ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಕೋವಿಡ್ 19 ಎರಡನೇ ರೂಪಾಂತರಿ ವೈರಸ್ ಲಕ್ಷಾಂತರ ಜನರ ಬದುಕನ್ನೇ ಕಸಿದುಕೊಂಡಿದೆ. ಸರ್ಕಾರ ನೀಡುತ್ತಿರುವ ಸಾವಿನ ಲೆಕ್ಕಕ್ಕೂ ಸ್ಮಶಾನಗಳಲ್ಲಿ ಸಾಲಾಗಿ ಬರುತ್ತಿರುವ ಹೆಣಗಳ ಸಂಖ್ಯೆಗೂ ತಾಳೆ ಆಗುತ್ತಿಲ್ಲ. ಸಾವಿನ ನಿಖರ ಸಂಖ್ಯೆಗಳು ಯಾರಿಗೂ ಗೊತ್ತಿಲ್ಲ. ಮತ್ತೊಂದೆಡೆ ಕೋವಿಡ್ 19 ಲಸಿಕೆ ರೆಮ್ಡಿಸಿವಿರ್ ಕಾಳಸಂತೆಯಲ್ಲಿ 20 ರಿಂದ 25 ಸಾವಿರ ರೂಪಾಯಿಗಳ ಬೆಲೆಗೆ ಮಾರಾಟ ಆಗುತ್ತಿದೆ. ಈ ಲಸಿಕೆಯ ಮೂಲ ಬೆಲೆ ಕೇವಲ 3500 ರೂಪಾಯಿ ಮಾತ್ರ. ಕೋವಿಡ್ ಚಿಕಿತ್ಸೆಗಾಗಿ ಬಳಸಲ್ಪಡುವ ಔಷಧಗಳು , ಮಾತ್ರೆಗಳು, ಆಕ್ಸಿ ಮೀಟರ್ ಎಲ್ಲದರ ಬೆಲೆ ದುಪ್ಪಟ್ಟಾಗಿದೆ. ಸಾಮಾನ್ಯವಾಗಿ 700-800 ರೂಪಾಯಿಗಳಿಗೆ ಮಾರಾಟವಾಗುತಿದ್ದ ಆಕ್ಸಿಮೀಟರ್ ಬೆಲೆ ಇಂದು ಎರಡು –ಮೂರು ಸಾವಿರ ರೂಪಾಯಿಗಳವರೆಗೆ ಹೋಗಿದೆ.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ಯಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಹಿರಂಗಪಡಿಸಿದ ಬೆನ್ನಲ್ಲೇ ರಾಜ್ಯದಲ್ಲಿ ಪ್ರಾಣವಾಯು ಆಕ್ಸಿಜನ್ ಕಾಳ ಸಂತೆ ಕೂಡ ಬಯಲಾಗಿದೆ. ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಆಕ್ಸಿಜನ್ ಸಿಗದೆ ಕೆಲವು ಸೋಂಕಿತರು ಸಾವನ್ನಪ್ಪುತ್ತಿರುವ ಘಟನೆಗಳು ಕಣ್ಣಮುಂದೆಯೇ ನಡೆಯುತ್ತಿದ್ದರೂ ಕೆಲವರು ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಿ ಹಣ ಸಂಪಾದಿಸುವ ದಂಧೆಗಿಳಿದಿರುವುದು ದುರಂತವೇ ಸರಿ.
ಎರಡು ದಿನಗಳ ಹಿಂದೆ ಚಾಮರಾಜನಗರ ಜಿಲ್ಲೆಯಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ 12 ಆಕ್ಸಿಜನ್ ಸಿಲಿಂಡರ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದೀಗ ಮೈಸೂರಿನಲ್ಲಿಯೂ ಈ ದಂಧೆ ಜಿಗಿತುಕೊಂಡಿರುವುದು ಬೆಳಕಿಗೆ ಬಂದಿದ್ದು, ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಆಕ್ಸಿಜನ್ ಸಿಲಿಂಡರನ್ನು ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿ ಆಕ್ಸಿಜನ್ ಸಿಲಿಂಡರ್ ವಶಕ್ಕೆ ಪಡೆದುಕೊಂಡಿದ್ದಾರೆ.
