ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಯ್ಕೆ ವಿಚಾರ ಕಾಂಗ್ರೆಸ್ ಹೈಕಮಾಂಡ್‌ಗೆ ಭಾರೀ ಕಗ್ಗಂಟಾಗೇ ಪರಿಣಮಿಸಿದೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಇವರಿಬ್ಬರಲ್ಲಿ ಸಿಎಂ ಯಾರೆಂದು ಅಂತಿಮವಾಗಿ ಘೋಷಣೆ ಮಾಡುವ ಸಾಧ್ಯತೆಯಿದೆ.
ತರಾತುರಿಯಲ್ಲಿ ಸಿಎಂ ಆಯ್ಕೆ ಅಸಾಧ್ಯ ; ಇನ್ನು 48 ಗಂಟೆಗಳಲ್ಲಿ ಫೈನಲ್

ಕರ್ನಾಟಕದ ಸಿಎಂ ಆಯ್ಕೆ ವಿಚಾರದಲ್ಲಿ ತರಾತುರಿಯ ನಿರ್ಣಯವನ್ನು ಕಾಂಗ್ರೆಸ್ ವರಿಷ್ಠರು ತೆಗೆದುಕೊಳ್ಳುವುದಿಲ್ಲ. ಎಲ್ಲರೊಡನೆ ಮತ್ತೊಮ್ಮೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಣಯ ಪ್ರಕಟಿಸಲಿದ್ದಾರೆ. ಹೀಗಾಗಿ ಸಿಎಂ ಯಾರು ಎಂಬುದನ್ನು ಘೋಷಣೆ ಮಾಡಲು ಇನ್ನೂ 48 ಗಂಟೆ (ಎರಡು ದಿನ) ಆಗಬಹುದು ಎಂದು ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳು ತಿಳಿಸಿವೆ.






