2014 ರಲ್ಲಿ ಕೇಂದ್ರವು ಪ್ರಾರಂಭಿಸಿದ ಪ್ರಸಾದ್ ಮತ್ತು ಸ್ವದೇಸ್ ದರ್ಶನ್ ಯೋಜನೆಗಳ ಅಡಿಯಲ್ಲಿ ಯಾವುದೇ ಪ್ರವಾಸೋದ್ಯಮ ಸ್ಥಳಗಳ ವಿವರವನ್ನು ನೀಡದ ಕಾರಣ ಗುರುವಾರ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ದೂಷಿಸಿದೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ನಿನ್ನೆ ಪ್ರಸಾದ ಮತ್ತು ಸ್ವದೇಶ ದರ್ಶನ ಯೋಜನೆ ಕುರಿತಂತೆ ಚರ್ಚೆಯಲ್ಲಿ, ಕರ್ನಾಟಕ ಪ್ರವಾಸೋದ್ಯಮ ಸ್ಥಳಗಳ ಬಗ್ಗೆ ಸರಿಯಾದ ವಿವರಗಳನ್ನು ನೀಡಿಲ್ಲ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಹೆಚ್ಚುವರಿ ಮಹಾನಿರ್ದೇಶಕ ರೂಪಿಂದರ್ ಬ್ರಾರ್ ಹೇಳಿದ್ದಾರೆ. ಪ್ರಸಾದ್ ಯೋಜನೆಯಡಿ ಮೈಸೂರಿನ ಚಾಮುಂಡಿ ಬೆಟ್ಟ ಅಭಿವೃದ್ಧಿಗೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ವಿಫಲವಾಗಿದೆ. ಸರಿಯಾಗಿ ಪ್ರಸ್ತಾಪವನೆ ಕಳುಹಿಸಿಲ್ಲ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರವು ಸಾಕಷ್ಟು ಕೆಲಸಗಳನ್ನು ಮಾಡಿದ್ದರೂ, ಯೋಜನೆಗಳ ಕೆಲವು ಅಂಶಗಳನ್ನು ಇನ್ನೂ ಗುರುತಿಸಲಾಗಿಲ್ಲ. “ನಾವು ಸಹ ಏನು ಮಾಡಬೇಕೆಂದು ಕಾಯುತ್ತಿದ್ದೇವೆ. ಸರಕಾರ ಮಾಡುವ ಕೆಲಸ ಜನ ಸಾಮಾನ್ಯರಿಗೆ ಉಪಯೋಗವಾಗಬೇಕು. ಅದನ್ನು ತೋರಿಸಲು ರಾಜ್ಯ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅವರು ಮತ್ತೆ ಪ್ರಸ್ತಾಪವನೆ ನೀಡಿದರೆ ನಂತರ ಅನುಮತಿ ನೀಡಲಾಗುವುದು, ”ಎಂದು ರೂಪಿಂದರ್ ಹೇಳಿದ್ದಾರೆ.
ಸ್ವದೇಶ್ ದರ್ಶನ್ ಯೋಜನೆಯಲ್ಲಿಯೂ ಸಮಸ್ಯೆಗಳು ಕಂಡುಬಂದಿದ್ದು, ಪ್ರಸ್ತಾವನೆಗಳನ್ನು ಪರಿಶೀಲನೆಗಾಗಿ ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ರೂಪಿಂದರ್ ಇದೇ ವೇಳೆ ಹೇಳಿದ್ದಾರೆ.

ಕರ್ನಾಟಕ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಮಾತನಾಡಿ, “ಕರ್ನಾಟಕ ವಿಫಲವಾಗಿದೆ ಎಂದು ಹೇಳಬಾರದಿತ್ತು. ಬದಲಾಗಿ, ಕೆಲವು ತಾಂತ್ರಿಕ ದೋಷಗಳಿವೆ ಎಂದು ಹೇಳಬೇಕಾಗಿತ್ತು, ಕೆಲ ತಾಂತ್ರಿಕ ಸಮಸ್ಯೆಗಳಿಂದ ರಾಜ್ಯಕ್ಕೆ ಯಾವುದೇ ಯೋಜನೆ ಸಿಕ್ಕಿಲ್ಲ ಎಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಡೊನರ್ ಖಾತೆ ಸಚಿವ ಜಿ ಕಿಶನ್ ರೆಡ್ಡಿ, ಭಾರತದಲ್ಲಿ ಪ್ರವಾಸೋದ್ಯಮವನ್ನು ಪುನರುಜ್ಜೀವನಗೊಳಿಸಲು, ನಾವು ಪ್ರವಾಸಿಗರಿಗೆ ಮೊದಲು ಬಂದ ಆಧಾರದ ಮೇಲೆ ಐದು ಲಕ್ಷ ಉಚಿತ ವೀಸಾಗಳನ್ನು ನೀಡುತ್ತೇವೆಂದು ಹೇಳಿದ್ದಾರೆ.
