ನವದೆಹಲಿ : ಮೇ.16: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭರ್ಜರಿ ಬಹುಮತ ಪಡೆದಿದೆ. ಇದೀಗ ಸಿಎಂ ಸ್ಥಾನ ಆಯ್ಕೆ ಕಸರತ್ತು ದೆಹಲಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆಯುತ್ತಿದೆ. ಈಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕೂಡ ಖರ್ಗೆ ನಿವಾಸಕ್ಕೆ ಆಗಮಿಸಿದ್ದಾರೆ.


ಸಿಎಂ ಆಯ್ಕೆ ಬಗ್ಗೆ ಚರ್ಚೆ ನಡೆಸಲು ಕಾಂಗ್ರೆಸ್ ಹೈಕಮಾಂಡ್ ಕರೆ ಮೇರೆಗೆ ಇಂದು ಡಿ.ಕೆ ಶಿವಕುಮಾರ್ ದೆಹಲಿಗೆ ಆಗಮಿಸಿದ್ದಾರೆ. ಕರ್ನಾಟಕ ಸಿಎಂ ಸ್ಥಾನದ ತೀವ್ರ ಪೈಪೋಟಿಯ ಮಧ್ಯೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದರು. ಈ ವೇಳೆ ದಕ್ಷಿಣದ ರಾಜ್ಯದಲ್ಲಿ ಸರ್ಕಾರ ರಚನೆಯ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿದ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮುಖ್ಯಸ್ಥರೊಂದಿಗೆ ಗುಪ್ತವಾಗಿ ಸಭೆ ನಡೆಸಿದರು.

