ಬೆಂಗಳೂರು: ದೆಹಲಿ ಪ್ರತಿಭಟನೆಯಿಂದ ಮೂಂದೂಡಲ್ಪಟ್ಟಿದ್ದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದ್ದು, ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ಚರ್ಚೆಗಳು ಪೂರ್ಣಗೊಂಡಿದೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸಚಿವ ಸಂಪುಟ ವಿಸ್ತರಣೆ ಕುರಿತು ಕಾಂಗ್ರೆಸ್ ಹೈಕಮಾಂಡ್‌ನೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಭಾಗವಹಿಸಿ, ರಾಜ್ಯ ನಾಯಕರಿಂದ ಸಲ್ಲಿಸಲಾದ ಸಚಿವ ಸ್ಥಾನ ಆಕಾಂಕ್ಷಿಗಳ ಪಟ್ಟಿಯನ್ನು ಪರಿಶೀಲಿಸಿದ್ದಾರೆ. ವಿವಿಧ ಪ್ರಾದೇಶಿಕ, ಸಾಮಾಜಿಕ ಹಾಗೂ ರಾಜಕೀಯ ಸಮತೋಲನದ ಆಧಾರದ ಮೇಲೆ ಹೆಸರುಗಳ ಬಗ್ಗೆ ಚರ್ಚೆ ನಡೆದಿರುವುದಾಗಿ ತಿಳಿದುಬಂದಿದೆ.

ಅಂತಿಮ ಪಟ್ಟಿಗೆ ಹೈಕಮಾಂಡ್ ಅನುಮೋದನೆ ದೊರೆತ ಬಳಿಕ ಆಗಸ್ಟ್ 3ರಂದು ರಾಜಭವನದಲ್ಲಿ ರಾಜ್ಯಪಾಲರ ಸಮ್ಮುಖದಲ್ಲಿ ನೂತನ ಸಚಿವರ ಪ್ರಮಾಣವಚನ ಸಮಾರಂಭ ನಡೆಯುವ ನಿರೀಕ್ಷೆಯಿದ್ದು, ಅದಕ್ಕೂ ಮುನ್ನ ಆಗಸ್ಟ್ 2ರಂದು ಸಚಿವರ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಯಾವ ಶಾಸಕರಿಗೆ ಅವಕಾಶ ಸಿಗಲಿದೆ ಎಂಬ ಕುತೂಹಲ ಆಡಳಿತ ಪಕ್ಷದಲ್ಲಷ್ಟೇ ಅಲ್ಲದೇ ರಾಜ್ಯ ರಾಜಕೀಯ ವಲಯದಲ್ಲೂ ಹೆಚ್ಚಾಗಿದೆ. ಪ್ರಾದೇಶಿಕತೆ ಹಾಗೂ ಪಕ್ಷದ ಸಂಘಟನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಸಚಿವ ಸ್ಥಾನಗಳನ್ನು ಹಂಚಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ, ಸಚಿವರ ಅಂತಿಮ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಅಧಿಕೃತವಾಗಿ ಪ್ರಕಟಿಸಿದ ಬಳಿಕವೇ ಸಚಿವರ ಹೆಸರುಗಳು ಸ್ಪಷ್ಟವಾಗಲಿವೆ.







