ಕರ್ನಾಟಕ ಬಿಜೆಪಿಯ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಬಂಧಿಸಬೇಕು ಎಂದು ಅಖಿಲ ಭಾರತ್ ಹಿಂದೂ ಮಹಾಸಭಾ (ಎಬಿಎಚ್ಎಂ) ಒತ್ತಾಯಿಸಿದೆ.
ಮಂಗಳೂರಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಎಬಿಎಚ್ಎಂ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್, ಆಡಳಿತಾರೂಢ ಬಿಜೆಪಿ ಸರ್ಕಾರ ರಾಜಕೀಯ ಅಧಿಕಾರಕ್ಕಾಗಿ ಹಿಂದೂ ಭಾವನೆಗಳನ್ನು ಬಳಸಿಕೊಳ್ಳುತ್ತಿದೆ. ಸಂತೋಷ್ ಪಾಟೀಲ್ ಒಬ್ಬ ಹಿಂದೂ ಆಗಿದ್ದು, ಬಿಜೆಪಿಯವರು ಈ ಹತ್ಯೆಯ ಬಗ್ಗೆ ಎಂದೂ ಗಮನಹರಿಸಿಲ್ಲ ಎಂದು ಆರೋಪಿಸಿದ್ದಾರೆ.
ಮುಂದುವರೆದು ಮಾತನಾಡಿದ ಪವಿತ್ರನ್, “ಆರ್ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗಾ ಅವರನ್ನು ಹತ್ಯೆ ಮಾಡಲಾಗಿದೆ ಮತ್ತು ಅವರು ಸಹ ಹಿಂದೂ ಆಗಿದ್ದರು… ಬಿಜೆಪಿಯು ಅಧಿಕಾರಕ್ಕಾಗಿ ಹಿಂದೂಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ ಹೊರತು ರಕ್ಷಿಸುತ್ತಿಲ್ಲ. ಸರ್ಕಾರ ಈಶ್ವರಪ್ಪ ಅವರನ್ನು ವಜಾ ಮಾಡಬೇಕಿತ್ತು, ಬದಲಿಗೆ ಒತ್ತಡಕ್ಕೆ ಮಣಿದು ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಬಿಎಚ್ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಭ್ರಷ್ಟಾಚಾರ ಮುಕ್ತ ಭಾರತವಾಗಲಿದೆ ಎಂದು ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಿದ್ದಾರೆ. “ಆ ಭರವಸೆ ಕರ್ನಾಟಕಕ್ಕೆ ಅನ್ವಯಿಸುವುದಿಲ್ಲವೇ? 60 ವರ್ಷಗಳ ಕಾಲ ಕಾಂಗ್ರೆಸ್ ದೇಶವನ್ನು ಲೂಟಿ ಮಾಡಿದೆ ಎಂದು ಬಿಜೆಪಿ ಹೇಳುತ್ತಿದೆ, ಆದರೆ ಬಿಜೆಪಿ ಏನು ಮಾಡಿದೆ? ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ನೀಡಲಾಗುತ್ತದೆ ಹಾಗಾಗಿ ಈ ತನಿಖೆಯನ್ನು ನಿವೃತ್ತ ನ್ಯಾಯಾಧೀಶರು ಮಾಡಬೇಕು ಎಂದು ಪ್ರಧಾನ್ ಒತ್ತಾಯಿಸಿದ್ದಾರೆ.
ಪ್ರಧಾನ್ ಅವರು ಇತ್ತೀಚೆಗೆ ತಮ್ಮ ವಿವಾದಾತ್ಮಕ ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದರು, ” ಹಿಂದೂ ವಿರೋಧಿಯಾಗಿದ್ದ ಗಾಂಧೀಜಿಯನ್ನು ಬಿಡಲಿಲ್ಲ . ಇನ್ನು ನಿಮ್ಮನ್ನು ಬಿಡ್ತೇವ?” ಎಂದು ಕರ್ನಾಟಕದಲ್ಲಿ ದೇವಸ್ಥಾನ ಧ್ವಂಸ ಪ್ರಕರಣದ ಹಿನ್ನೆಲೆಯಲ್ಲಿ ಈ ಹೇಳಿಕೆ ನೀಡಿದ್ದರು.