ರಾಜ್ಯದಲ್ಲಿ ಪ್ರಸ್ತುತ ರಿಪ್ರೊಡೆಕ್ಟಿವ್ ನಂಬರ್ ಶೇ.0.85ರಷ್ಟಿದ್ದು, ಯಾವುದೇ ಸಮಯದಲ್ಲಿ ಈ ದರ ಶೇ.1ಕ್ಕೆ ತಲುಪುವ ಸಾಧ್ಯತೆಗಳಿವೆ. ಈ ರೀತಿಯಾಗಿದ್ದೇ ಆದರೆ ರಾಜ್ಯದ ಪರಿಸ್ಥಿತಿ ಕಠಿಣವಾಗಲಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಡಾ.ಗಿರಿಧರ ಬಾಬು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕರೋನ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದು ಮೂರನೇ ಅಲೆಯ ಮುನ್ಸೂಚನೆಯೇ?
ನೀವು ಸೋಂಕಿನ ಪ್ರವೃತ್ತಿಯನ್ನು ಪರೀಕ್ಷಿಸಿದಾಗ, ಅದನ್ನು ನಿರ್ಣಯಿಸಲು ಹಲವಾರು ಮಾರ್ಗಗಳಿವೆ. ರಿಪ್ರೊಡೆಕ್ಟಿವ್ ಮೌಲ್ಯವನ್ನು ಪರಿಶೀಲಿಸುವುದಾದರೆ ಇದು ಜೂನ್ 20ರವರೆಗೆ ಕಡಿಮೆ ಪ್ರಮಾಣದಲ್ಲಿತ್ತು. ಬಳಿಕ ಹೆಚ್ಚಾಗತೊಡಗಿತ್ತು. ಪ್ರಸ್ತುತ ಈ ಮೌಲ್ಯ ಶೇ.0.85ರಷ್ಟಿದೆ. ಇದು ಯಾವುದೇ ಸಮಯದಲ್ಲಿ ಬೇಕಾದರೂ ಶೇ.1ಕ್ಕೆ ತಲುಪಬಹುದು. 3ನೇ ಅಲೆ ಕೂಡ ಎರಡನೇ ಅಲೆ ರೀತಿಯಲ್ಲಿಯೇ ಇರಲಿದೆ. ನಾವು ತೆಗೆದುಕೊಳ್ಳುವ ಕಠಿಣ ಕ್ರಮಗಳ ಮೇಲೆ ಸಾವು-ನೋವುಗಳು ಅವಲಂಬಿತವಾಗಿರುತ್ತವೆ ಎಂದು ಹೇಳಿದ್ದಾರೆ.
ಅಕ್ಕ ಪಕ್ಕದ ರಾಜ್ಯಗಳಲ್ಲಿ ಸೋಂಕು ಹೆಚ್ಚಾಗಿದ್ದರಿಂದ ರಾಜ್ಯದಲ್ಲಿಯೂ ಈ ಪರಿಸ್ಥಿತಿ ಎದುರಾಗಿದೆಯೇ ಅಥವಾ ರಾಜ್ಯದಲ್ಲಿಯೇ ಸೋಂಕು ಹೆಚ್ಚಾಗಿದೆಯೇ?
