ಮನುಕುಲಕ್ಕೆ ಶಾಪವಾಗಿರುವ ಮಲೇರಿಯಾ ವಿರುದ್ಧ ಸರ್ಕಾರ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಿದೆ. ಕೇಂದ್ರ ಸರ್ಕಾರ 2030ಕ್ಕೆ ಮಲೇರಿಯಾ ಮುಕ್ತ ಭಾರತಕ್ಕೆ ಶ್ರಮಿಸುತ್ತಿದೆ. ಆದರೆ ಕರ್ನಾಟಕದಲ್ಲಿ 2027ರ ಹೊತ್ತಿಗೆ ಮಲೇರಿಯಾ ನಿರ್ಮೂಲನೆ ಆಗಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಕರೆ ಕೊಟ್ಟಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಆವರಣದಲ್ಲಿರುವ ಪಿಎಂಎಸ್ ಎಸ್ ವೈ ಆಸ್ಪತ್ರೆ ವಿಶ್ವ ಮಲೇರಿಯಾ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಲೇರಿಯಾ ವಿರುದ್ಧ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಆಗಬೇಕಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳು ಜೊತೆಯಾಗಿ ಶ್ರಮ ಪಟ್ಟರೆ ಆರೋಗ್ಯಯುಕ್ತ ಕರ್ನಾಟಕದ ಕನಸು ನನಸಾಗಬಹುದು ಎಂದು ಹೇಳಿದರು.
ಏಪ್ರಿಲ್ 25ನ್ನು ವಿಶ್ವ ಮಲೇರಿಯಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಸಾರ್ವಜನಿಕರಲ್ಲಿ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಕಾರ್ಯ ಜಾಥಾಗಳ ಮೂಲಕ ನಡೆಯುತ್ತಿದೆ. ಪ್ರತಿಯೊಂದು ತಾಲೂಕುಗಳಲ್ಲೂ ಮಲೇರಿಯಾ ಬಗ್ಗೆ ಅರಿವು ಮೂಡಿಸುವ ಕಾರ್ಯ ವಿಭಿನ್ನವಾಗಿ ನಡೆಯುತ್ತಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರು ಸ್ವಚ್ಛತೆಯ ಮಹತ್ವನ್ನು ಸಾರ್ವಜನಿಕರಿಗೆ ತಿಳಿಸುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟರು.
ವಿಶ್ವ ಮಲೇರಿಯಾ ದಿನವನ್ನು ಆರಂಭದಲ್ಲಿ “ಆಫ್ರಿಕಾ ಮಲೇರಿಯಾ ದಿನ” ಎಂದು ಆಚರಣೆ ಮಾಡಲಾಗುತ್ತಿತ್ತು. ಬಿಸಿಲಿರುವ ಪ್ರದೇಶಗಳಲ್ಲಿ ಮಲೇರಿಯಾ ಹೆಚ್ಚಾಗಿತ್ತು. ಹೀಗಾಗಿ ಆಫ್ರಿಕಾ ದೇಶಗಳಲ್ಲಿ, ಏಷ್ಯಾಖಂಡದಲ್ಲಿ ಮಲೇರಿಯಾ ಸೋಂಕು ಹೆಚ್ಚಿದೆ. ಅಮೆರಿಕಾದಲ್ಲಿ ಪ್ರವಾಸಿಗರಿಂದಾಗಿ ಅಪರೂಪಕ್ಕೆ ಮಲೇರಿಯಾ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಐರೋಪ್ಯ ದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಅತೀ ಕಡಿಮೆ ಪ್ರಮಾಣದಲ್ಲಿ ದಾಖಲಾಗುತ್ತವೆ. ಏಷ್ಯಾ ಖಂಡದಲ್ಲಿ ಮಲೇರಿಯಾದಿಂದಾಗುವ ಸಾವುಗಳ ಪೈಕಿ ಅತೀ ಹೆಚ್ಚು ಸಾವು ಭಾರತದಲ್ಲೇ ಆಗುತ್ತದೆ. ಇದು ಗಂಭೀರ ವಿಚಾರ ಎಂದು ಹೇಳಿದರು.
