳ ಅಂಕಿಅಂಶಗಳಲ್ಲಿ ನಿಜವಾದ ಕೋವಿಡ್ ಪ್ರಕರಣಗಳ ಸಂಖ್ಯೆಯನ್ನು ದಾಖಲಾಗಿರಲಿಲ್ಲ ಎಂದು ಅಮೇರಿಕಾದಲ್ಲಿನ ನಾರ್ತ್ ಕ್ಯಾರೋಲಿನಾದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ನೀಡಿರುವ ವರದಿ ಹೇಳಿದೆ.
ಡ್ಯೂಕ್ ಯೂನಿವರ್ಸಿಟಿಯಿಂದ ಕೈಗೊಂಡ ಅಧ್ಯಯನವನ್ನು ಅಮೇರಿಕನ್ ಮೆಡಿಕಲ್ ಅಸೋಶಿಯೇಷನ್ ತಮ್ಮ ಮಾಸಿಕದಲ್ಲಿ ಪ್ರಕಟಿಸಿತ್ತು. ಕಳೆದ ವರ್ಷ ಆಗಸ್ಟ್ 29ರ ವೇಳೆಗೆ ಕರ್ನಾಟಕದಲ್ಲಿ 31 ಮಿಲಿಯನ್ SARSCoV2 ಪ್ರಕರಣಗಳಿದ್ದವು ಎಂದು ಸಂಶೋಧಕರ ವರದಿ ಹೇಳಿದೆ. ಆದರೆ, ಕರ್ನಾಟಕ ಆರೋಗ್ಯ ಇಲಾಖೆಯು ಅದೇ ದಿನ ಪ್ರಕಟಿಸಿದ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ ಕೇವಲ 3.3 ಲಕ್ಷ ಪ್ರಕರಣಗಳು ವರದಿಯಾಗಿದ್ದವು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Consumer Pyramids Household Survey (CPHS) ಎಂಬ ಸಂಸ್ಥೆಯೊಂದಿಗೆ ಜೊತೆಗೂಡಿ ಡ್ಯೂಕ್ ವಿಶ್ವವಿದ್ಯಾಲಯವು ಈ ಅಧ್ಯಯನವನ್ನು ನಡೆಸಿತ್ತು. ರಾಜ್ಯದ ಐದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ 2912 ಮನೆಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
ಜೂನ್ 15 ಮತ್ತು ಆಗಸ್ಟ್ 29 ರ ನಡುವೆ ನಡೆಸಿದ ಅಧ್ಯಯನದಲ್ಲಿ ಭಾಗವಹಿಸಿದ ಕೆಲವರು ಸಕ್ರಿಯ ಸೋಂಕಿನ ಪರೀಕ್ಷೆಗಳಿಗೆ ಒಳಗಾಗಿದ್ದರು ಮತ್ತು ಇತರರಿಗೆ ಹಿಂದಿನ ಸೋಂಕನ್ನು ಪರೀಕ್ಷಿಸಲು ಪ್ರತಿಕಾಯಗಳನ್ನು (antibodies) ಪರೀಕ್ಷಿಸಲಾಗಿತ್ತು. ಸಂಶೋಧಕರು ಸಂಗ್ರಹಿಸಿದ 1,197 ರಕ್ತದ ಮಾದರಿಗಳು ಮತ್ತು 1,341 ಸ್ವ್ಯಾಬ್ ಮಾದರಿಗಳ ಫಲಿತಾಂಶಗಳನ್ನು ಆಧರಿಸಿ ಈ ಅಧ್ಯಯನವನ್ನು ಮಾಡಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
2011 ರ ಜನಗಣತಿಯ ಆಧಾರದ ಮೇಲೆ ನಿರ್ದಿಷ್ಟ ಸ್ಥಳದ ಜನಸಂಖ್ಯೆಯ ಅನುಪಾತಕ್ಕೆ ಫಲಿತಾಂಶಗಳನ್ನು ಮರುಪರಿಶೀಲಿಸಿ ಹೊಂದಿಸಲಾಗಿದೆ. ರಾಜ್ಯ ಸರ್ಕಾರದ ಬೆಂಬಲದೊಂದಿಗೆ ಈ ಅಧ್ಯಯನವನ್ನು ನಡೆಸಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಆದಾಗ್ಯೂ, ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ಕರ್ನಾಟಕದ ಕೋವಿಡ್ -19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಆರ್. ಗಿರಿಧರ ಬಾಬು ಅವರ ಪ್ರಕಾರ, ʼಅಧ್ಯಯನದ ಫಲಿತಾಂಶಗಳು ಆರೋಗ್ಯ ಇಲಾಖೆಯ ಸಿರೊ ಸರ್ವೆಯ ಫಲಿತಾಂಶಗಳಿಗೆ ಅನುಗುಣವಾಗಿವೆ. ಪತ್ತೆಯಾದ ಪ್ರಕರಣಗಳು ಮತ್ತು ಸೋಂಕಿತರ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುತ್ತವೆʼ ಎಂದು ಹೇಳಿದ್ದಾರೆ.
ಕೆಲವು ಜಿಲ್ಲೆಗಳಲ್ಲಿ ಪ್ರತಿ ಒಂದು ಕೋವಿಡ್ ಪ್ರಕರಣ ಪತ್ತೆಯಾದಾಗಲೂ 10 ಪತ್ತೆಯಾಗದ ಪ್ರಕರಣಗಳು ಇದ್ದವು. ಅಂದರೆ ದಾಖಲಾದ ಪ್ರಕರಣ ಮತ್ತು ಸೋಂಕಿತರ ನಡುವಿನ ಅನುಪಾತ 1:10, ಕೆಲವು ಜಿಲ್ಲೆಗಳಲ್ಲಿ ಈ ಅನುಪಾತ 1:10 ಇದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ 1:40 ಹಾಗೂ ಮತ್ತು ಕೆಲವು ಜಿಲ್ಲೆಗಳಲ್ಲಿ 1:100 ಇತ್ತು. ಈ ಆಧಾರದ ಮೇಲೆ ರಾಜ್ಯ ಸರ್ಕಾರ ಆಗಸ್ಟ್ 2020 ರ ಕೋವಿಡ್ ದತ್ತಾಂಶದಲ್ಲಿ ಅಧಿಕೃತವಾಗಿ 3.3 ಲಕ್ಷ ಪ್ರಕರಣಗಳು ದಾಖಲಾದಾಗ ರಾಜ್ಯದಲ್ಲಿ ಒಟ್ಟು 31 ಮಿಲಿಯನ್ ಮಂದಿಗೆ ಸೋಂಕು ಹರಡಿರುವ ಸಾಧ್ಯತೆ ಇತ್ತು ಎಂದು ಅವರು ಹೇಳಿರುವುದಾಗಿ TOI ವರದಿ ಹೇಳಿದೆ.
ಈ ಕುರಿತು ಮಾತನಾಡಿದ ಆರೋಗ್ಯ ಆಯುಕ್ತ ಪಂಕಜ್ ಕುಮಾರ್, ಅಧ್ಯಯನಕಾರರು ಮಾಡಿದ ಅಧ್ಯಯನದ ವ್ಯಾಪ್ತಿ ಹಾಗೂ ಮಾದರಿಯ ಗಾತ್ರ ಸಣ್ಣದು ಹಾಗಾಗಿ ಫಲಿತಾಂಶ ಅಷ್ಟೊಂದು ನಿಖರವಲ್ಲವೆಂದಿದ್ದಾರೆ.
ಮೂಲ: TOI