ಕೊಡಗಿನಲ್ಲಿ ನಾಲ್ವರ ಸಾವಿಗೆ ಕಾರಣವಾದ ನರಭಕ್ಷಕ ಹುಲಿಯನ್ನು ಕಂಡಲ್ಲಿ ಗುಂಡಿಟ್ಟು ಕೊಲ್ಲಲು ಕರ್ನಾಟಕ ಸರ್ಕಾರ ಆದೇಶಿಸಿದೆ.
ಸೋಮವಾರ ಬೆಲ್ಳೂರು ಗ್ರಾಮದಲ್ಲಿ ರಂಗಸ್ವಾಮಿ ಎಂಬ 8 ವರ್ಷದ ಬಾಲಕನನ್ನು ಹುಲಿ ಬಲಿ ಪಡೆದುಕೊಂಡ ಬಳಿಕ ಸಾರ್ವಜನಿಕರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದರು. ಈ ಕುರಿತು ಸದನದಲ್ಲಿ ಕೊಡಗಿನ ಶಾಸಕರಾದ ಅಪ್ಪಚ್ಚು ರಂಜನ್ ಮತ್ತು ಕೆ ಜಿ ಭೋಪಯ್ಯ ದನಿಯೆತ್ತಿದ್ದು, ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದಾರೆ.
ಅರಣ್ಯ ಇಲಾಖೆಗೆ ಹುಲಿಯನ್ನು ಸೆರೆಹಿಡಿಯಲು ಅಥವಾ ಕೊಲ್ಲಲು ಸಾಧ್ಯವಿಲ್ಲವಾದರೆ, ನಮಗೆ ತಿಳಿಸಿ ಮುಂದಿನದ್ದು ನಾವೇ ನೋಡುತ್ತೇವೆ. ನಾವೇ ಹುಲಿಯನ್ನು ಕೊಲ್ಲುತ್ತೇವೆ ಎಂದು ವಿರಾಜಪೇಟೆ ಬಿಜೆಪಿ ಶಾಸಕ ಕೆಜಿ ಭೋಪಯ್ಯ ಸದನದಲ್ಲಿ ಹೇಳಿದ್ದಾರೆ.

ಭೋಪಯ್ಯ ಮಾತಿಗೆ ದನಿಗೂಡಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್, ಆ ನರಭಕ್ಷಕ ಹುಲಿಯು ಈಗಾಗಲೇ ನಾಲ್ವರನ್ನು ಕೊಂದಿದೆ. ನಿಮಗೆ (ಅರಣ್ಯ ಇಲಾಖೆ)ಗೆ ಕೊಲ್ಲಲು ಆಗುವುದಿಲ್ಲದಿದ್ದರೆ ತಿಳಿಸಿ, ಹುಲಿಯನ್ನು ನಾವೇ ಕೊಲ್ಲುತ್ತೇವೆ ಎಂದು ಅವರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವ ಅರವಿಂದ್ ಲಿಂಬಾವಲಿ, ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ . ಹುಲಿಯನ್ನು ಶೂಟ್ ಮಾಡಲು ನಾನು ಸೋಮವಾರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದೇನೆ” ಎಂದು ಲಿಂಬಾವಲಿ ಶೂನ್ಯವೇಳೆಯಲ್ಲಿ ಹೇಳಿದ್ದಾರೆ.