ಭಾರತದಲ್ಲಿ 2030ರ ಒಳಗೆ ಮಲೇರಿಯಾ ನಿರ್ಮೂಲನೆ ಮಾಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಕಲ್ಪ ತೊಟ್ಟಿದ್ದಾರೆ. ರಾಷ್ಟ್ರೀಯ ಆರೋಗ್ಯ ಅಭಿಯಾನದ ಮೂಲಕ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸರ್ಕಾರ ಮತ್ತು ಸಮಾಜ ಒಟ್ಟಾಗಿ ಪ್ರತಿರೋಧ ಒಡ್ಡಿದರೆ ಮಾತ್ರ ಯಶಸ್ಸು ಸಿಗುತ್ತದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಹೆಚ್ಚಾಗಿ ನಡೆಯಬೇಕು. ಎಲ್ಲಾ ಹಳ್ಳಿಗಳಲ್ಳೂ ಆಶಾ ಕಾರ್ಯಕರ್ತರು ಶುಚಿತ್ವ ಮತ್ತು ನೈರ್ಮಲ್ಯದ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ವೈದ್ಯಕೀಯ ಕಾಲೇಜುಗಳು ತಮ್ಮ ವಿದ್ಯಾರ್ಥಿಗಳನ್ನು ಬಳಸಿಕೊಂಡು ಆಯಾ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಸಾರ್ವಜನಿಕ ಆರೋಗ್ಯ ಕಾಪಾಡುವ ಕೆಲಸ ಕೇವಲ ಆರೋಗ್ಯ ಇಲಾಖೆಯ ಕೆಲಸ ಮಾತ್ರವಲ್ಲ. ವೈದ್ಯಕಿಯ ಶಿಕ್ಷಣ ನೀಡುವ ವೈದ್ಯಕೀಯ ಕಾಲೇಜುಗಳು ಕೂಡ ಮಾಡಬೇಕು ಎಂದು ತಿಳಿಸಿರು.
ಮಲೇರಿಯಾ ಅನಾಫಿಲಿಸ್ ಹೆಣ್ಣು ಸೊಳ್ಳೆಯ ಕಡಿತದಿಂದ. ಹೀಗಾಗಿ ಸೊಳ್ಳೆ ಬಾರದೇ ಇರುವ ಹಾಗೇ ಅಥವಾ ಅದರ ಸಂತತಿ ಉತ್ಪತ್ತಿಯಾಗದೇ ಇರುವ ಹಾಗೇ ನೋಡಿಕೊಳ್ಳಬೇಕು. ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಬೇಕು. ಮನೆಯ ಕಿಟಕಿ ಬಾಗಿಲುಗಳಿಗೆ ಸೊಳ್ಳೆ ಪರದೆ ಹಾಕಿಸಿಕೊಳ್ಳಬೇಕು. ರಾಜ್ಯದ 10 ಜಿಲ್ಲೆಗಳಲ್ಲಿ ಕಳೆದ 3 ವರ್ಷಗಳಿಂದ ಒಂದೇ ಒಂದು ಮಲೇರಿಯಾ ಪ್ರಕರಣ ಕಂಡು ಬಂದಿಲ್ಲ. ಇದು ಇಲಾಖೆ ಹಾಗೂ ಅದರಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳ ಹೆಮ್ಮೆ. ಉಡುಪಿ, ಮಂಗಳೂರು ಪ್ರದೇಶಗಳಲ್ಲಿ ಮಲೇರಿಯಾ ಪ್ರಕರಣಗಳು ಹೆಚ್ಚಿವೆ. ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ವರದಿ ಬಂದ ಮೇಲೆ ಈ ಪ್ರದೇಶಗಳಲ್ಲಿ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಅನ್ನುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.
