ಕರ್ನಾಟಕ ಎಂದು ಮರು ನಾಮಕರಣವಾಗಿ ಬರುವ ನವೆಂಬರ್ 1ಕ್ಕೆ 50 ವರ್ಷ ಪೂರ್ಣಗೊಳ್ಳಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸಂಭ್ರಮ-50 ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಅಭಿಯಾನ ಅಂಗವಾಗಿ ಸರ್ಕಾರ ಆಯ್ಕೆಮಾಡಿರುವ ನಾಡಿನ ಹೆಸರಾಂತ ಕವಿಗಳ 5 ಕನ್ನಡ ಹಾಡುಗಳನ್ನು ಕಡ್ಡಾಯವಾಗಿ ಹಾಡಬೇಕು ಎಂದು ಆದೇಶ ನೀಡಿದೆ.
ಕರ್ನಾಟಕ-50 ಸಂಭ್ರಮ ಹಿನ್ನೆಲೆಯಲ್ಲಿ 2023 ನವೆಂಬರ್ 1 ರಿಂದ 2024ರ ನವೆಂಬರ್ 1ರ ವರೆಗೆ ಇಡೀ ವರ್ಷ ಕರ್ನಾಟಕ ಇತಿಹಾಸ, ಕಲೆ, ಸಾಹಿತ್ಯ ಸಂಸ್ಕೃತಿ ಹಾಗೂ ನಾಡು ನುಡಿಗೆ ಸಂಬಂಧಿಸಿದಂತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ನವೆಂಬರ್ 1 ರಂದು ರಾಜ್ಯದೆಲ್ಲೆಡೆ ಆಚರಿಸುವ ರಾಜೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ, ರಾಷ್ಟ್ರ ಗೀತೆ, ನಾಡಗೀತೆ, ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆಯಾದ ನಂತರ 5 ಕನ್ನಡ ಹಾಡುಗಳನ್ನು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಹಾಡುವ ಮೂಲಕ ಸಮಸ್ತ ಕನ್ನಡಿಗರು ಕನ್ನಡಾಂಬೆಗೆ ಗೀತ ಗಾಯನದ ನಮನ ಸಲ್ಲಿಸಬೇಕೆಂದು ಸೂಚನೆ ನೀಡಲಾಗಿದೆ.
ಎಲ್ಲಾ ಶಾಲಾ-ಕಾಲೇಜು, ವಿಶ್ವವಿದ್ಯಾಲಯಗಳು, ಸರ್ಕಾರಿ, ಅರೆ-ಸರ್ಕಾರಿ, ನಿಗಮ ಮಂಡಳಿಗಳ ಕಚೇರಿಗಳು, ಬ್ಯಾಂಕ್ಗಳು ಹಾಗೂ ಸಂಘ ಸಂಸ್ಥೆಗಳು ನವೆಂಬರ್ 1 ರಂದು ಆಚರಿಸುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಕನ್ನಡ ಹಾಡುಗಳನ್ನು ಹಾಡುವ ಮೂಲಕ ಕನ್ನಡಾಂಬೆಗೆ ನುಡಿ ನಮನ (ಗೀತ ಗಾಯನ) ಸಲ್ಲಿಸಬೇಕೆಂದು ತಿಳಿಸಲಾಗಿದೆ.
ಗೀತ ಗಾಯನದ 5 ಕನ್ನಡ ಗೀತೆಗಳು:
ಹುಯಿಲಗೋಳ ನಾರಾಯಣರಾಯರ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು”
ಕುವೆಂಪು ಅವರ “ಎಲ್ಲಾದರು ಇರು ಎಂತಾದರು ಇರು”
ದ.ರಾ.ಬೇಂದ್ರೆ ಅವರ “ಒಂದೇ ಒಂದೇ ಕರ್ನಾಟಕವೊಂದೇ”
ಸಿದ್ದಯ್ಯ ಪುರಾಣಿಕ ಅವರ “ಹೊತ್ತಿತ್ತೋ ಹೊತ್ತಿತ್ತು ಕನ್ನಡದ ದೀಪ”
ಚನ್ನವೀರ ಕಣವಿ ಅವರ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ”.