ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ನಿಗಾಗಿ 2500 ರೂ. ಮುಖಬೆಲೆಯ ಸೀರೆ ಖರೀದಿಸಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸರಸ್ ಮೇಳದಲ್ಲಿ ಬೊಮ್ಮಾಯಿ ಸೀರೆ ಖರೀದಿಸುವ ಮೂಲಕ ಮಹಿಳೆಯರನ್ನು ಹುರಿದುಂಬಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಆಯೋಜಿಸಿದ್ದ ಸಂಜೀವಿನಿ ಸರಸ್ ಮೇಳವನ್ನು ಉದ್ಘಾಟಿಸಿದರು. ರಾಜ್ಯ ಮತ್ತು ದೇಶದ ಹಲವಾರು ರಾಜ್ಯಗಳಲ್ಲಿನ ಸ್ವಸಹಾಯ ಗುಂಪುಗಳ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶನಕ್ಕಿರಿಸಲಾಗಿದೆ.
ಸಮಾರಂಭದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಅಶ್ವತ್ಥ ನಾರಾಯಣ, ಜವಳಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ, ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ, ಶಾಸಕ ರವಿಸುಬ್ರಹ್ಮಣ್ಯ, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ಕೌಶಲ್ಯ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ, ಸೆಲ್ವಕುಮಾರ, ಚಿತ್ರ ನಟಿಯರಾದ ಸೋನುಗೌಡ, ಲಕ್ಮೀ ಗೋಪಾಲಸ್ವಾಮಿ ಮತ್ತು ಇತರರು ಉಪಸ್ಥಿತರಿದ್ದರು.