ಮೈಸೂರಿನ ನಗರದ ವಿದ್ಯಾರಣ್ಯಪುರಂ ಠಾಣೆ ಪೊಲೀಸರು ನಂಜನಗೂಡು ತಾಲೂಕಿನ ಹೊಸಕೋಟೆ ಗ್ರಾಮದ ನಿವಾಸಿ ಮಧುಕುಮಾರ್ (37) ಎಂಬಾತನನ್ನು ಬಂಧಿಸಿದ್ದಾರೆ. ಈತ ಆಕ್ಸಿಜನ್ ಸಿಲಿಂಡರ್ ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ದಂಧೆಯಲ್ಲಿ ತೊಡಗಿಸಿಕೊಂಡಿದ್ದನು ಎಂದು ಆರೋಪಿಸಲಾಗಿದೆ. ಈಗಾಗಲೇ ಜಿಲ್ಲೆ ಸೇರಿದಂತೆ ಹಲವೆಡೆ ಆಕ್ಸಿಜನ್ ಸಿಲಿಂಡರ್ಗಳಿಗೆ ಬಹು ಬೇಡಿಕೆಯಿರುವುದನ್ನು ಅರಿತು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹೊಂಚು ಹಾಕುತ್ತಿದ್ದನು.
ಈ ಕುರಿತಂತೆ ಖಚಿತ ಮಾಹಿತಿ ಸಂಗ್ರಹಿಸಿದ ಮೈಸೂರು ನಗರ ಸಿಸಿಬಿ ಪೊಲೀಸರು ಹಾಗೂ ಔಷಧ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದು, ಜೆ. ಪಿ. ನಗರದ ಮೈಸೂರು-ನಂಜನಗೂಡು ಮುಖ್ಯ ರಸ್ತೆಯ ಹಾಗೂ ವರ್ತುಲ ರಸ್ತೆಯ ಜಂಕ್ಷನ್ ನಲ್ಲಿರುವ ಪೆಟ್ರೋಲ್ ಬಂಕ್ ಮುಂಭಾಗ ಮಾರಾಟ ಮಾಡಲು ಆಕ್ಸಿಜನ್ ತುಂಬಿದ್ದ ಜಂಬೊ (ಡಿ ಟೈಪ್) ಮೆಡಿಕಲ್ ಆಕ್ಸಿಜನ್ ಸಿಲಿಂಡರ್ ವಶಕ್ಕೆ ಪಡೆದುಕೊಂಡು, ಮಧುಕುಮಾರ್‌ನನ್ನು ಬಂಧಿಸಿದ್ದಾರೆ. ಆಕ್ಸಿಜನ್ ಸಿಲಿಂಡರ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಈ ಬಗ್ಗೆ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಕಲಬುರಗಿ: ಕರ್ನಾಟಕದಲ್ಲಿ ಕರೋನಾ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ಹಾಗೂ ಮರಣ ಪ್ರಮಾಣ ಎರಡೂ ಹೆಚ್ಚುತ್ತಿದ್ದು ಪರಿಸ್ಥಿತಿ ನಿಭಾಯಿಸಲು ಆರೋಗ್ಯ ವ್ಯವಸ್ಥೆ ಹೆಣಗಾಡುತ್ತಿದೆ. ರಾಜ್ಯದಲ್ಲಿ ಸಮರ್ಪಕ ಆಕ್ಸಿಜನ್ ಪೂರೈಕೆ ಇಲ್ಲದೆ ಅನೇಕ ಸೋಂಕಿತರು ಕೊನೆಯುಸಿರೆಳೆದಿದ್ದಾರೆ. ಆದರೆ, ಈ ಸಂದರ್ಭವನ್ನೇ ಬಂಡವಾಳ ಮಾಡಿಕೊಂಡ ಕೆಲವರು ಲಾಭ ಮಾಡುವ ಸಲುವಾಗಿ ಅಕ್ರಮ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ.
