ಕರೋನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಾಗದ ಕಾರಣ, ಕರ್ನಾಟಕ ಶಿಕ್ಷಣ ಇಲಾಖೆಯು ʼವಿದ್ಯಾಗಮʼ ಕಾರ್ಯಕ್ರಮವನ್ನು ಪುನಃ ಆರಂಭಿಸುವ ಯೋಜನೆಯನ್ನು ರೂಪಿಸಿದೆ.
ಶಾಲೆಯ ಒಳಗೆ ಹಾಗೂ ಆವರಣಗಳಲ್ಲಿ ತರಗತಿ ನಡೆಸುವ ಬದಲಾಗಿ, ಶಿಕ್ಷಕರು ವಿದ್ಯಾರ್ಥಿಗಳನ್ನು ಸಣ್ಣ ಗುಂಪುಗಳಾಗಿ ಮಾಡಿ ಭೇಟಿಯಾಗಿ ಪಾಠ ಮಾಡುವ ಯೋಜನೆಯನ್ನು ಮತ್ತೆ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಮೂಲ ತಿಳಿಸಿವೆ.

ʼಎರಡು ಆಯ್ಕೆಗಳನ್ನು ಗಮನದಲ್ಲಿಟ್ಟಿದ್ದು, ಅದರಲ್ಲಿ ಒಂದಾದ ವಿದ್ಯಾಗಮ ಯೋಜನೆಯನ್ನು ಆಫ್ಲೈನ್ ಕ್ಲಾಸನ್ನು ಆರಂಭಿಸುವ ಸಾಧ್ಯತೆಯ ಪರಿಶೀಲನೆಯ ವರದಿಯನ್ನು ಸ್ವೀಕರಿಸಿದ ನಂತರ ಕಾರ್ಯಗತಗೊಳಿಸಲಾಗುವುದುʼ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ನಾವು ಈ ಬಾರಿಯ ವಿದ್ಯಾಗಮ ಕಾರ್ಯಕ್ರಮದಲ್ಲಿ ಕೆಲವು ಬದಲಾವಣೆಗಳನ್ನು ತರುತ್ತಿದ್ದೇವೆ. ಹೆಚ್ಚು ಪರಿಣಾಮಕಾರಿ ಮತ್ತು ಸುರಕ್ಷಿತ ರೀತಿಯಲ್ಲಿ ಕಾರ್ಯಗತಗೊಳಿಸಲು ಯೋಜನೆಯನ್ನು ರೂಪಿಸುತ್ತಿದ್ದೇವೆ. ಆಫ್ ಲೈನ್ ತರಗತಿಯನ್ನು ಪುನಾರಂಭಿಸಲು ಕುರಿತು ಆರೋಗ್ಯ ಇಲಾಖೆಯಿಂದ ಅನುಮತಿ ಸಿಗುತ್ತದೆ ಎಂಬ ಖಚಿತತೆ ಇಲ್ಲ. ಈ ಎಲ್ಲಾ ಅಂಶವನ್ನು ಗಮನದಲ್ಲಿಟ್ಟುಕೊಂಡು ವಿದ್ಯಾಗಮವನ್ನು ಪುನಾರಂಭಿಸಲು ಯೋಜನೆಯನ್ನು ರೂಪಿಸುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.

ʼಕಳೆದ ಬಾರಿ ಈ ಯೋಜನೆಯು ಕಾರ್ಯರೂಪದಲ್ಲಿದ್ದರೂ, ಕೆಲವು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಕೋವಿಡ್ ಗೆ ತುತ್ತಾದರು. ಈ ಕಾರಣದಿಂದ ಕಾರ್ಯಕ್ರಮದಿಂದ ಹಿಂದೆ ಸರಿಯಲಾಯಿತು. ಆದರೆ ಈ ಬಾರಿ ಇಂತಹ ಯಾವುದೇ ಘಟನೆಗಳಿಗೆ ಅವಕಾಶ ನೀಡಲು ನಾವು ಬಯಸುವುದಿಲ್ಲ. ಪಾಠ ಕಲಿಸಲು ಹೋಗುವ ಮೊದಲು ಎಲ್ಲಾ ಶಿಕ್ಷಕರಿಗೆ ಕೋವಿಡ್ ಲಸಿಕೆಯನ್ನು ಹಾಕಿಸುವ ತೀರ್ಮಾನವನ್ನು ಇಲಾಖೆ ಕೈಗೊಂಡಿದೆʼ ಎಂದು ವಿವರಿಸಿದ್ದಾರೆ.

ವಿದ್ಯಾಗಮ ಯೋಜನೆಯಡಿ ಮಾರ್ಗದರ್ಶಿ ಶಿಕ್ಷಕರು ಆಯಾ ವಾರ್ಡ್, ಓಣಿ, ಕೇರಿಗಳಿಗೆ ಹೋಗಿ ತರಗತಿ ವಿಧಗಳಂತೆ ಸಮುದಾಯ ಭವನ, ಧಾರ್ಮಿಕ ಸ್ಥಳ, ಸೂಕ್ತ ಮರದ ನೆರಳಿನಲ್ಲಿ ದೈಹಿಕ ಅಂತರದಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಒಂದೆಡೆ ಸೇರಿಸಬೇಕು ಹಾಗೂ ಕಲಿಕಾ ಚಟುವಟಿಕೆಗಳ ಪ್ರಗತಿಯನ್ನು ವೀಕ್ಷಣೆ ಮಾಡುವ ಮೂಲಕ ಮಕ್ಕಳಿಗೆ ತರಗತಿ ನಡೆಸಬೇಕು.