169 ದೇಶಗಳಿಗೆ ವೀಸಾ ವಿಸ್ತರಣೆ ಮಾಡುವ ಕುರಿತು ಸಹ ಪರಿಶೀಲಿಸಲಾಗುತ್ತಿದೆ. ಭಾರತಕ್ಕೆ ಗರಿಷ್ಠ ಪ್ರವಾಸಿಗರು ಬರುವ ವಿವಿಧ ದೇಶಗಳಲ್ಲಿ 20 ಮಿಷನ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ ಎಂದು ಅವರು ಹೇಳಿದರು. ಪ್ರವಾಸೋದ್ಯಮ, ವಿದೇಶಾಂಗ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ಸಾಂಸ್ಕೃತಿಕ, ಗೃಹ ಮತ್ತು ರಕ್ಷಣಾ ಸಚಿವಾಲಯದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಮೊದಲ ಹಂತದಲ್ಲಿ 20 ದೇಶಗಳನ್ನು ಪಟ್ಟಿ ಮಾಡಲಾಗಿದೆ. ಪ್ರವಾಸಿ ತಾಣಗಳನ್ನು ಉತ್ತೇಜಿಸಲು ಮತ್ತು ಬೃಹತ್ ಪ್ರವಾಸಿಗರನ್ನು ಸೆಳೆಯಲು ಸಹಾಯ ಮಾಡುವ ಹಿರಿಯ ಅಧಿಕಾರಿಗಳನ್ನು ರಾಯಭಾರ ಕಚೇರಿಗಳಲ್ಲಿ ನೇಮಿಸಲಾಗುತ್ತಿದೆ, ”ಎಂದು ಅವರು ಹೇಳಿದ್ದಾರೆ.
ಪ್ರವಾಸೋದ್ಯಮ ನೀತಿಯನ್ನು ಸಹ ಅಂತಿಮಗೊಳಿಸಲಾಗುತ್ತಿದೆ ಮತ್ತು ಎಲ್ಲಾ ರಾಜ್ಯಗಳಿಂದ ಪ್ರತಿಕ್ರಿಯೆಯನ್ನು ಪಡೆಯಲಾಗುತ್ತಿದೆ ಎಂದು ರೆಡ್ಡಿ ಹೇಳಿದರು. ಇದರ ಅಡಿಯಲ್ಲಿ, ರಾಜ್ಯಗಳು ಮತ್ತು ಪ್ರವಾಸಿ ಮಾರ್ಗದರ್ಶಿಗಳಿಗೆ ಆರ್ಥಿಕ ನೆರವು ನೀಡಲಾಗುವುದು. ಇದೇ ವೇಳೆ ಲಸಿಕೆ ಕುರಿತು ಮಾತನಾಡಿ, “ಲಸಿಕೆ ಇಲ್ಲದೇ ಹೋಗಿದ್ದರೆ, ಪ್ರವಾಸೋದ್ಯಮ ಉಳಿಯಲು ಸಾಧ್ಯವಾಗುತ್ತಿರಲಿಲ್ಲ. ಒಮ್ಮೆ ಕೋವಿಡ್-19 ಕಡಿಮೆಯಾದರೆ, ವಿಮಾನಯಾನ ಸಂಪರ್ಕ ಕೂಡ ಸುಧಾರಿಸುತ್ತದೆ ಎಂದು ಹೇಳಿದ್ದಾರೆ .

ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಕೇಂದ್ರ ಸರಕಾರ ಮತ್ತು ದಕ್ಷಿಣ ಭಾರತ ರಾಜ್ಯಗಳ ನಡುವೆ ಎರಡು ದಿನಗಳ ಸಭೆ ಗುರುವಾರ ಆರಂಭವಾಗಿದ್ದು, ಈ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಕೆಲವು ವಿಚಾರಗಳ ಸಂಬಂಧ ತಿಕ್ಕಾಟ ನಡೆದಿದೆ.
ಸಾಂಸ್ಕೃತಿಕ ತಾಣಗಳೆಂದು ಕೇಂದ್ರ ಸಚಿವಾಲಯ ಘೋಷಿಸಿದ್ದ 19 ತಾಣಗಳಲ್ಲಿ ಹಂಪಿ ಕೂಡ ಒಂದಾಗಿದ್ದು, ಹೀಗಾಗಿ ಸಾಂಸ್ಕೃತಿಕ ಪ್ರವಾಸೋದ್ಯಮ ಯೋಜನೆಯಡಿಯಲ್ಲಿ ಹಂಪಿಯನ್ನು ಅಭಿವೃದ್ಧಿಪಡಿಸುವಂತೆ ಕೇಂದ್ರ ಪ್ರವಾಸೋದ್ಯಮ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.