ಹಲವಾರು ಅಂಶಗಳು ಇದಕ್ಕೆ ಕಾರಣವಾಗುತ್ತದೆ. ಸೆರೋಪ್ರೆವೆಲೆನ್ಸ್, ಲಸಿಕಾ ವ್ಯಾಪ್ತಿ ಮತ್ತು ಕೋವಿಡ್-ಸೂಕ್ತ ನಡವಳಿಕೆ ಇದಕ್ಕೆ ಪ್ರಮುಖವಾಗುತ್ತವೆ. ರಾಜ್ಯದಲ್ಲಿ ಸೋಂಕು ಹೆಚ್ಚಲು ನೆರೆ ರಾಜ್ಯ ಕೇರಳ ಮಾತ್ರವೇ ಕಾರಣವಲ್ಲ. ಸೋಂಕು ಎಲ್ಲಿಂದಾದರೂ ಪ್ರಪಂಚದ ಯಾವುದೇ ಭಾಗದಿಂದ ಬೇಕಾದರೂ ಬರಬಹುದು. ಕರ್ನಾಟಕದ ಅನೇಕ ಪ್ರದೇಶಗಳಲ್ಲಿ ಕಡಿಮೆ ಸೆರೋಪ್ರೆವೆಲೆನ್ಸ್ ಇದೆ, ಇದು ಸೋಂಕು ಹಠಾತ್ ಉಲ್ಬಣಗೊಳ್ಳಲು ಕಾರಣವಾಗಬಹುದು. ಬೆಂಗಳೂರಿನಲ್ಲೂ ಕೂಡ ಸೆರೋಪ್ರೆವೆಲೆನ್ಸ್ ಕಡಿಮೆ ಇದೆ. ರಾಜ್ಯದ ಉತ್ತರ, ಕರಾವಳಿ ಭಾಗಗಳಲ್ಲಿ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ನಾವು ಒಂದೇರೀತಿಯ ನಿಯಮಗಳನ್ನು ಜಾರಿಗೆ ತರುವುದು ಅಗತ್ಯವಿದೆ. ಪರೀಕ್ಷೆಗಳ ಸಂಖ್ಯೆ ಹೆಚ್ಚಿಸುವುದು, ಜನರು ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಮಾಡುವುದರಿಂದ ಕರೋನ ಮೂರನೇ ಅಲೆಯನ್ನು ತಡೆಯಬಹುದು ಎಂದು ಹೇಳಿದ್ದಾರೆ.
ಲಸಿಕೆ ಕುರಿತು ಪ್ರಸ್ತುತ ರಾಜ್ಯದ ಸ್ಥಿತಿಗತಿ ಹೇಗಿದೆ?
ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಲಸಿಕೆಗಳ ಸಮರ್ಪಕವಾದ ಪೂರೈಕೆ ಇಲ್ಲ. ಹೀಗಾಗಿ ಲಸಿಕೆಗಾಗಿ ಕಾಯುತ್ತಿರುವ ಈ ಸಮಯದಲ್ಲೇ ನಾವು ಸೂಕ್ಷ್ಮ ಯೋಜನೆಗಳನ್ನು ರೂಪಿಸಬೇಕಿದೆ. ಫಲಾನುಭವಿಗಳ ಒಂದೆಡೆ ಸೇರಿದ ಕೋವಿನ್ ಆ್ಯಪ್ ನಲ್ಲಿ ಹೆಸರುಗಳನ್ನು ನೊಂದಾಯಿಸುವ ಕೆಲಸ ಮಾಡಬೇಕು. ಲಸಿಕೆ ಲಭ್ಯವಾದ ಕೂಡಲೇ ಫಲಾನುಭವಿಗಳು ಲಸಿಕೆ ಪಡೆಯುವಂತೆ ಮಾಡಬೇಕು. ಚುನಾವಣಾ ಸಂದರ್ಭದಲ್ಲಿ ಈ ರೀತಿ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಲಸಿಕೆ ಹಿಂಜರಿಕೆಯ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ ಈ ಕುರಿತು ನಿಮ್ಮ ಅಭಿಪ್ರಾಯವೇನು?
ಇದನ್ನು ಅರಿವಿನ ಕೊರತೆ, ಸೂಕ್ಷ್ಮ ಯೋಜನೆಯ ಕೊರತೆ, ಸಜ್ಜುಗೊಳಿಸುವಿಕೆಯ ಕೊರತೆ ಮುಂತಾದ ಹಲವಾರು ವೈಫಲ್ಯಗಳಿಗೂ ಬಳಸಲಾಗುತ್ತದೆ. ಭಯದಿಂದ ಅಥವಾ ಇನ್ನಾವುದೊ ಕಾರಣದಿಂದ ಲಸಿಕೆ ಹಾಕಲು ಇಚ್ಛಿಸದ ಜನರು ಬಹಳ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಭಾರತದಲ್ಲಿ ಲಸಿಕೆಗಳ ಕುರಿತು ಸುಳ್ಳು ಸುದ್ದಿಗಳ ಕಾರಣದಿಂದ ಕೆಲವೇ ಜನರು ಭಯಭೀತರಾಗಿದ್ದಾರೆ. ಇದರಿಂದ ಹೊರಬರಲು ಯುನಿಸೆಫ್, ಸರ್ಕಾರ ಮತ್ತು ಡಬ್ಲ್ಯುಎಚ್‌ಒ ಅಭಿಯಾನಗಳನ್ನು ನಡೆಸುತ್ತಿದೆ ಹೇಳಿದ್ದಾರೆ.