ತಪಾಸಣೆಗೆ ಮಹತ್ವ ನೀಡಿ:
ಜ್ವರ ಅಥವಾ ಬೇರೆ ರೋಗ ಲಕ್ಷಣ ಕಂಡು ಬಂದಾಗ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕ. ಇದರಿಂದ ರೋಗವನ್ನು ಬೇಗನೆ ಪತ್ತೆ ಹಚ್ಚಬಹುದು. ಚಿಕಿತ್ಸೆಯನ್ನು ಬೇಗನೆ ಆರಂಭಿಸಬಹುದು. ಸರ್ಕಾರ ಎಲ್ಲಾ ಪ್ರಾಥಮಿಕ, ಸಮುದಾಯ, ತಾಲೂಕು, ಜಿಲ್ಲಾ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆಗೆ ಬೇಕಾದಂತಹ ವ್ಯವಸ್ಥೆಗಳನ್ನು ಮಾಡಿದೆ. ಸಾರ್ವಜನಿಕರು ಈ ವ್ಯವಸ್ಥೆಯನ್ನು ಹೆಚ್ಚಾಗಿ ಬಳಸಿಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಕೂಡ ಸರ್ಕಾರದ ಜೊತೆ ಕೈ ಜೋಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ವೈದ್ಯರುಗಳು ಕೂಡ ಮಲೇರಿಯಾ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲ ಪಡಿಸಬೇಕು. ಕರ್ನಾಟಕವನ್ನು ಮಲೇರಿಯಾ ಮುಕ್ತ ರಾಜ್ಯವನ್ನಾಗಿ ಮಾಡಬೇಕು. ಪ್ರಧಾನಿಗಳು 2030ಕ್ಕೆ ಮಲೇರಿಯಾ ಮುಕ್ತ ಭಾರತಕ್ಕೆ ಕರೆ ಕೊಟ್ಟಿದ್ದಾರೆ. ಆದರೆ ಕರ್ನಾಟಕ 2027ರ ಹೊತ್ತಿಗೆ ಮಲೇರಿಯಾವನ್ನು ಮುಕ್ತ ವಾಗಬೇಕು. ಅದಕ್ಕಾಗಿ ತಯಾರಿ, ಸಿದ್ಧತೆಗಳು ಮತ್ತು ವಿಶೇಷ ಕಾರ್ಯಯೋಜನೆಗಳು ಬೇಗನೆ ಸಿದ್ಧವಾಗಬೇಕು ಎಂದು ಹೇಳಿದರು.
ಕೆಲವು ಆರೋಗ್ಯ ಕಾರ್ಯಕರ್ತರಿಂದ ಸರ್ಕಾರಕ್ಕೆ ಇರುಸು ಮುರಿಸು ಉಂಟಾಗುವ ಘಟನೆ ನಡೆದಿದ್ದು, ಸರ್ಕಾರದ ಗಮನಕ್ಕೆ ಬಂದಿದೆ. ಅದಕ್ಕಾಗಿ ಕ್ರಮ ಗೊಳ್ಳಲಾಗಿದೆ. ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಸರ್ಕಾರ 7ನೇ ವೇತನ ಆಯೋಗದ ವರದಿಯಂತೆ ವೇತನ ನಿಡುತ್ತಿದೆ. ಆರೋಗ್ಯ ಕಾರ್ಯಕರ್ತರು ತಮ್ಮ ಕೆಲಸವನ್ನು ಮಹತ್ವ ಕೊಟ್ಟು ಮುಗಿಸಬೇಕು. ಬಡ ಜನರ ಸೇವೆ ಮಾಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಹೆಚ್ಚು ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದೆ. ವೈದ್ಯರ ನೇಮಕವಾಗಿದೆ. ರಾಜ್ಯದ ಕಟ್ಟ ಕಡೆಯ ವ್ಯಕ್ತಿ ಕೂಡ ವಿಶ್ವಾಸ ಮತ್ತು ನಂಬಿಕೆಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆಯಬೇಕು ಎಂದರು.
ಬ್ರಿಟನ್ ನಲ್ಲಿ ನ್ಯಾಷಲ್ ಹೆಲ್ತ್ ಸರ್ವೀಸ್ ಮೂಲಕ ಎಲ್ಲರಿಗೂ ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಉಚಿತ ಸೇವೆ ಸಿಗುತ್ತದೆ. ಕರ್ನಾಟಕದಲ್ಲೂ ಅದೇ ರೀತಿಯಲ್ಲಿ ಆರೋಗ್ಯ ಸೇವೆ ಸಿಗಬೇಕು. ಮಾರಕ ರೋಗ, ಕ್ಲಿಷ್ಟ ಶಸ್ತ್ರ ಚಿಕಿತ್ಸೆಗಳು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಹೆಚ್ಚು ನಡೆಯಬೇಕು. ಈಗಾಗಲೇ ಪ್ರತಿದಿನ 30,000 ಸೈಕಲ್ ನಷ್ಟು ನಡೆಯುತ್ತಿದ್ದ ಡಯಾಲಿಸಿಸ್ ಅನ್ನು 60,000 ಸೈಕಲ್ ಗಳಿಗೆ ಏರಿಸಲಾಗಿದೆ. ಆರೋಗ್ಯ ಕರ್ನಾಟಕದ ಕನಸು ನನಸಾಗಬೇಕು. ಖಾಸಗಿಯಲ್ಲಿ ದುಬಾರಿಯಾಗಿರುವ ಸೇವೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚು ಹೆಚ್ಚು ಸಿಗುವಂತಾದರೆ ಆರೋಗ್ಯಯುಕ್ತ ಕರ್ನಾಟಕ ನಿರ್ಮಾಣವಾಗುತ್ತದೆ.