ಬುಧವಾರ ಇದೇ ತರದ ಇನ್ನೊಂದು ಅಕ್ರಮ ಕಲಬುರಗಿಯಲ್ಲಿ ಬಯಲಾಗಿದ್ದು, ರಾಜ್ಯಕ್ಕೆ ಪೂರೈಸಬೇಕಾದ ಆಕ್ಸಿಜನ್ ಸಿಲಿಂಡರ್ಗಳನ್ನು ಮಹಾರಾಷ್ಟ್ರ, ತೆಲಂಗಾಣಕ್ಕೆ ಕದ್ದು ಮಾರುತ್ತಿದ್ದ ಆಕ್ಸಿಜನ್ ಇಂಡಸ್ಟ್ರಿ ಮೇಲೆ ಕಲಬುರಗಿ ಜಿಲ್ಲಾಡಳಿತ ನಿನ್ನೆ ತಡರಾತ್ರಿ ದಾಳಿ ನಡೆಸಿದೆ. ಕಲಬುರಗಿಯ ನಂದೂರು ಕೈಗಾರಿಕಾ ಪ್ರದೇಶದಲ್ಲಿರುವ ವಿಜಯ ಆಕ್ಸಿಜನ್ ಇಂಡಸ್ಟ್ರಿ ಘಟಕದಿಂದ ನೆರೆಯ ಮಹಾರಾಷ್ಟ್ರ, ತೆಲಂಗಾಣಕ್ಕೆ ಅಕ್ರಮವಾಗಿ ವೈದ್ಯಕೀಯ ಆಮ್ಲಜನಕ ಪೂರೈಕೆಯಾಗುತ್ತಿದೆ ಎಂಬ ದೂರು ಜಿಲ್ಲಾಡಳಿತಕ್ಕೆ ಬಂದಿತ್ತು. ಆ ಮಾಹಿತಿಯನ್ನು ಆಧರಿಸಿ ಅಖಾಡಕ್ಕೆ ಇಳಿದ ಜಿಲ್ಲಾಡಳಿತ ನಿನ್ನೆ ರಾತ್ರಿ ವಿಜಯ ಆಕ್ಸಿಜನ್ ಇಂಡಸ್ಟ್ರಿ ಮೇಲೆ ದಾಳಿ ನಡೆಸಿದೆ. ಕದ್ದು ಮುಚ್ಚಿ ಕಾಳ ಸಂತೆಯಲ್ಲಿ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡುತ್ತಿದ್ದ ಕಾರಣಕ್ಕೆ ಇಂಡಸ್ಟ್ರಿಯನ್ನು ವಶಕ್ಕೆ ಪಡೆದಿದೆ. ಎಸಿ ರಾಮಚಂದ್ರ ಗಡದೆ ಅವರ ಸಮ್ಮುಖದಲ್ಲಿ ನಡೆದ ಈ ದಾಳಿಯಿಂದಾಗಿ ಅಕ್ರಮ ಬಯಲಿಗೆ ಬಂದಿದೆ.
ಇಡೀ ದೇಶಾದ್ಯಂತ ಆಕ್ಸಿಜನ್ ಉತ್ಪಾದನಾ ಘಟಕಗಳಲ್ಲಿ ಆಗುವ ಒಟ್ಟು ಉತ್ಪಾದನೆಯನ್ನು ಸರ್ಕಾರದ ಆದೇಶದ ಮೇರೆಗೇ ವಿವಿಧ ಆಸ್ಪತ್ರೆಗಳಿಗೆ ವಿತರಿಸಲಾಗುತ್ತಿದೆ. ಆದರೆ ಕೆಲವೆಡೆ ಆಕ್ಸಿಜನ್ ಪ್ಲಾಂಟ್ ಗಳ ಮಾಲೀಕರು ,ಸಿಬ್ಬಂದಿಗಳು ಉತ್ಪಾದನೆ ಹೆಚ್ಚಿಸಿ ಕಣ್ತಪ್ಪಿಸಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನು ಕಟ್ಟುನಿಟ್ಟಾಗಿ ತಡೆಯಲು ಸರ್ಕಾರ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಯಾಕೆಂದರೆ ಈ ಸಂದಿಗ್ಧ ಸಮಯದಲ್ಲೂ ಅಮಾಯಕರ ಪ್ರಾಣಗಳ ಜೊತೆ ಚೆಲ್ಲಾಟವಾಡಿ ಜೇಬು ಭರ್ತಿ ಮಾಡಿಕೊಂಡು ಅವರ ಹೆಣಗಳ ಮೇಲೆ ಅರಮನೆ ನಿರ್ಮಿಸಲು ಹೊರಟಿರುವ ದುಷ್ಕರ್ಮಿಗಳು ಸಮಾಜ ದ್ರೋಹಿಗಳಾಗಿದ್ದು ಇವರ ಹೆಡೆಮುರಿ ಕಟ್ಟಿದರಷ್ಟೆ ಜನರು ನೆಮ್ಮದಿಯಾಗಿ ಬದುಕಬಹುದು.