ಐಸಿಎಂಆರ್‌ಗೆ ಸಲ್ಲಿಸಿದ ಸೆರೋಪ್ರೆವೆಲೆನ್ಸ್ ಸಮೀಕ್ಷೆಯ ವರದಿಯು ರಾಜ್ಯದಲ್ಲಿ ಸುಮಾರು 68 ಪ್ರತಿಶತ ಸಿರೊಪೊಸಿಟಿವಿಟಿ ತೋರಿಸುತ್ತದೆ ಈ ಕುರಿತು ನಿಮ್ಮ ಅಭಿಪ್ರಾಯ?
ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆದ ಸೆರೋ ಸಮೀಕ್ಷೆಯಲ್ಲಿ ನಾನು ಭಾಗಿಯಾಗಿದ್ದೇನೆ. ಇಡೀ ರಾಜ್ಯಕ್ಕೆ ಎರಡು ಜಿಲ್ಲೆಗಳ ಫಲಿತಾಂಶಗಳ ಆಧಾರದ ಮೇಲೆ ಸರಾಸರಿ 68 ಪ್ರತಿಶತವನ್ನು ತೆಗೆದುಕೊಳ್ಳುವುದು ಸೂಕ್ತವಲ್ಲ. ಮುಂಬರುವ ದಿನಗಳಲ್ಲಿ, 30-40 ಪ್ರತಿಶತಕ್ಕಿಂತ ಕಡಿಮೆ ಸೆರೋಪ್ರೆವೆಲೆನ್ಸ್ ಇರುವ ಪ್ರದೇಶಗಳು ನೋಡುವ ವಿಶ್ವಾಸನನಗಿದೆ ಎಂದು ಹೇಳಿದ್ದಾರೆ.
ಕರೋನ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಳ್ಳಬೇಕಿದಾದ ತಕ್ಷಣದ ಕ್ರಮಗಳೇನು?
ಒಂದು ಘಟನೆ ಬಳಿಕ ಮುಂದಿನದ್ದಕ್ಕೆ ಸಿದ್ಧರಾಗಲು ಕೋವಿಡ್ ವಿರುದ್ಧದ ಹೋರಾಟ ಚುನಾವಣೆಯಂತಲ್ಲ. ಇದು ಒಂದು ಪ್ರಕ್ರಿಯೆಯಾಗಿದ್ದು. ಸದಾಕಾಲ ಎಚ್ಚರಿಕೆ ಹಾಗೂ ಸಿದ್ಧರಾಗಿರಬೇಕು. ಕರ್ನಾಟಕವು ಉತ್ತಮ ಪರೀಕ್ಷಾ ದಾಖಲೆಯನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ, ಆದರೆ, ಈ ಸಂಖ್ಯೆ ಸಾಕಾಗುವುದಿಲ್ಲ. ಬೆಂಗಳೂರು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಶೇಕಡಾ 50 ಕ್ಕಿಂತ ಹೆಚ್ಚು ಪರೀಕ್ಷೆ ನಡೆಯುತ್ತದೆ. ಆದರೆ ಕಡಿಮೆ ಸೆರೋಪ್ರೆವೆಲೆನ್ಸ್ ಹೊಂದಿರುವ ಗ್ರಾಮೀಣ ಪ್ರದೇಶಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.
ರಾಜಕೀಯ ನಾಯಕರು, ನಟ-ನಟಿಯರು, ಕಲಾವಿದರು, ಧಾರ್ಮಿಕ ನಾಯಕರು ಕೋವಿಡ್ ನಿಯಮಾವಳಿಯನ್ನು ಪಾಲಿಸಬೇಕು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ದೊಡ್ಡ ಮಟ್ಟದ ಜನಸಂಖ್ಯೆ ಸೇರದಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ.
Source : The New Indian Express