ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರ್ಗಿ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಬುಧವಾರ ದಿನಾಂಕವನ್ನು ಘೋಷಿಸಿದೆ. ಸೆಪ್ಟೆಂಬರ 3ರಂದು ಮತದಾನ, ಸೆಪ್ಟೆಂಬರ 6ರಂದು ಪಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ಬುಧವಾರ ತಿಳಿಸಿದೆ.
ಕೋವಿಡ್ ನೆಪ ಮುಂದಿಟ್ಟುಕೊಂಡು ಚುನಾವಣೆಯನ್ನು ಮುಂದೂಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು ಆದರೆ, ಈ ಕಾರಣ ಪರಿಗಣಿಸಲು ಸಾಧ್ಯವಿಲ್ಲ ಮತ್ತು ಬಾಕಿ ಉಳಿದಿರುವ ಪಾಲಿಕೆ ಹಾಗು ನಗರ ಸಭೆಗಳಿಗೆ ಆದಷ್ಟು ಬೇಗ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ ನೀಡಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್.ಈಶ್ವರಪ್ಪ “ಕೋವಿಡ್ 3ನೇ ಅಲೆಯ ಭೀತಿಯ ನಡುವೆ ನಗರ ಪಾಲಿಕೆಗಳಿಗೆ ಚುನಾವಣೆ ನಡೆಸುವ ಅಗತ್ಯವಾದರೂ ಏನಿದೆ”ಎಂದು ಅವರು ಕೇಳಿದ್ದಾರೆ.

ಈ ವರ್ಷಾಂತ್ಯದವರೆಗು ಯಾವುದೇ ಚುನಾವಣೆ ನಡೆಸಬಾರದೆಂದು ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ ಕೋವಿಡ್ ಇರುವ ಕಾರಣ ಎಲ್ಲರು ಜಾಗ್ರತೆ ವಹಿಸಬೇಕು ಈ ಸಮಯದಲ್ಲಿ ಆಯೋಗ ಚುನಾವಣೆ ಘೋಷಿಸಿದರೆ ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ರಾಜಕೀಯ ಪಕ್ಷವಾಗಿ ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಆದರೆ, ಈಗಲೇ ಚುನಾವಣೆ ನಡೆಸುವ ತುರ್ತೇನಿದೆ ಎಂದು ಪ್ರಶ್ನಿಸಿದ್ದಾರೆ.





