ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಜಟಾಪಟಿ ನಡೆದು ಕಲಾಪವನ್ನು ಮುಂದೂಡಲಾಯಿತು.
ವಿಧಾನಸಭೆ ಅಧಿವೇಶನದ 6ನೇ ದಿನವಾದ ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಮಳೆ ಅನಾಹುತ ವಿಷಯ ಮತ್ತೊಮ್ಮೆ ಪ್ರಸ್ತಾಪವಾಯಿತು. ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಸಿಎಂ ಬೊಮ್ಮಾಯಿ ಮತ್ತು ಕಂದಾಯ ಸಚಿವರ ಉತ್ತರಗಳಿಗೆ ಅಸಮಾಧಾನ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಮಾತಿನ ಚಕಮಕಿ ನಡೆದು ಕಲಾಪವನ್ನು ಮಧ್ಯಾಹ್ನ ಭೋಜನ ವಿರಾಮದ ನಂತರಕ್ಕೆ ಮುಂದೂಡಲಾಯಿತು.
ಕಂದಾಯ ಸಚಿವ ಆರ್.ಅಶೋಕರ್ ಕೆರೆ ಮುಚ್ಚಲು ಕಂದಾಯ ಇಲಾಖೆಗೆ ಅನುಮತಿ ಇಲ್ಲ. ಆದರೆ ಕಂದಾಯ ಇಲಾಖೆ ಅಥವಾ ಸಣ್ಣ ನೀರಾವರಿ ಸಚಿವರು ಸಂಪುಟಕ್ಕೆ ಶಿಫಾರಸು ಮಾಡುತ್ತಾರೆ. ಅಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೆಂಪೇಗೌಡರ ನಂತರ ಬೆಂಗಳೂರಿನಲ್ಲಿ ಯಾವುದೇ ಕೆರೆಗಳು ನಿರ್ಮಾಣ ಆಗಿಲ್ಲ. ಬದಲಾಗಿ ಮುಚ್ಚಲಾಗುತ್ತಿದೆ ಎಂದು ವಿವರಿಸಿದರು.
ಬೆಂಗಳೂರಿನಲ್ಲಿ 42 ಕೆರೆಗಳನ್ನು ಮುಚ್ಚಲಾಗಿದ್ದು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದಲೇ 28 ಕೆರೆಗಳನ್ನು ಮುಚ್ಚಲಾಗಿದೆ. ಬಿಬಿಎಂಪಿಯಿಂದ ೫ ಹಾಗೂ ಖಾಸಗಿ ಒತ್ತುವರಿಗಳಿಂದ 5 ಕೆರೆಗಳನ್ನು ಮುಚ್ಚಲಾಗಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಅದರಲ್ಲೂ ವಿಧಾನಸೌಧ ಮತ್ತು ಹೈಕೋರ್ಟ್ ಸುತ್ತಮುತ್ತ ಸುರಿದ ಮಳೆ ಕಂಠೀರವ ಕ್ರೀಡಾಂಗಣಕ್ಕೆ ಹೋಗುತ್ತದೆ. ಅಲ್ಲಿ ಶೇಖರಣೆ ಆದ ನಂತರ ಕೋರಮಂಗಲ, ಎಚ್ ಎಸ್ ಆರ್ ಲೇಔಟ್ ತಲುಪುತ್ತದೆ. ಆದರೆ ಈಗ ಕೆರೆಗಳು ಮುಚ್ಚಿರುವುದರಿಂದ ಬೊಮ್ಮಾನಹಳ್ಳಿ ಭಾಗದಲ್ಲಿ ನುಗ್ಗುತ್ತಿದೆ ಎಂದು ಅವರು ವಿವರಿಸಿದರು.
ಈಗ ಮುಚ್ಚಿರುವ ಕೆರೆಗಳಿಂದ ಸುಮಾರು 2ರಿಂದ 4 ಟಿಎಂಸಿ ನೀರು ಸಂಗ್ರಹವಾಗುತ್ತಿತ್ತು. ಆದರೆ ನೀರು ಸಂಗ್ರಹ ಆಗಲು ಜಾಗವಿಲ್ಲದೇ ಬಡಾವಣೆಗಳಿಗೆ ನುಗ್ಗುತ್ತಿದೆ. ಇದಿರಂದ ಸುಮಾರು 5ರಿಂದ 6 ಕಿ.ಮೀ. ವ್ಯಾಪ್ತಿಯಲ್ಲಿ ಮಳೆ ಬಂದಾಗ ಪ್ರವಾಹ ಪರಿಸ್ಥಿತಿ ನಿರ್ಮಾಣಗುತ್ತಿದೆ ಎಂದು ಅಶೋಕ್ ವಿವರಿಸಿದರು.
ಅಶೋಕ್ ಇದುವರೆಗೆ ಕೆರೆಗಳನ್ನು ಮುಚ್ಚಿರುವ ಅವಧಿ ಪಟ್ಟಿ ನೀಡಿದಾಗ ಕೆರಳಿದ ಕಾಂಗ್ರೆಸ್ ಕಾಂಗ್ರೆಸ್ ಸದಸ್ಯರು, ನೀರು ಹಳೆ ಕಥೆಗಳನ್ನು ಹೇಳಬೇಡಿ. ಸಮಸ್ಯೆಗೆ ಪರಿಹಾರ ಏನು ಎಂದು ಹೇಳಿ. ಸಮಸ್ಯೆಗೆ ಪರಿಹಾರ ನೀಡದೇ ವಿಷಯ ಮಂಡಿಸುವುದು ಸರಿಯಲ್ಲ ಎಂದು ಪ್ರತಿರೋಧ ವ್ಯಕ್ತಪಡಿಸಿದರು.
ಈ ವೇಳೆ ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದರಿಂದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಧ್ಯಾಹ್ನ 2.45ರವರೆಗೆ ಭೋಜನ ಅವಧಿ ಮುಂದೂಡಿದರು.